ADVERTISEMENT

‘ಎಂ.ಎಂ ಹಿಲ್ಸ್‌: ಹುಲಿ ಯೋಜನೆ ವ್ಯಾಪ್ತಿಗೆ ಬೇಡ’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:26 IST
Last Updated 31 ಅಕ್ಟೋಬರ್ 2025, 7:26 IST
ಸಿ.ಮಾದೇಗೌಡ
ಸಿ.ಮಾದೇಗೌಡ   

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಸರ್ಕಾರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಸೇರಿಸಬಾರದು ಎಂದು ಸೋಲಿಗ ಅಭಿವೃದ್ದಿ ಸಂಘ, ಹನೂರು ಹಾಗೂ ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮಾದೇಗೌಡ ಒತ್ತಾಯಿಸಿದ್ದಾರೆ.

ಕಳೆದ ಐದು ವರ್ಷಗಳಿಂದ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಯೋಜನೆ ವ್ಯಾಪ್ತಿಗೆ ಸೇರಿಸುವುದನ್ನು ವಿರೋಧಿಸಿ ನಿರಂತರ ಪ್ರತಿಭಟನೆ, ಧರಣಿ ನಡಸುತ್ತಿದ್ದು ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಸರ್ಕಾರ ಸ್ಪಂದಿಸದಿರುವುದು ಬೇಸರದ ವಿಚಾರ ಎಂದರು.

ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ 56 ಪೋಡುಗಳಿದ್ದು 15,000 ಆದಿವಾಸಿ ಸೋಲಿಗರು ಶತಮಾನಗಳಿಂದ ವಾಸ ಮಾಡುತ್ತಿದ್ದಾರೆ. ಸ್ಥಳೀಯ ಬುಡಕಟ್ಟು ಸಮುದಾಯಗಳು ಕಾಡು ಮತ್ತು ವನ್ಯಜೀವಿಗಳನ್ನು ಸಂರಕ್ಷಣೆ ಮಾಡಿಕೊಂಡು ಬಂದಿದೆ. ಎಂಎಂ ಹಿಲ್ಸ್‌ ಅರಣ್ಯವನ್ನು ಹುಲಿ ಯೋಜನೆ ವ್ಯಾಪ್ತಿಗೊಳಪಟ್ಟರೆ ಆದಿವಾಸಿಗಳು ಹಾಗೂ ಸೋಲಿಗರನ್ನು ಅರಣ್ಯದಿಂದ ಹೊರದಬ್ಬುವ ಆತಂಕವಿದೆ ಎಂದು ತಿಳಿಸಿದರು.

ADVERTISEMENT

ಮೂಲ ಸೌಲಭ್ಯಗಳಿಗೆ ನಿರ್ಬಂಧ, ಜಾನುವಾರುಗಳನ್ನು ಮೇಯಿಸಲು ನಿರ್ಬಂಧ ಹೇರಲಾಗುತ್ತದೆ. ಅರಣ್ಯ ಹಕ್ಕು ಮಾನ್ಯತೆ ಕಾಯ್ದೆ ಹಾಗೂ ನಿಯಮಗಳು 2008ರಲ್ಲಿ ಜಾರಿಗೆ ಬಂದಿದ್ದು 17 ವರ್ಷ ಕಳೆದರೂ ಆದಿವಾಸಿಗಳಿಗೆ ಭೂಮಿಯ ಹಕ್ಕು, ಸಮುದಾಯ ಸಂಪನ್ಮೂಲದ ಹಕ್ಕು, ಮೂಲಭೂತ ಸೌಲಭ್ಯ ಹಾಗೂ ಸಂರಕ್ಷಣಾ ಹಕ್ಕುಗಳು ದೊರೆತಿಲ್ಲ ಎಂದರು.

ಈಚೆಗೆ ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿಯೋಜನೆ ವ್ಯಾಪ್ತಿಗೆ ಸೇರಿಸಬಾರದು, ಯಥಾಸ್ಥಿತಿ ಮುಂದುವರಿಸುವಂತೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹುಲಿ ಯೋಜನೆ ಜಾರಿ ಸಂಬಂಧ ಅ.31ರಂದು ಮಲೆಮಹದೇಶ್ವರ ಬೆಟ್ಟ ಮತ್ತು ಹನೂರಿನಲ್ಲಿ ಜನಾಭಿಪ್ರಾಯ ಸಂಗ್ರಹಿಸುವ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ, 15 ಸಾವಿರಕ್ಕೂ ಹೆಚ್ಚಾಗಿರುವ ಅದಿವಾಸಿ ಹಾಗೂ ಸೋಲಿಗರಿಗೆ ಪ್ರತ್ಯೇಕ ಸಂವಾದ ಕಾರ್ಯಕ್ರಮ ಆಯೋಜಿಸಬೇಕು ಎಂದು ಮಾದೇಗೌಡರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.