
ಯಳಂದೂರು: ತಾಲ್ಲೂಕಿನ ಅಗರ-ಮಾಂಬಳ್ಳಿ ಗ್ರಾಮದ ಹಿಂಡಿ ಮಾರಮ್ಮ ದೀಪಾವಳಿ ಕೊಂಡೋತ್ಸವ ಗುರುವಾರ ಅಪಾರ ಭಕ್ತರ ಜಯಘೋಷಣಗಳ ನಡುವೆ ಅದ್ಧೂರಿಯಾಗಿ ಜರುಗಿತು.
ಮೋಡ ಮುಸುಕಿದ ತಂಪು ವಾತಾವರಣದಲ್ಲಿ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಹರಡಲಾಗಿದ್ದ ನಿಗಿನಿಗಿ ಕೆಂಡವನ್ನು ಭಕ್ತರು ಹಾಯ್ದರು. ಕೆಲವೇ ಕ್ಷಣಗಳಲ್ಲಿ ಸತ್ತಿಗೆ ಸೂರಿಪಾನಿ ಕೊಂಬು ಕಹಳೆ ಸದ್ದಿನ ಜತೆ, ಸರ್ವಾಲಂಕೃತ ಹಿಂಡಿ ಮಾರಮ್ಮ ಉತ್ಸವಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸಲಾಯಿತು. ಕೊಂಡದ ಕುಳಿ ಸ್ಪರ್ಶಿಸಿದಾಗ ಭಕ್ತರು ‘ಉಘೇ ಮಾರಮ್ಮ’ ಉದ್ಘೋಷ ಮೊಳಗಿಸಿದರು.
ವಿವಿಧೆಡೆಗಳಿಂದ ಬಂದಿದ್ದ ಭಕ್ತರು ರಸ್ತೆಯುದ್ದಕ್ಕೂ ನಿಂತು ದೇವಿಗೆ ನಮನ ಸಲ್ಲಿಸಿದರು. ಕೆಲವರು ಮನೆಮಾಡುಗಳನ್ನು ಹತ್ತಿ ಉತ್ಸವ ಕಣ್ತುಂಬಿಕೊಂಡರು. ಕೊಂಡದ ಬಳಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಮತ್ತು ಮಕ್ಕಳು ದೇವಿಗೆ ಊದಿನಕಡ್ಡಿ ಹಚ್ಚಿ, ಕರ್ಪೂರ ಬೆಳಗಿದರು. ಕೊಂಡದ ಭಸ್ಮವನ್ನು ಹಣೆಗೆ ಬಳಿದುಕೊಂಡು, ಮಾರಮ್ಮನನ್ನು ಪ್ರಾರ್ಥಿಸಿದರು.
ನಸುಕಿನಿಂದಲೇ ದೇವಾಲಯದಲ್ಲಿ ಪೂಜಾ ವಿಧಿಗಳು ನೆರವೇರಿದವು. ಸಪ್ತಮಾತೃಕೆಯರ ಜೊತೆಗೆ ಮಾರಮ್ಮನ ವಿಗ್ರಹಕ್ಕೆ ಚೆಂಡು ಹೂವು, ಬೇವಿನ ಸೊಪ್ಪಿನ ಮಾಲೆಯ ಅಲಂಕಾರ ಮಾಡಿ, ಆಭರಣಗಳಿಂದ ಸಿಂಗರಿಸಲಾಯಿತು. ದೇವಿಯನ್ನು ಪ್ರತಿಷ್ಠಾಪಿಸುವ ಪಲ್ಲಕ್ಕಿ ಜೊತೆಗೆ ದೇವರ ಸತ್ತಿಗೆ, ಸೂರಿಪಾನಿಗಳಿಗೂ ಹೂವಿನ ಹಾರಗಳಿಂದ ಅಲಂಕಾರ ಮಾಡಲಾಗಿತ್ತು. ಪುರ ಪ್ರಮುಖರು ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಪೂಜೆಯಲ್ಲಿ ಭಾಗಿಯಾಗಿದ್ದರು.
ಹರಕೆ ಹೊತ್ತ ಭಕ್ತರು ಹಳದಿ ವಸ್ತ್ರ ಹೂವು ಧರಿಸಿ, ಅರಿಸಿನ ಚಂದನ ಲೇಪಿಸಿಕೊಂಡು ಬಾಯಿಗೆ ಬೀಗ ಹಾಕಿ ಹರಕೆ ತೀರಿಸಿದರು. ಸಂಬಂಧಿಕರು ಕಬ್ಬಿಣದ ಸನಿಕೆ ಚುಚ್ಚುವಾಗ ನೆರವಾದರು. ನವ ದುರ್ಗೆಯರನ್ನು ಸ್ಮರಿಸಿ, ವ್ರತಾಚರಣೆ ಪೂರ್ಣಗೊಳಿಸಿ ಕೊಂಡೋತ್ಸವದತ್ತ ಸಾಗಿದರು.
ಸ್ಥಳೀಯರು ರಾತ್ರಿ ಗುಡಿಗೆ ಭೇಟಿನೀಡಿ ನೀಲಾಂಜನ ದೀಪ ಬೆಳಗಿ ಹರಕೆ ಒಪ್ಪಿಸಿದರು. ಭಕ್ತಿಯಿಂದ ಫಲ–ಪುಷ್ಪ ಸಲ್ಲಿಸಿ, ಎಳನೀರು ಅಭಿಷೇಕ ಮಾಡಿ ಪ್ರೋಕ್ಷಿಸಿಕೊಂಡರು. ಮಹಿಳೆಯರು ತಂಪಿನಾರತಿ ಬೆಳಗಿದರು. ರಾತ್ರಿಪೂರ ಸಾಗಿದ ಮೆರವಣಿಗೆಯಲ್ಲಿ ಗ್ರಾಮಸ್ಥರು ಜನಪದ ಕುಣಿತಗಳಲ್ಲಿ ಪಾಲ್ಗೊಂಡರು. ಶುಕ್ರವಾರ ದೂಳ್ ಉತ್ಸವದೊಂದಿಗೆ ಹಬ್ಬ ಸಂಪನ್ನಗೊಳ್ಳಲಿದೆ.
ಹಬ್ಬದ ಪ್ರಯುಕ್ತ ಯಳಂದೂರು-ಕೊಳ್ಳೇಗಾಲ ರಸ್ತೆಯಲ್ಲಿ ಕೆಲ ಸಮಯ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಅಗರ ಠಾಣೆಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.