ADVERTISEMENT

ಚಾಮರಾಜನಗರ: ‘ಉದ್ಯಮಿ ಸೃಷ್ಟಿ, ಉದ್ಯಮ ವಿಸ್ತರಣೆ ಉದ್ದೇಶ’

ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್‌ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 8:34 IST
Last Updated 7 ನವೆಂಬರ್ 2025, 8:34 IST
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭಾಂಗಣದಲ್ಲಿಜಿಲ್ಲಾಡಳಿತದ ವತಿಯಿಂದ ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್‌ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ  ನೀಡಿದರು
ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಕೆ.ಡಿ.ಪಿ ಸಭಾಂಗಣದಲ್ಲಿಜಿಲ್ಲಾಡಳಿತದ ವತಿಯಿಂದ ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್‌ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ  ನೀಡಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ಮೈಕ್ರೋ ಉದ್ಯಮ ಅಭಿವೃದ್ಧಿ, ಮಾರುಕಟ್ಟೆ ಸಂಶೋಧನೆ, ನೋಂದಣಿ, ವಿಸ್ತರಣೆ, ಹೊಸ ಉದ್ಯಮಿಗಳ ಸೃಷ್ಟಿ,  ಸಾಮರ್ಥ್ಯವೃದ್ಧಿ ಗುರಿಯೊಂದಿಗೆ ಜಿಲ್ಲಾಡಳಿತದಿಂದ ‘ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಓರಿಯೆಂಟೇಷನ್’ಗೆ ಗುರುವಾರ ಚಾಲನೆ ನೀಡಲಾಯಿತು.

ನಗರದಲ್ಲಿ ಜಿಲ್ಲಾಡಳಿತ ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ, ಸೆಂಟರ್ ಆಫ್ ಎಕ್ಸಲೆನ್ಸ್  ಅನ್‌ ಎಂಪ್ಲಾಯ್‌ಮೆಂಟ್‌ ಮತ್ತು ಲಿವ್‌ಲಿಹುಡ್ ಸಂಸ್ಥೆ  ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಉದ್ಯಮಿಗಳು, ಆಸಕ್ತರು ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಾಮರಾಜನಗರ ಜಿಲ್ಲೆ ನೈಸರ್ಗಿಕ ಸಂಪತ್ತು ಹಾಗೂ ಅಗಾಧ ಮಾನವ ಸಂಪನ್ಮೂಲ ಸಾಮರ್ಥ್ಯ ಹೊಂದಿದೆ. ಸಾರ್ವಜನಿಕರ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ ಮತ್ತು ಆರ್ಥಿಕತೆಯನ್ನು ಕೇಂದ್ರವಾಗಿಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ ಎಂದರು.

ADVERTISEMENT

ಮೈಕ್ರೋ ಬಿಸಿನೆಸ್ ಎಕ್ಸಲೆನ್ಸ್ ಯೋಜನೆಯ ಮೂಲಕ ಸಿ.ಐ.ಐ., ಸಿ.ಇ.ಎಲ್. ಸಂಸ್ಥೆಗಳಿಂದ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ಸಾಮರ್ಥ್ಯ ಅಭಿವೃದ್ಧಿಗೆ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೈಸೂರಿನ ಸಿಐಐ ಸಂಸ್ಥೆಯ ಅಧ್ಯಕ್ಷ ನಾಗರಾಜ ಗರ್ಗೇಶ್ವರಿ ಮಾತನಾಡಿ, ಚಾಮರಾಜನಗರದಲ್ಲಿ ಉದ್ಯಮ ಕ್ಷೇತ್ರದ ಅವಕಾಶಗಳು ಹೆಚ್ಚುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್, ಮಾರಾಟ ಮತ್ತು ಉದ್ಯಮ ನಿರ್ವಹಣೆಯಲ್ಲಿ ಉದ್ಯಮಿಗಳು ಕೌಶಲ ವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರದ ವಿವಿಧ ಉದ್ಯಮ ಸಹಾಯ ಯೋಜನೆಗಳು, ಹಣಕಾಸು, ತೆರಿಗೆ, ಜಿಎಸ್‌ಟಿ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಿ.ಐ.ಐ-ಸಿ.ಇ.ಎಲ್ ಪ್ರಮುಖ ಪಾತ್ರವಹಿಸಲಿದೆ. ಉದ್ಯಮಿಗಳ ಅಭಿವೃದ್ಧಿ ವೇದಿಕೆಗೆ ಹೆಚ್ಚಿನ ಸಂಖ್ಯೆಯ ಉದ್ಯಮಿಗಳು ಸೇರ್ಪಡೆಯಾಗಬೇಕು ಎಂದು ಅವರು ಸಲಹೆ ನೀಡಿದರು.

ಸಿ.ಐ.ಐ ಕರ್ನಾಟಕ ಎಂ.ಎಸ್.ಎಂ.ಇ ಪ್ಯಾನೆಲ್ ಸದಸ್ಯ ಕಾರ್ಯದರ್ಶಿ ಸ್ಯಾಮ್ ಚೆರಿಯನ್ ಮಾತನಾಡಿ, ‘ ಪ್ರಗತಿಪರ ಆಡಳಿತ ಅನುಷ್ಠಾನ ಹಾಗೂ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳ ಜಾರಿಯಿಂದ ಜಿಲ್ಲೆ ಹೆಚ್ಚಿನ ಕೈಗಾರಿಕೆಗಳನ್ನು ಆಕರ್ಷಿಸುತ್ತಿದೆ ಎಂದರು.

ಜಿಲ್ಲಾಡಳಿತ ಮತ್ತು ಸಿ.ಐ.ಐ-ಸಿ.ಇ.ಎಲ್ ನಡುವಿನ ಬಿಸಿನೆಸ್ 360 ಉದ್ಯಮಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಯಿತು.  ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ನಾಗರಾಜ ಗರ್ಗೇಶ್ವರಿ  ಸಿ.ಎಸ್.ಆರ್. ಸಹಯೋಗ ಪತ್ರ ಸಲ್ಲಿಸಿದರು.

 ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಉಪ ನಿರ್ದೇಶಕ ದೊರೈರಾಜ್, ಸಹಾಯಕ ನಿರ್ದೇಶಕ ವಿಜಯ್ ಕುಮಾರ್, ಸಿ.ಐ.ಐ-ಸಿ.ಇ.ಎಲ್‍ನ ಶಿವೇಕ ಜಿ, ಜಿಲ್ಲಾ ಸಿ.ಎಸ್.ಆರ್ ಸಮಾಲೋಚಕಿ ರಕ್ಷಿತಾ, ಜಿಲ್ಲಾ ಇ-ಆಡಳಿತ ಸಮಾಲೋಚಕ ಮಧುಕೇಶ್  ಇದ್ದರು.

ವಿವಿಧ ಕಾರ್ಯಕ್ರಮ

ಯೋಜನೆಯಡಿ ಜಿಲ್ಲೆಯ 200 ಉದ್ಯಮಿಗಳಿಗೆ ತರಬೇತಿ ದೊರೆಯಲಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಇಂಟರಾಕ್ಟಿವ್ ಲರ್ನಿಂಗ್ ಉಪಕರಣಗಳ ಕೊಡುಗೆ ಮಹಿಳೆಯರ ಆರೋಗ್ಯ ಸ್ವಚ್ಛತೆಗೆ ಪಿಂಕ್ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು. ಈ ಕಾರ್ಯಕ್ಕೆ ₹ 1.6 ಕೋಟಿ ವ್ಯಯ ಮಾಡುವ ಯೋಜನೆ ರೂಪಿಸಲಾಗಿದ್ದು ಸಿಎಸ್‍ಆರ್ ಸಹಯೋಗಕ್ಕಾಗಿ ಜಿಲ್ಲಾಧಿಕಾರಿಗೆ ಬದ್ಧತೆಯ ಪತ್ರ ಸಲ್ಲಿಸಲಾಯಿತು. ಯೋಜನೆಯು ರೋಟರಿ ಸಹಭಾಗಿತ್ವದಲ್ಲಿ ಸಿ.ಎಸ್.ಆರ್ ಅಧ್ಯಕ್ಷ ಕಿರಣ್ ರಾಬರ್ಟ್ ಹಾಗೂ ಸಿ.ಐ.ಐ ಕರ್ನಾಟಕ ರಾಜ್ಯ ಪರಿಷತ್‍ನ ಷಡಕ್ಷರಿ ಸ್ವಾಮಿ ಉಪಸ್ಥಿತಿಯಲ್ಲಿ ಜಾರಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.