ADVERTISEMENT

ಮಿನಿ ದಸರಾ: ಭಕ್ತರಿಂದ ಜಂಬೂ ಸವಾರಿ, ಮಳೆ ನಡುವೆ ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 15:24 IST
Last Updated 13 ಅಕ್ಟೋಬರ್ 2024, 15:24 IST
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಾಮುಂಡೇಶ್ವರಿ, ಬಸವೇಶ್ವರ, ವೀರಭದ್ರಶ್ವರ ಹಾಗೂ ಮಂಟೇಸ್ವಾಮಿ ದೇವರ ಉತ್ಸವ ಮೂರ್ತಿಗೆ ಭಕ್ತರು ಪುಷ್ಪಾರ್ಚನೆ ನೆರವೇರಿಸಿದರು
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಶನಿವಾರ ತಡರಾತ್ರಿ ಚಾಮುಂಡೇಶ್ವರಿ, ಬಸವೇಶ್ವರ, ವೀರಭದ್ರಶ್ವರ ಹಾಗೂ ಮಂಟೇಸ್ವಾಮಿ ದೇವರ ಉತ್ಸವ ಮೂರ್ತಿಗೆ ಭಕ್ತರು ಪುಷ್ಪಾರ್ಚನೆ ನೆರವೇರಿಸಿದರು   

ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಶನಿವಾರ ತಡರಾತ್ರಿ ತನಕ ಚಾಮುಂಡೇಶ್ವರಿ ದೇವಿ  ಉತ್ಸವ ಅದ್ದೂರಿಯಾಗಿ ಜರುಗಿತು. ಸುರಿಯುವ ಮಳೆ ನಡುವೆ ಸಾವಿರಾರು ಭಕ್ತರು ದಾರಿಯುದ್ದಕ್ಕೂ ನಿಂತು ದೇವರ ಮೆರವಣಿಗೆಯಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು.

ದಶಮಿ ಹಿನ್ನಲೆ ಹತ್ತು ದಿನಗಳ ಕಾಲ ಹಲವು ಗ್ರಾಮ ದೇವರಿಗೆ ವಿವಿಧ ಪೂಜೆ, ಅಲಂಕಾರ ಮಾಡಲಾಗಿತ್ತು. ಜಂಬೂ ಸವಾರಿ ಸಮಯದಲ್ಲಿಯೇ ಪೂಜೆ ಸಲ್ಲಿಸಿ, ಬಸವೇಶ್ವರ, ಮಂಟೇಸ್ವಾಮಿ ಹಾಗೂ ವೀರಭದ್ರಸ್ವಾಮಿ ಸಮೇತ ಬನ್ನಿ ಮಂಟಪಕ್ಕೆ ಉತ್ಸವ ಮೂರ್ತಿಗಳ ಮೆರವಣಿಗೆ ವೈಭವದಿಂದ ಸಾಗಿತು. ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಮುಂಜಾನೆಯಿಂದಲೇ ಗುಡಿಗಳ ಮುಂದೆ ತಳಿರು ತೋರಣಗಳ ಸಿಂಗಾರ ಮಾಡಿ, ದೇವರಿಗೆ ಹೂ ಹಾರಗಳಿಂದ ಸಿಂಗರಿಸಲಾಗಿತ್ತು. ಸಂಜೆ ಮಹಾ ಮಂಗಳಾರತಿ ನಂತರ ಮಂಗಳವಾದ್ಯ ಮೊಳಗಿಸಿ ದೇವರ ಛತ್ರಿ, ಸತ್ತಿಗೆ ಸೂರಿಪಾನಿ ಹಿಡಿದ ಯುವಕರು ಚಾಮುಂಡಾಂಬೆ ಸ್ತುತಿಸುತ್ತಿದ್ದಂತೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಡಲಾಯಿತು. ನಂತರ ದೇವರಿಗೆ ಹೂ, ಹೊಂಬಾಳೆ ಮುಡಿಸಿದ ಭಕ್ತರು ಜಯಘೋಷ ಮಾಡುತ್ತಾ ಬನ್ನಿ ಮಂಟಪ ತಲುಪಿದರು.

ADVERTISEMENT

ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ದೇವಾಲಯಗಳ ಮುಂಭಾಗ ರಾತ್ರಿ ಪೂರಾ ಊದಿನಕಡ್ಡಿ, ಧೂಪ ದೀಪ ಬೆಳಗಿ ಹರಕೆ ಒಪ್ಪಿಸಿದರು. ವಿಜಯದಶಮಿಗೂ ಮೊದಲು ವೀರಭದ್ರಶ್ವೇರ, ಬಸವೇಶ್ವರ ದೇವಾಲಯಗಳಲ್ಲಿ ವಿಶೇಷ ಅರ್ಚನೆ ಮತ್ತು ಪ್ರಸಾದ ವಿತರಣೆ ಮಾಡಲಾಯಿತು ಎಂದು ಗ್ರಾಮಸ್ಥರು ಹೇಳಿದರು.

ಶಕ್ತಿದೇವತೆ ಚಾಮುಂಡಿ ಮಂಟಪೋತ್ಸವದಲ್ಲಿ ಕೂರಿಸಿ ವಿವಿಧ ದೇವತೆಗಳ ಮೂರ್ತ ರೂಪದಲ್ಲಿ ಪೂಜಿಸಲಾಯಿತು. ವಸ್ತ್ರ, ಫಲ, ತಾಂಬೂಲ ಸಮರ್ಪಿಸಿ ಮಳೆ ಬೆಳೆ ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು. ಈ ವೇಳೆ ಭಕ್ತರ ಜನಪದ ಕುಣಿತ, ದೇವಿ ಗುಣಗಾನ ಮಾಡಿ ಸಡಗರ ಸಂಭ್ರಮಗಳ ನಡುವೆ ಹಬ್ಬವನ್ನು ಸಂಪನ್ನಗೊಳಿಸಲಾಯಿತು. ಮುಂಜಾನೆ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಬನ್ನಿಮಂಟಪದ ಮುಂಭಾಗದ ದೇವಳದಲ್ಲಿ ಅಪಾರ ಭಕ್ತರು ಹಣ್ಣು ಕಾಯಿ ಮಾಡಿಸಿ ಹರಕೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.