ADVERTISEMENT

10 ಸಾವಿರ ಪ್ರಕರಣ ಇತ್ಯರ್ಥ ಗುರಿ:ಭಾರತಿ

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ 12ಕ್ಕೆ ಮೆಗಾ ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 15:15 IST
Last Updated 8 ನವೆಂಬರ್ 2022, 15:15 IST
ಬಿ.ಎಸ್‌.ಭಾರತಿ
ಬಿ.ಎಸ್‌.ಭಾರತಿ   

ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇದೇ 12ಂದು ಲೋಕ ಅದಾಲತ್‌ ಹಮ್ಮಿಕೊಂಡಿದ್ದು, 10 ಸಾವಿರದಷ್ಟು ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಗುರಿ ಹೊಂದಿದೆ.

ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಅದಾಲತ್‌ ಹಮ್ಮಿಕೊಳ್ಳಲಾಗಿದೆ. ಕಳೆದ ಅದಾಲತ್‌ನಲ್ಲಿ 9,293 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿತ್ತು. ವಕೀಲರು, ಪೊಲೀಸರು, ವಿವಿಧ ಇಲಾಖೆಗಳು, ಮಾಧ್ಯಮವರು ಸಹಕಾರ ನೀಡಿದ್ದರು. ಈ ಬಾರಿಯ ಅದಾಲತ್‌ನಲ್ಲಿ 10 ಸಾವಿರ ಪ‍್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ’ ಎಂದರು.

‘ಜಿಲ್ಲೆಯ ನ್ಯಾಯಾಲಯಗಳಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಎರಡೂ ಪಕ್ಷಗಾರರು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಲು ಮನಸ್ಸು ಮಾಡಿದರೆ ಅದಾಲತ್‌ನಲ್ಲಿ ಭಾಗವಹಿಸಬಹುದು’ ಎಂದರು.

‘ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಬಿಟ್ಟು ಇತರೆ ಯಾವುದೇ ಸಿವಿಲ್ ಪ್ರಕರಣಗಳು, ದಾಂಪತ್ಯ ಹಕ್ಕುಗಳ ಪುನರ್ ಸ್ಥಾಪನೆ, ಜೀವನಾಂಶ, ಮಕ್ಕಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳು, ವಾಹನ ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳು, ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿರುವ ಪ್ರಕರಣಗಳು ಹಾಗೂ ರಾಜಿ ಯೋಗ್ಯ ಕ್ರಿಮಿನಲ್ ಪ್ರಕರಣಗಳು, ಚೆಕ್‌ ಅಮಾನ್ಯ ಪ್ರಕರಣಗಳು, ಕಾರ್ಮಿಕ ಕಾಯ್ದೆಯ ಪ್ರಕರಣಗಳು, ವಿದ್ಯುತ್ ಕಳವಿಗೆ ಸಂಬಂಧಿಸಿದ ಪ್ರಕರಣಗಳು, ಅಕ್ರಮ ಕಲ್ಲು, ಮರಳು ಸಾಗಾಣಿಕೆಗೆ ಸಂಬಂಧಿಸಿದ ಅಪರಾಧಗಳು, ಇತರೆ ಯಾವುದೇ ರಾಜಿ ಯೋಗ್ಯ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು. ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ರಾಜಿ ಮಾಡಿಕೊಳ್ಳಬಹುದು’ ಎಂದರು.

ADVERTISEMENT

‘ಸಾಕಷ್ಟ ಪ್ರಕರಣಗಳನ್ನು ಪೂರ್ವಭಾವಿ ಸಮಾಲೋಚನೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ತಿಂಗಳಿಂದ ಸಾಕಷ್ಟು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಮತ್ತು ನ್ಯಾಯಾಲಯದ ಬಾಕಿ ಪ್ರಕರಣಗಳನ್ನು ಪೂರ್ವಭಾವಿ ಸಮಾಲೋಚನೆ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

‘ಅದಾಲತ್‌ನಲ್ಲಿ ಹೆಚ್ಚೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ವಿಮಾ ಕಂಪನಿಗಳು, ಭೂ ಸ್ವಾಧೀನಾಧಿಕಾರಿಗಳು, ಬ್ಯಾಂಕುಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ, ವಕೀಲರು, ಕಂದಾಯ ಇಲಾಖೆ, ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ’ ಎಂದು ಭಾರತಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರೂಪಾಕ್ಷಸ್ವಾಮಿ ಇದ್ದರು.

ಕಾನೂನು ಸೇವೆಗಳ ದಿನಾಚರಣೆ

ಚಾಮರಾಜನಗರ: ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕುರಿತು ವಸ್ತು ಪ್ರದರ್ಶನವನ್ನು ಬುಧವಾರ (ನ.9) ಬೆಳಿಗ್ಗೆ 10.30ಕ್ಕೆ ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಧ್ಯಕ್ಷತೆ ವಹಿಸುವರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ಎಸ್‌ಪಿ ಟಿ.ಪಿ. ಶಿವಕುಮಾರ್, ಎಡಿಸಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.