ADVERTISEMENT

ಮೊಬೈಲ್ ಬಳಕೆ ಕಡಿಮೆ ಮಾಡಿ: ಶಾಸಕ ಗಣೇಶ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:03 IST
Last Updated 3 ಸೆಪ್ಟೆಂಬರ್ 2025, 2:03 IST
ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗ್ರಾಹಕ ಜಾಗೃತಿ ಮತ್ತು ಸೈಬರ್ ಹೈಜಿನ್ ಕುರಿತ ಇತ್ತೀಚಿನ ಬೆಳವಣಿಗೆ ಕಾರ್ಯಾಗಾರವನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ಉದ್ಘಾಟಿಸಿದರು
ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗ್ರಾಹಕ ಜಾಗೃತಿ ಮತ್ತು ಸೈಬರ್ ಹೈಜಿನ್ ಕುರಿತ ಇತ್ತೀಚಿನ ಬೆಳವಣಿಗೆ ಕಾರ್ಯಾಗಾರವನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ಉದ್ಘಾಟಿಸಿದರು   

ಗುಂಡ್ಲುಪೇಟೆ: ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕೆಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ ಟೆಲಿಕಾಂ ರೆಗ್ಯೂಲೆಟರಿ ಅಥಾರಿಟಿ ಆಫ್ ಇಂಡಿಯಾ, ಚಾಮರಾಜನಗರ ಬಾಲಕೇದರರ ಹಿತರಕ್ಷಣಾ ಸಂಘ ಇವರ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಹಕ ಜಾಗೃತಿ ಮತ್ತು ಸೈಬರ್ ಹೈಜಿನ್ ಕುರಿತ ಇತ್ತೀಚಿನ ಬೆಳವಣಿಗೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮೊಬೈಲ್ ಬಳಕೆದಾರರಲ್ಲಿ ವಿದ್ಯಾರ್ಥಿ ವರ್ಗವು ಪ್ರಮುಖವಾಗಿರುವ ಕಾರಣ ಸೈಬರ್ ಅಪರಾಧಗಳಿಂದ ದೂರ ಇರುವ ಮತ್ತು ತಂತ್ರಜ್ಞಾನದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಸೈಬರ್ ಅಪರಾಧಗಳಿಗೆ ಎಲ್ಲ ಸಂದರ್ಭಗಳಲ್ಲೂ ದೂರು ಕೊಡುವುದು ಕಷ್ಟ. ನಾವು ಸೈಬರ್ ಕ್ರೈಂ ಮಾಡದಂತೆ ಮತ್ತು ಒಳಗಾಗದಂತೆ ಎಚ್ಚರ ವಹಿಸಲು ಜಾಗೃತಿ ಬಹಳ ಮುಖ್ಯ. ಫೇಸ್‍ಬುಕ್, ವಾಟ್ಸಆ್ಯಪ್, ಇನ್‍ಸ್ಟ್ರಾಗ್ರಾಂ, ಎಕ್ಸ್‌ ಇತರೆ ಯಾವುದೇ ಮೊಬೈಲ್ ಅಪ್ಲಿಕೇಷನ್‍ಗಳು ಬಳಕೆದಾರರನ್ನು ಆಕರ್ಷಿಸುತ್ತವೆ. ಕೆಲವು ಅಪರಾಧಕ್ಕೆ ಪ್ರಚೋದನೆ ನೀಡುತ್ತವೆ. ಬಳಕೆ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವಾಗ ಎಚ್ಚರ ತಪ್ಪಿದರೆ ಸೈಬರ್ ಅಪರಾಧ ಬಳಕೆದಾರರನ್ನು ಸುತ್ತಿಕೊಳ್ಳುತ್ತದೆ. ಆದ್ದರಿಂದ ಇದರ ಬಗ್ಗೆ ನಿಗಾ ವಹಿಸಿ ಎಂದು ತಿಳಿಸಿದರು.

‘ಮೊಬೈಲ್ ಬಳಕೆಯಿಂದ ನಾವು ತಂತ್ರಜ್ಞಾನವನ್ನು ಮುಂದೆ ತರುತ್ತಿದ್ದೇವೆ. ಆದರೆ ಬಳಕೆ ಅತಿಯಾದರೆ ನಾವು ಹಿಂದೆ ಹೋದಂತಾಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಜಂಜಾಟಗಳು ಇರುತ್ತವೆ. ಆದ್ದರಿಂದ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಕಾಲ ಕಳೆಯಿರಿ’ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ಬೇಡಿಕೆಯಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸ್ ಶೆಲ್ಟರ್ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳ ಸುರಕ್ಷತೆ ಸಲುವಾಗಿ, ಸುತ್ತುಗೋಡೆ ನಿರ್ಮಿಸಲು ಹೆಚ್ಚಿನ ಅನುದಾನ ಬೇಕಿದ್ದು, ಅನುದಾನ ಒದಗಿಸಲು ಕಾಲವಕಾಶಬೇಕೆಂದು ತಿಳಿಸಿದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ /ಮಾತನಾಡಿ, ಡಿಜಿಟಲ್ ಸಾಧನಗಳು, ನೆಟ್‌ವರ್ಕ್‌ಗಳು ವೈಯಕ್ತಿಕ ಡಾಟಾವನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಬಳಕೆ ಜತೆಗೆ ಜಾಗೃತಿ ಕಡೆಗೆ ಗಮನ ಕೊಡಬೇಕು. ತಂತ್ರಜ್ಞಾನದಲ್ಲಿ ಹೊಸ ಅಪ್‌ಡೇಟ್‍ಗಳು ಬರುವ ಕಾರಣ ಈ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಿ. ಸೈಬರ್ ಅಪರಾಧಗಳ ಸಂದರ್ಭದಲ್ಲಿ ಧೃತಿಗೆಡುವ ಬದಲು ಈ ಬಗ್ಗೆ ಇಲಾಖೆಯೊಂದಿಗೆ ಮಾಹಿತಿ ಹಂಚಿಕೊಳ್ಳಿ ಎಂದು ತಿಳಿಸಿದರು.

ಕಾಲೇಜು ಪ್ರಾಂಶುಪಾಲರಾದ ಜಿ.ಬಿ.ಪವಿತ್ರ, ಕರ್ನಾಟಕ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ ಟೆಲಿಕಾಂ ರೆಗ್ಯೂಲೆಟರಿ ಅಥಾರಿಟಿ ಆಫ್ ಇಂಡಿಯಾ ಸಂಸ್ಥಾಪಕ ವಿ.ಕೆ.ಸೋಮಶೇಖರ್, ಚಾಮರಾಜನಗರ ಬಾಲಕೇದರರ ಹಿತರಕ್ಷಣಾ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಪಿ.ಕೃಷ್ಣಮೂರ್ತಿ ಇತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.