ADVERTISEMENT

ಬೇಡಿಕೆ ಕೊರತೆ: ಹೂ ಬೆಲೆ ಕುಸಿತ

ಕೆಲ ತರಕಾರಿ, ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ; ಮೊಟ್ಟೆ ಇಳಿಕೆ, ಮಾಂಸ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 7:10 IST
Last Updated 10 ಸೆಪ್ಟೆಂಬರ್ 2019, 7:10 IST
ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿರುವ ತರಕಾರಿಗಳು
ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿರುವ ತರಕಾರಿಗಳು   

ಚಾಮರಾಜನಗರ: ಗೌರಿ–ಗಣೇಶ ಹಬ್ಬದ ಬಳಿಕ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೂವುಗಳ ಬೆಲೆ ಇಳಿಕೆಯಾಗಿದೆ.ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಮೊಟ್ಟೆ ಬೆಲೆ ಕೊಂಚ ಏರಿಕೆಯಾಗಿದೆ. ಮಾಂಸದ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಹಬ್ಬದ ಸಂದರ್ಭದಲ್ಲಿ ಹೂವು ಹಾಗೂ ತರಕಾರಿಗಳ ಬೆಲೆ ಏರಿಕೆ ಕಂಡಿತ್ತು. ಈಗ ಸ್ವಲ್ಪ ಅಗ್ಗವಾಗಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಿದೆ.

ತರಕಾರಿಗಳ ಪೈಕಿ ಕೆಜಿ ಕ್ಯಾರೆಟ್‌, ಹಸಿಮೆಣಸಿನ ಕಾಯಿ ಬೆಲೆ ₹ 10, ಚಪ್ಪರದ ಬದನೆಕಾಯಿ, ಬೀಟ್‌ರೂಟ್‌₹ 5 ಕಡಿಮೆಯಾಗಿದೆ. ಕಳೆದ ವಾರ ಬೆಳ್ಳುಳ್ಳಿ₹ 80 ಇತ್ತು. ಈ ವಾರ₹ 70 ಇದೆ.

ADVERTISEMENT

ಶುಂಠಿಯ ಬೆಲೆ ₹ 120ರ ವರೆಗೆ ಇತ್ತು. ಸೋಮವಾರ ₹ 100ಕ್ಕೆ ಮಾರಾಟವಾಗುತ್ತಿತ್ತು. ಉಳಿದಂತೆ ಎಲ್ಲ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಗುಂಡ್ಲುಪೇಟೆಯಲ್ಲಿ ಬೇಡಿಕೆ: ಓಣಂ ಹಬ್ಬದ ಅಂಗವಾಗಿ ಗುಂಡ್ಲುಪೇಟೆ ಭಾಗದಲ್ಲಿ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಆದರೆ, ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೇರಳದ ವ್ಯಾಪಾರಿಗಳು ಗುಂಡ್ಲುಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶ, ಎಪಿಎಂಸಿ ಮಾರುಕಟ್ಟೆಗಳಿಂದ ಕಾಯಿಪಲ್ಲೆಗಳನ್ನು ಖರೀದಿಸುತ್ತಿದ್ದಾರೆ.

‘ಕೇರಳದವರು ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುತ್ತಾರೆ. ಹೀಗಾಗಿ, ಹಾಪ್‌ಕಾಮ್ಸ್‌ನಲ್ಲಿ ಬೆಲೆ ಏರಿಕೆ ಕಂಡು ಬರುವುದಿಲ್ಲ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಹೇಶ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಹೂವುಗಳ ಪೈಕಿ ಚೆಂಡು ಹೂ ₹ 5–₹ 10 (ಓಣಂಗೆ₹ 20–₹ 25), ಕನಕಾಂಬರ₹ 1,000, ಸುಗಂಧರಾಜ ಹಾರ₹ 50, ಮಲ್ಲಿಗೆ₹ 140, ಗುಲಾಬಿ₹ 120, ಕಾಕಡ₹ 80ಕ್ಕೆ ಮಾರಾಟವಾಗುತ್ತಿದೆ.

ಹೆಚ್ಚಿನ ಬೇಡಿಕೆ ಇಲ್ಲದಿರುವುದರಿಂದ ದರವೂ ಕಡಿಮೆಯಾಗಿದೆ.

‘ಓಣಂ ಅನ್ನು ಗಮನದಲ್ಲಿರಿಸಿ ಕೊಂಡು ಜಿಲ್ಲೆಯ ಗುಂಡ್ಲುಪೇಟೆ ಭಾಗದಲ್ಲಿ ಬಹುತೇಕ ರೈತರು ಚೆಂಡು ಹೂ ಬೆಳೆದಿದ್ದಾರೆ. ಕೇರಳದವರು ನೇರವಾಗಿ ರೈತರಿಂದಲೇ ಚೆಂಡು ಹೂವು ಖರೀದಿ ಮಾಡುತ್ತಾರೆ. ಹಾಗಾಗಿ, ಜಿಲ್ಲಾ ಕೇಂದ್ರದಲ್ಲಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲವಾಗಿದೆ.

ಹಬ್ಬ, ಪೂಜಾ ಕಾರ್ಯಕ್ರಮಗಳಿಗೆ ಮಾತ್ರ ಬಳಕೆ ಮಾಡುವುದರಿಂದ ವಿಶೇಷ ದಿನಗಳ ಹಿಂದಿನ ದಿನ ಬೆಲೆ ತುಸು ಏರಿಕೆಯಾಗುತ್ತದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಕೃಷ್ಣ ಹೇಳುತ್ತಾರೆ.

ಹಣ್ಣುಗಳ ಪೈಕಿ ಕಲ್ಲಂಗಡಿ,ಪಚ್ಚೆ ಬಾಳೆ ₹ 5, ಅನಾನಸು₹ 10 ಕಡಿಮೆಯಾಗಿದೆ. ಉಳಿದ ಹಣ್ಣುಗಳ ದರದಲ್ಲಿ ವ್ಯತ್ಯಾಸವಾಗಿಲ್ಲ.

ಮೊಟ್ಟೆ ಧಾರಣೆ ಮೂರು ದಿನಗಳಿಗೊಮ್ಮೆ ಬದಲಾಗುತ್ತದೆ.ಕಳೆದ ವಾರ₹ 335 ಇದ್ದ ಬೆಲೆ ಈ ವಾರ₹ 353ಬೆಲೆ ಇದೆ.

ಮಾಂಸ ಮಾರುಕಟ್ಟೆಯಲ್ಲಿ ಮೀನು, ಚಿಕನ್‌, ಮಟನ್‌ ದರಗಳಲ್ಲಿ ಬದಲಾವಣೆಯಾಗಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.