ADVERTISEMENT

ಮಾಸ್ಕ್‌ ದಿನ: ಚಾಮರಾಜನಗರದಲ್ಲಿ ಪಾದಯಾತ್ರೆ ಮಾಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 15:18 IST
Last Updated 18 ಜೂನ್ 2020, 15:18 IST
ಮಾಸ್ಕ್‌ ದಿನದ ಅಂಗವಾಗಿ ನಡೆದ ಆರೋಗ್ಯ ಜಾಗೃತಿ ಪಾದಯಾತ್ರೆಯಲ್ಲಿ ಅಧಿಕಾರಿಗಳು ಪಾಲ್ಗೊಂಡರು
ಮಾಸ್ಕ್‌ ದಿನದ ಅಂಗವಾಗಿ ನಡೆದ ಆರೋಗ್ಯ ಜಾಗೃತಿ ಪಾದಯಾತ್ರೆಯಲ್ಲಿ ಅಧಿಕಾರಿಗಳು ಪಾಲ್ಗೊಂಡರು   

ಚಾಮರಾಜನಗರ: ಕೋವಿಡ್-19 ತಡೆಗಾಗಿ ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಗುರುವಾರ ನಗರದಲ್ಲಿ ಮಾಸ್ಕ್‌ ದಿನ ಆಚರಿಸಲಾಯಿತು.

ಇದರ ಅಂಗವಾಗಿ ನಗರದ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಜಿಲ್ಲಾಡಳಿತ ಭವನದವರೆಗೆ ಆರೋಗ್ಯ ಜಾಗೃತಿ ಪಾದಯಾತ್ರೆ ನಡೆಯಿತು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪಾದಯಾತ್ರೆಗೆ ಚಾಲನೆ ನೀಡಿದರು.ಕೋವಿಡ್-19 ತಡೆಗೆ ಪಾಲಿಸಬೇಕಾದ ಮುಂಜಾಗರೂಕತಾ ಕ್ರಮಗಳ ಬರಹಗಳಿದ್ದ ಭಿತ್ತಿಪತ್ರ ಹಿಡಿದು ಅಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಜಿಲ್ಲಾಡಳಿತ ಭವನದವರೆಗೆ ಹೆಜ್ಜೆ ಹಾಕಿದರು.

ADVERTISEMENT

ಜನರು ಮುಖಗವಸು ಧರಿಸುವುದು, ಆಗಿಂದಾಗ್ಗೆ ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಅಂತರ ಕಾಪಾಡಿಕೊಳ್ಳಬೇಕಾದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಜಿಲ್ಲಾಡಳಿತ ಭವನದ ಬಳಿ ಮಾತನಾಡಿದ ಶಾಸಕ ಸಿ.ಎಸ್. ನಿರಂಜನಕುಮಾರ್‌ ಅವರು, ‘ಕೋವಿಡ್-19 ಹರಡುವಿಕೆ ತಡೆಗಟ್ಟಲು ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರವನ್ನು ಕಾಯ್ದುಕೊಳ್ಳಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಬಿ. ಹದ್ದಣ್ಣವರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ, ತಹಶೀಲ್ದಾರ್ ಜೆ.ಮಹೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.