ADVERTISEMENT

ಪರಿಹಾರ ಕೊಡಿ, ಸ್ಥಳೀಯರಿಗೆ ಕೆಲಸ ಕೊಡಿ: ಗ್ರಾಮಸ್ಥರ ಮನವಿ

ಬದನಗುಪ್ಪೆ–ಕೆಲ್ಲಂಬಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಸಚಿವರಿಗರಿಗೆ ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 13:19 IST
Last Updated 7 ಜನವರಿ 2021, 13:19 IST
ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ‌ಗೋವಿಂದ ಅವರು ಅಹವಾಲುಗಳನ್ನು ಸಲ್ಲಿಸಿದರು 
ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ‌ಗೋವಿಂದ ಅವರು ಅಹವಾಲುಗಳನ್ನು ಸಲ್ಲಿಸಿದರು    

ಚಾಮರಾಜನಗರ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ತಾಲ್ಲೂಕಿನ ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯರು ಸಚಿವರನ್ನು ತಡೆದು, ಪರಿಹಾರ ಹಾಗೂ ಕೆಲಸಕ್ಕಾಗಿ ಆಗ್ರಹಿಸಿದರು.

ಕೈಗಾರಿಕಾ ಪ್ರದೇಶವನ್ನು ವೀಕ್ಷಿಸಿ ಕಾರಿನತ್ತ ಬರುತ್ತಿರುವ ಸಂದರ್ಭದಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿನ್ನು ತಡೆದ ಬದನಗುಪ್ಪೆಯ ಗೋವಿಂದ ಹಾಗೂ ಕಾಳ ನಾಯಕ ಅವರು, ‘ಕೈಗಾರಿಕಾ ಪ್ರದೇಶಕ್ಕಾಗಿ ಮೂರು ಎಕರೆ ಜಮೀನು ನೀಡಿದ್ದೇವೆ. ಪರಿಹಾರ ಸ್ವಲ್ಪ ಸಿಕ್ಕಿದೆ. ಬಾಕಿ ಇನ್ನೂ ಸಿಕ್ಕಿಲ್ಲ. ಐದು ವರ್ಷಗಳಿಂದ ಅಧಿಕಾರಿಗಳು ನೆಪಗಳನ್ನು ಹೇಳಿಕೊಂಡು ಮುಂದೂಡುತ್ತಲೇ ಇದ್ದಾರೆ’ ಎಂದು ದೂರಿದರು.

‘ಕೈಗಾರಿಕೆಗಳು ಸ್ಥಾಪನೆಯಾದರೆ ಸ್ಥಳೀಯರಿಗೆ ಕೆಲಸ ಕೊಡಿಸುತ್ತೇವೆ ಎಂದು ಹೇಳಿದ್ದರು. ನಮಗೆ ಯಾವಾಗ ಕೆಲಸ ಕೊಡಿಸುತ್ತೀರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಹಿಂದೆ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಅವರು ಬಂದಾಗಲೂ ಮನವಿ ಕೊಟ್ಟಿದ್ದೆವು. ಈಗ ನಿಮಗೂ ಕೊಡುತ್ತಿದ್ದೇವೆ. ಪ್ರತಿ ಬಾರಿ‌ಯೂ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ಪ್ರಯೋಜನ ಆಗುತ್ತಿಲ್ಲ’ ಎಂದು ಗೋವಿಂದ ಅವರು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಪರಿಹಾರ ಯಾಕೆ ನೀಡಿಲ್ಲ ಎಂಬುದನ್ನು ಪರಿಶೀಲಿಸುತ್ತೇನೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕೊಡಿಸಲು ವ್ಯವಸ್ಥೆ ಮಾಡುತ್ತೇನೆ’ ಎಂದರು.

ಯಡಿಯೂರಪ್ಪ ಅವರೇ ಮುಖ್ಯಮಂತ್ರಿ

ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಗದೀಶ ಶೆಟ್ಟರ್‌ ಅವರು,‘ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಇನ್ನೂ ಎರಡೂವರೆ ವರ್ಷಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ಇದನ್ನೇ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಸತ್ಯಕ್ಕೆ ದೂರವಾದ ವಿಚಾರ’ ಎಂದರು.

ಹೈಕಮಾಂಡ್ ಸೂಚಿಸಿದರೆ ನೀವು ಮುಖ್ಯಮಂತ್ರಿಯಾಗಲು ಸಿದ್ಧರಿದ್ದೀರಾ ಎಂದು ಕೇಳಿದ್ದಕ್ಕೆ, 'ಅರುಣ್ ಸಿಂಗ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ, ಇಂತಹ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ರೇಣುಕಾಚಾರ್ಯ ನಡುವಿನ ವಾಗ್ವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಆ ವಿಚಾರ ನನಗೆ ಸಂಬಂಧಿಸಿದ್ದಲ್ಲ‌. ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಅದನ್ನು ಬಗೆಹರಿಸುತ್ತಾರೆ' ಎಂದರು.

ಹಿಂಜರಿಕೆ‌ ಇಲ್ಲ: 'ಚಾಮರಾಜನಗರಕ್ಕೆ ಬರಲು ನನಗೆ ಹಿಂಜರಿಕೆ ಇಲ್ಲ. ಸ್ಪೀಕರ್ ಆಗಿದ್ದಾಗ, ಸಿಎಂ ಆಗಿದ್ದಾಗ ಬಂದಿದ್ದೇನೆ. ಈಗ ಕೈಗಾರಿಕಾ ಸಚಿವನಾಗಿ ಬಂದಿದ್ದೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.