ಚಾಮರಾಜನಗರ: ‘ಹೊಲಯ’ ಎಂದು ಹೇಳಿಕೊಳ್ಳಲು ಯಾವುದೇ ಕೀಳರಿಮೆ ಬೇಡ; ಜಾತಿ ಕಾಲಂನಲ್ಲಿ ಹೆಮ್ಮೆಯಿಂದ ಹೊಲಯ ಎಂದು ಬರೆಸಿ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಸಮುದಾಯಕ್ಕೆ ಸಲಹೆ ನೀಡಿದರು.
ನಗರದ ಡಾ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ, ಬಲಗೈ, ಹೊಲಯ, ಛಲವಾದಿ ಒಳ ಮೀಸಲಾತಿ ಜಾಗೃತಿ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಒಳ ಮೀಸಲಾತಿ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ‘ಹೊಲಯ’ ಎಂಬ ಪದವನ್ನು ನಿಂಧನಾತ್ಮಕವಾಗಿ ಉಪಯೋಗಿಸಲಾಗುತ್ತದೆ.
‘ಹೊಲದ ಒಡೆಯರಾಗಿರುವ ಶ್ರೇಷ್ಠ ಸಮುದಾಯವೇ ಹೊಲಯ’ ಎಂಬುದನ್ನು ಸಮುದಾಯ ಅರಿಯಬೇಕು. ಸಮುದಾಯದ ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಒಳ ಮೀಸಲಾತಿ ಜಾರಿ ಸಂಬಂಧ ಸಮೀಕ್ಷಾದಾರರು ಮನೆಗಳಿಗೆ ಬಂದಾಗ ಹೊಲಯ ಎಂದು ನಮೂದಿಸಬೇಕು ಎಂದು ಕಿವಿಮಾತು ಹೇಳಿದರು.
ಮನೆ ಮನೆ ಭೇಟಿ ಸಮೀಕ್ಷೆಯ ಬಳಿಕ ಬೂತ್‌ಗಳಲ್ಲೂ ದಾಖಲೀಕರಣ ಪ್ರಕ್ರಿಯೆ ನಡೆಯಲಿದ್ದು ಸುಳ್ಳು ಜಾತಿ ನಮೂದು ಮಾಡದೆ ಪ್ರಾಮಾಣಿಕವಾಗಿ ಜಾತಿಯ ಹೆಸರನ್ನು ಬರೆಸಬೇಕು. ಹೋರಾಟಗಳೇ ನಡೆಸದೆ ಕೆಲವು ವರ್ಗಗಳಿಗೆ ಮೀಸಲಾತಿ ದೊರೆತಿರುವ ಕಾಲಘಟ್ಟದಲ್ಲಿ ಅಂಬೇಡ್ಕರ್ ರಚಿತ ಸಂವಿಧಾನ ನೀಡಿರುವ ಮೀಸಲಾತಿ ಅವಕಾಶವನ್ನು ಸಮುದಾಯ ಉಳಿಸಿಕೊಳ್ಳಬೇಕು ಎಂದು ಶಾಸಕ ಕೃಷ್ಣಮೂರ್ತಿ ಕರೆ ನೀಡಿದರು.
ರಾಜ್ಯ ಯೋಜನಾ ಇಲಾಖೆ ನಿರ್ದೇಶಕ ಡಿ.ಚಂದ್ರಶೇಖರಯ್ಯ ಮಾತನಾಡಿ, ಒಳ ಮೀಸಲಾತಿ ಜಾರಿಗೆ ಹೊಲಯ ಸಮುದಾಯದ ವಿರೋಧವಿಲ್ಲ; ಒಳ ಮೀಸಲಾತಿಗೆ ಸಂಪೂರ್ಣ ಬೆಂಬಲ ಇದೆ. ಆದರೆ, ಸದಾಶಿವ ಆಯೋಗದ ಶಿಫಾರಸ್ಸಿನಂತೆ ಒಳ ಮೀಸಲಾತಿ ನೀಡುವುದಕ್ಕೆ ವಿರೋಧವಿದೆ. ಈ ನಿಟ್ಟಿನಲ್ಲಿ ನಿಖರ ಅಂಕಿಅಂಶಗಳ ಸಂಗ್ರಹಕ್ಕೆ ಪರಿಶಿಷ್ಟ ಜಾತಿಯೊಳಗೆ ಜಾತಿ ಸಮೀಕ್ಷೆ ನಡೆಯುತ್ತಿದ್ದು ಹೊಲಯ ಸಮುದಾಯವರು ಜಾತಿ ಕಲಂನಲ್ಲಿ ಹೊಲಯ ಎಂದೇ ನಮೂದಿಸಬೇಕು. ಈ ಮೂಲಕ ಸಮುದಾಯದ ಜನಸಂಖ್ಯೆ ನಿಖರವಾಗಿ ದಾಖಲಾಗಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳ ನಿಖರ ಜನಸಂಖ್ಯೆ ಅರಿಯಲು ಸರ್ಕಾರ ಸಮೀಕ್ಷೆ ನಡೆಸುತ್ತಿದ್ದು ಉಪಜಾತಿವಾರು ನಿಖರವಾದ ಜನಸಂಖ್ಯೆಯನ್ನು ಅರಿಯಲು ಹೊರಟಿದೆ. ಸಮೀಕ್ಷೆ ವೇಳೆ ಸಮುದಾಯ ಉಪ ಜಾತಿಯ ಹೆಸರನ್ನು ಹೊಲಯ ಎಂದು ಸ್ಪಷ್ಟವಾಗಿ ನಮೂದಿಸಬೇಕು ಎಂದರು.
ಸರ್ಕಾರಿ ನೌಕರರು ಸೇವಾ ರಿಜಿಸ್ಟರ್‌ನಲ್ಲಿ ಆದಿ ಕರ್ನಾಟಕ ಎಂದು ಜಾತಿಯ ಹೆಸರು ಬರೆಸಿದ್ದರೂ ಆಂತಕ, ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಹೊಲಯ ಎಂದೇ ಬರೆಸಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ನಮೂದಿಸಿದರೆ ಸಮುದಾಯದ ನಿಖರ ಲೆಕ್ಕ ಸಿಗುವುದಿಲ್ಲ ಎಂದು ಎನ್.ಮಹೇಶ್ ಹೇಳಿದರು.
ಸಭೆಯಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ಬಾಲರಾಜು, ನಾಗರಾಜು ಕಮಾಲ್, ಸಮಿತಿಯ ಸಂಚಾಲಕ ಅಯ್ಯನಪುರ ಶಿವಕುಮಾರ್, ಮುಖಂಡರಾದ ಆರ್. ಮಹದೇವ್, ಸೋಮೇಶ್, ನಲ್ಲೂರು ನಾಗಯ್ಯ, ಮೂಡ್ನಾಕೂಡು ಪ್ರಕಾಶ್, ಸಿದ್ದಯ್ಯನಪುರ ನಾಗರಾಜು, ಗೋವಿಂದರಾಜು, ನಾಗರಾಜು, ನಲ್ಲೂರು ಮಹದೇವಸ್ವಾಮಿ, ಗಡಿಕಟ್ಟೆ ಯಜಮಾನರು, ಮುಖಂಡರು ಭಾಗಹಿಸಿದ್ದರು.
ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಆಂಧ್ರ ಎಂಬುದು ಆಯಾ ಕಾಲಘಟ್ಟದಲ್ಲಿ ಬಳಕೆ ಬಂದಿರುವ ಹೆಸರುಗಳೇ ಹೊರತು ಜಾತಿ ಸೂಚಕವಲ್ಲ. ಸಮುದಾಯ ಗೊಂದಲಕ್ಕೆ ಅವಕಾಶ ನೀಡಬಾರದು.–ಎನ್.ಮಹೇಶ್ ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.