ADVERTISEMENT

ಕುಗ್ರಾಮಗಳಿಗೂ ರಸ್ತೆ ನಿರ್ಮಿಸಿತು ನರೇಗಾ

ಮಹದೇಶ್ವರ ಬೆಟ್ಟ: ಗ್ರಾಮಸ್ಥರಿಂದಲೇ ಸೌಕ‌ರ್ಯ ವಂಚಿತ ಊರುಗಳ ರಸ್ತೆ ಅಭಿವೃದ್ಧಿ

ಜಿ.ಪ್ರದೀಪ್ ಕುಮಾರ್
Published 29 ಮೇ 2020, 16:57 IST
Last Updated 29 ಮೇ 2020, 16:57 IST
ಮಹದೇಶ್ವರ ಬೆಟ್ಟ ಸಮೀಪ ದೊಡ್ಡಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಯಲ್ಲಿ ತೊಡಗಿರುವ ಗ್ರಾಮಸ್ಥರು
ಮಹದೇಶ್ವರ ಬೆಟ್ಟ ಸಮೀಪ ದೊಡ್ಡಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಯಲ್ಲಿ ತೊಡಗಿರುವ ಗ್ರಾಮಸ್ಥರು   

ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೊಡ್ಡಾಣೆ, ಪಡಸಲನತ್ತ ಸೇರಿದಂತೆ ಕೆಲವು ಊರುಗಳಿಗೆ ಬೆಟ್ಟದಿಂದ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದೇ ಜನರು ಪರದಾಡುತ್ತಿದ್ದರು. ಡಾಂಬರು ಬಿಡಿ, ಕಚ್ಚಾ ರಸ್ತೆ ನಿರ್ಮಿಸುವುದಕ್ಕೂ ಇದುವರೆಗೂ ಸಾಧ್ಯವಾಗಿರಲಿಲ್ಲ. ಈಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಗ್ರಾಮಸ್ಥರೇ ತಮ್ಮ ಊರುಗಳಿಗೆ ಕಚ್ಚಾರಸ್ತೆಯನ್ನು ನಿರ್ಮಿಸುತ್ತಿದ್ದಾರೆ.

ಬಹುತೇಕ ಗ್ರಾಮಗಳು ಕಾಡಂಚಿನಲ್ಲಿ ಇರುವುದರಿಂದ ರಸ್ತೆ ಸೌಕರ್ಯದಿಂದ ವಂಚಿತವಾಗಿವೆ. ನಾಗಮಲೆಯಿಂದ ಪಡಸಲನತ್ತ, ತೋಕರೆಯಿಂದ ದೊಡ್ಡಾಣೆಗೆ ರಸ್ತೆ ಇರಲಿಲ್ಲ. ಕೋವಿಡ್‌–19 ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯು ನರೇಗಾ ಅಡಿಯಲ್ಲಿ ಗ್ರಾಮೀಣ ಭಾಗದ ಕಾರ್ಮಿಕರಿಗೆ ಹೆಚ್ಚು ಹೆಚ್ಚು ಕೆಲಸ ನೀಡಲು ಮುಂದಾಗಿರುವುದು ಈ ಊರುಗಳ ಜನರ ದೀರ್ಘ ಸಮಯದ ಬೇಡಿಕೆ ಈಡೇರುವಂತೆ ಮಾಡಿದೆ. ಸ್ವತಃ ಗ್ರಾಮಸ್ಥರೇ ತಮ್ಮ ಊರುಗಳಿಗೆ ರಸ್ತೆ ನಿರ್ಮಿಸುತ್ತಿದ್ದಾರೆ.

ರಸ್ತೆ ನಿರ್ಮಾಣ ಮಾಡುತ್ತಿರುವ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಪಡಸಲನತ್ತ ಹಾಗೂ ದೊಡ್ಡಾಣೆ ಗ್ರಾಮಸ್ಥರಾದ ಮಾದೇ‌ವ ಮತ್ತು ಮಾದೇಶ ಅವರು, ‘ನಮ್ಮ ಗ್ರಾಮ ಕಾಡಂಚಿನಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರಲಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಸದ್ಯ ಲಾಕ್‌ಡೌನ್ ಕಾರಣದಿಂದ ಜಿಲ್ಲಾ ಪಂಚಾಯಿತಿಯು ನರೇಗಾ ಯೋಜನೆಯಡಿ ಗ್ರಾಮಸ್ಥರಿಗೆ ಕೆಲಸವನ್ನು ನೀಡಿದೆ. ಮಹದೇಶ್ವರ ಬೆಟ್ಟದ ಪಂಚಾಯಿತಿ ಅಧಿಕಾರಿಗಳು ನಮ್ಮ ಗ್ರಾಮಗಳ ರಸ್ತೆಯನ್ನು ಅಭಿವೃದ್ಧಿ ಮಾಡಲು ಸೂಚಿಸಿದ್ದಾರೆ. ಗ್ರಾಮಸ್ಥರು ಕೆಲಸ ಆರಂಭಿಸಿದ್ದು, ವಾಹನಗಳು ಸಂಚಾರ ಮಾಡುವಂತಹ ಕಚ್ಚಾ ರಸ್ತೆ ನಿರ್ಮಾಣವಾಗಲಿದೆ’ ಎಂದರು.

ADVERTISEMENT

‘ಈ ಭಾಗದಲ್ಲಿ ವಾಹನಗಳ ಸಂಚಾರ ಇಲ್ಲದಿರುವುದರಿಂದ ಸರ್ಕಾರಿ ಯೋಜನೆಗಳ ಪ್ರಗತಿ ಕುಂಠಿತಗೊಳ್ಳುತ್ತಿದ್ದವು. ಜಿಲ್ಲಾ ಪಂಚಾಯಿತಿ ಆದೇಶದ ಮೇರೆಗೆ ನಮ್ಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ನಾಗಮಲೆ, ಪಡಸಲನತ್ತ, ದೊಡ್ಡಾಣೆ ಹಾಗೂ ಇನ್ನಿತರ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಗ್ರಾಮಸ್ಥರಿಗೂ ಖಷಿಯಾಗಿದೆ’ ಎಂದುಪಂಚಾಯಿತಿ ಅಧಿಕಾರಿ ರಾಜಕುಮಾರ್ ಹಾಗೂ ಬಿಲ್ ಕಲೆಕ್ಟರ್ ಮಹೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.