ADVERTISEMENT

ಅವಧಿ ಮೀರಿ ವಾಸ್ತವ್ಯ; ಬಲವಂತವಾಗಿ ಮನೆ ಖಾಲಿ

ಮಹದೇಶ್ವರ ‌ಬೆಟ್ಟ: ಪ್ರಾಧಿಕಾರದ ಕ್ರಮ; ಪೊಲೀಸ್‌ ಮೊರೆ ಹೋದ ಮಹಿಳೆ, ಮಗ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 16:47 IST
Last Updated 15 ಜನವರಿ 2022, 16:47 IST
ಮಹದೇಶ್ವರ ಬೆಟ್ಟದಲ್ಲಿ ಮನೆಯ ವಸ್ತುಗಳೊಂದಿಗೆ ಹೊರಗಡೆ ನಿಂತಿರುವ ಶಾಂತಮಲ್ಲೇಶ ಹಾಗೂ ಮಂಜುಳಾ
ಮಹದೇಶ್ವರ ಬೆಟ್ಟದಲ್ಲಿ ಮನೆಯ ವಸ್ತುಗಳೊಂದಿಗೆ ಹೊರಗಡೆ ನಿಂತಿರುವ ಶಾಂತಮಲ್ಲೇಶ ಹಾಗೂ ಮಂಜುಳಾ   

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ವಸತಿ ಗೃಹದಲ್ಲಿ ಅವಧಿ ಮೀರಿ ವಾಸ್ತವ್ಯ ಇದ್ದ ಕಾರಣಕ್ಕೆ ಮಹಿಳೆ ಹಾಗೂ ಅವರ ಮಗನನ್ನು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಶುಕ್ರವಾರ ಸಂಜೆ ಬಲವಂತವಾಗಿ ಮನೆಯಿಂದ ಹೊರ ಹಾಕಿದ್ದಾರೆ.

ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ, ಏಕಾಏಕಿ ಬಲವಂತವಾಗಿ ಮನೆ ಖಾಲಿ ಮಾಡಿಸಿದ್ದಾರೆ ಎಂದು ಮಹಿಳೆ ಮಂಜುಳಾ ಹಾಗೂ ಅವರ ಮಗ ಶಾಂತ ಮಲ್ಲೇಶ್‌ ಆರೋಪಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಮಹದೇಶ್ವರ ಬೆಟ್ಟದ ಠಾಣೆಗೂ ದೂರು ನೀಡಿದ್ದಾರೆ.

ಮನೆಯನ್ನು ಬಲವಂತವಾಗಿ ಖಾಲಿ ಮಾಡಿಸಿರುವುದಕ್ಕೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿರುವ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ‘ಈಗಾಗಲೇ ಅವರಿಗೆ ಎರಡು ಬಾರಿ ನೋಟಿಸ್‌ ನೀಡಿ 45 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಅವರು ತೆರವುಗೊಳಿಸಿರಲಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಘಟನೆಯ ವಿವರ:30 ವರ್ಷಗಳಿಂದ ದೇವಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡಿದ್ದ ಕೆ.ಜಯಸ್ವಾಮಿ ಎಂಬುವರು 2019ರ ಏಪ್ರಿಲ್‌ 15ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ದೇವಾಲಯದ ನೌಕರ ಆಗಿದ್ದರಿಂದ ದೇವಾಲಯದಿಂದ (ಈಗ ಪ್ರಾಧಿಕಾರ) ಅವರಿಗೆ ವಸತಿ ಗೃಹ ನೀಡಲಾಗಿತ್ತು. ಜಯಸ್ವಾಮಿ ಅವರ ನಿಧನದ ನಂತರ ಅವರ ಪತ್ನಿ ಹಾಗೂ ಮಗ ಮನೆ ಖಾಲಿ ಮಾಡಿರಲಿಲ್ಲ.

‘2019ರಲ್ಲಿ ಅವರಿಗೆ ಮನೆ ತೆರವುಗೊಳಿಸುವಂತೆ ನೋಟಿಸ್‌ ನೀಡಿ 45 ದಿನಗಳ ಅವಕಾಶ ನೀಡಲಾಗಿತ್ತು. ನಂತರ 2021ರ ಆಗಸ್ಟ್‌ನಲ್ಲೂ ಮತ್ತೊಮ್ಮೆ ನೋಟಿಸ್‌ ನೀಡಲಾಗಿತ್ತು. ಒಂದೂವರೆ ತಿಂಗಳ ಕಾಲಾವಕಾಶ ನೀಡಿದ್ದರೂ ಮನೆ ಖಾಲಿ ಮಾಡಿಲ್ಲ’ ಎಂದು ಜಯವಿಭವಸ್ವಾಮಿ ತಿಳಿಸಿದ್ದಾರೆ.

‘ಕೆಲಸದಿಂದ ತೆಗೆದು ಹಾಕಿದ್ದರು...’

ಪ್ರಾಧಿಕಾರವು ನೋಟಿಸ್‌ ನೀಡಿರುವುದನ್ನು ಒಪ್ಪಿಕೊಂಡಿರುವ ಜಯಸ್ವಾಮಿ ಅವರ ಮಗ ಶಾಂತಮಲ್ಲೇಶ್‌, ‘ತಂದೆ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ, ನಾನು 2015ರಿಂದ ಹೊರಗುತ್ತಿಗೆ ಆಧಾರದಲ್ಲಿ ಪ್ರಾಧಿಕಾರದಲ್ಲಿ ಕೆಲಸ ಮಾಡಲು ಆರಂಭಿಸಿದೆ. ಪ್ರಾಧಿಕಾರ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿ, ನಮಗೆ ಬರಬೇಕಿದ್ದ ಇಪಿಎಫ್‌ ಹಾಗೂ ಗ್ರಾಚ್ಯುಟಿ ಹಣವನ್ನು ನೀಡಿಲ್ಲ. ಅದನ್ನು ಪಾವತಿಸುವಂತೆ ಕೇಳಿಕೊಂಡಿದ್ದೆ. ಅದಕ್ಕಾಗಿ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದರು’ ಎಂದು ಆರೋಪಿಸಿದರು.

‘ಅಂದಿನಿಂದ ಕೆಲಸವಿಲ್ಲದೇ ನಿರುದ್ಯೋಗಿಯಾಗಿದ್ದೇನೆ. ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ತಾಯಿ ಒಬ್ಬರೇ ಮನೆಯಲ್ಲಿದ್ದಾಗ, ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಸಿಬ್ಬಂದಿಯೊಂದಿಗೆ ಬಂದು ತಾಯಿಯನ್ನು ಮನೆಯಿಂದ ಹೊರಗೆ ಎಳೆದು, ಸಾಮಗ್ರಿಗಳನ್ನು ಹೊರ ಹಾಕಿದ್ದಾರೆ. ಕೋವಿಡ್‌ ಕರ್ಫ್ಯೂ ಜಾರಿಯಲ್ಲಿದೆ. ಎರಡು ದಿನ ಕಾಲಾವಕಾಶ ನೀಡಿ ಎಂದು ಬೇಡಿದರೂ ಕೇಳಲಿಲ್ಲ. ಬೀದಿಯಲ್ಲೇ ಇರಬೇಕಾಗಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.