ADVERTISEMENT

ಚಾಮರಾಜನಗರ: ಇಲ್ಲಿ ಹಾಸ್ಟೆಲ್‌ಗಳಿವೆ, ವಿದ್ಯಾರ್ಥಿಗಳೇ ಇಲ್ಲ!

ಜಿಲ್ಲೆಯಲ್ಲಿ ವಿಚಿತ್ರ ಸನ್ನಿವೇಶ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಕೊರತೆ, ಫಲ ನೀಡದ ಇಲಾಖೆಗಳ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 15:42 IST
Last Updated 3 ಅಕ್ಟೋಬರ್ 2021, 15:42 IST
ಅನಿಲ್‌
ಅನಿಲ್‌   

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ ಹಾಸ್ಟೆಲ್‌ಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ.

ಎಲ್ಲ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದು, ಹಾಸ್ಟೆಲ್‌ಗಳ ಕೊರತೆ ಉಂಟಾದರೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇದಕ್ಕೆ ತದ್ವಿರುದ್ಧ ಸನ್ನಿವೇಶವಿದೆ. ಹಾಸ್ಟೆಲ್‌ಗಳಿಗೆ ಮಂಜೂರಾತಿ ಆಗಿರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯ ಶೇ 60ರಷ್ಟು ವಿದ್ಯಾರ್ಥಿಗಳು ಕೂಡ ಹಾಸ್ಟೆಲ್‌ಗೆ ಸೇರ್ಪಡೆಯಾಗುತ್ತಿಲ್ಲ. ಹಾಸ್ಟೆಲ್‌ಗಳನ್ನು ನಿರ್ವಹಿಸುವ ಇಲಾಖೆಗಳು ಪ್ರತಿ ವರ್ಷ ಮಕ್ಕಳನ್ನು ಹಾಸ್ಟೆಲ್‌ಗಳಿಗೆ ಆಕರ್ಷಿಸುವುದಕ್ಕಾಗಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಯಶಸ್ಸು ಸಿಗುತ್ತಿಲ್ಲ.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 99 ಹಾಸ್ಟೆಲ್‌ಗಳಿವೆ. ಅತಿ ಹೆಚ್ಚು ಅಂದರೆ 56 ಹಾಸ್ಟೆಲ್‌ಗಳು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿವೆ. 31 ಹಾಸ್ಟೆಲ್‌ಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿವೆ. 9 ಹಾಸ್ಟೆಲ್‌ಗಳು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿಯಂತ್ರಣದಲ್ಲಿದ್ದರೆ, ಮೂರು ಹಾಸ್ಟೆಲ್‌ಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿವೆ.

ADVERTISEMENT

99 ಹಾಸ್ಟೆಲ್‌ಗಳಿಗೆ ಒಟ್ಟು8,670 ಸೀಟುಗಳು ಮಂಜೂರಾಗಿವೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಹೆಚ್ಚು ಮಕ್ಕಳು ದಾಖಲಾಗುತ್ತಿಲ್ಲ. 2019–20ನೇ ಶೈಕ್ಷಣಿಕ ಸಾಲಿನ ಅಂಕಿ ಅಂಶಗಳನ್ನು ಗಮನಿಸಿದರೂ ಹಾಸ್ಟೆಲ್‌ಗಳಲ್ಲಿ ದಾಖಲಾದವರ ಸಂಖ್ಯೆ ಶೇ 60 ದಾಟುವುದಿಲ್ಲ.

ಸಮಾಜ ಕಲ್ಯಾಣ ಇಲಾಖೆಯ 56 ಹಾಸ್ಟೆಲ್‌ಗಳಲ್ಲಿ 5,845 ವಿದ್ಯಾರ್ಥಿಗಳನ್ನು ದಾಖಲು ಮಾಡುವ ಸಾಮರ್ಥ್ಯವಿದ್ದು, ಈ ವರ್ಷ ಇದುವರೆಗೆ 1,193 ಮಕ್ಕಳು ದಾಖಲಾಗಿದ್ದಾರೆ. ಈ ತಿಂಗಳ 30ರವರೆಗೂ ದಾಖಲಾತಿಗೆ ಅವಕಾಶ ಇದೆ. 2019–20ನೇ ಸಾಲಿನಲ್ಲಿ ಇಷ್ಟು ಹಾಸ್ಟೆಲ್‌ಗಳಲ್ಲಿ 2,852 ಮಂದಿ ದಾಖಲಾಗಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 31 ಹಾಸ್ಟೆಲ್‌ಗಳಲ್ಲಿ 2,705 ಮಕ್ಕಳಿಗೆ ಸೇರ್ಪಡೆಯಾಗಲು ಅವಕಾಶವಿದೆ. ಈ ವರ್ಷ ಇದುವರೆಗೆ 724 ಮಕ್ಕಳಷ್ಟೇ ದಾಖಲಾಗಿದ್ದಾರೆ. ಪ್ರತಿ ವರ್ಷ 1,700ರಿಂದ 1,800 ಮಕ್ಕಳು ದಾಖಲಾಗುತ್ತಾರೆ.

ಹಾಸ್ಟೆಲ್‌ ಸ್ಥಳಾಂತರದ ಭೀತಿ: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಹಾಸ್ಟೆಲ್‌ಗಳು ಸಿಬ್ಬಂದಿ ಸಹಿತ ಬೇರೆ ಕಡೆ ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಾಗಿದೆ. ಇತ್ತೀಚೆಗೆ ಜಿಲ್ಲೆ ಭೇಟಿ ನೀಡಿದ್ದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್‌ ಅವರು ವಿದ್ಯಾರ್ಥಿಗಳು ಕಡಿಮೆ ಇರುವ ಅಥವಾ ಶೂನ್ಯ ದಾಖಲಾತಿ ಇರುವ ಹಾಸ್ಟೆಲ್‌ಗಳನ್ನು ಅಗತ್ಯವಿರುವ ಜಿಲ್ಲೆಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳಿಗೆ ಹೇಳಿದ್ದರು.

2020ರ ಜನವರಿಯಲ್ಲಿ ಜಿಲ್ಲೆಗೆ ಮಂಜೂರಾಗಿದ್ದ ಐದು ಹಾಸ್ಟೆಲ್‌ಗಳನ್ನು ವಿದ್ಯಾರ್ಥಿಗಳು ಇಲ್ಲ ಎಂಬ ಕಾರಣಕ್ಕೆ ಸಿಬ್ಬಂದಿ ಸಮೇತ ಬಾಗಲಕೋಟೆ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಈ ಹಾಸ್ಟೆಲ್‌ಗಳು ಇನ್ನೂ ಕಾರ್ಯಾರಂಭ ಮಾಡಿರಲಿಲ್ಲ. ಆದರೆ, ಸಿಬ್ಬಂದಿ ನೇಮಕಾತಿ ಎಲ್ಲ ಆಗಿತ್ತು.

ಪೋಷಕರು ಏನಂತಾರೆ...?

ಮಕ್ಕಳನ್ನು ಹಾಸ್ಟೆಲ್‍ಗೆ ಸೇರಿಸಲು ಕೋವಿಡ್‌ ಭಯ ಕಾಡುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಮಕ್ಕಳನ್ನು ಹಾಸ್ಟೆಲ್‍ಗೆ ಸೇರಿಸಲು ಹಿಂಜರಿಕೆಯಾಗುತ್ತಿದೆ. ಈ ಹಿಂದೆ ಮನೆಯಲ್ಲಿ ಮೂರ್ನಾಲ್ಕು ಮಕ್ಕಳಿದ್ದರು. ಈಗ ಒಬ್ಬರೋ ಇಬ್ಬರು ಇದ್ದಾರೆ. ಹೀಗಿರುವಾಗ ಮನೆಯಲ್ಲೇ ಇದ್ದು ಓದು ಮುಂದರೆಸಲಿ ಎಂಬ ನಿಲುವು ಪೋಷಕರದ್ದು.

–ಶಿವಕುಮಾರ್, ಸಂತೇಮರಹಳ್ಳಿ

ಕೋವಿಡ್ ಭಯದಿಂದಾಗಿ ಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ಪೋಷಕರಿಗೆ ಅರಿವು ಮೂಡಿಸಿ ಮನವರಿಕೆ ಮಾಡಲು ಯತ್ನಿಸಬೇಕು.

–ಅನಿಲ್, ಕೌದಳ್ಳಿ, ಹನೂರು ತಾಲ್ಲೂಕು

ಮಗಳನ್ನು 10 ದಿನಗಳ ಹಿಂದೆಯಷ್ಟೇ ಹಾಸ್ಟೆಲ್‌ಗೆ ಸೇರಿಸಿದ್ದೇನೆ. ಕೋವಿಡ್‌ ಕಾಲದಲ್ಲಿ ಏನಾಗತ್ತದೋ ಎಂಬ ಭಯ ಕಾಡುತ್ತಿದೆ. ಆದರೆ ನಮಗೆ ಅವಳ ವಿದ್ಯಾಭ್ಯಾಸವೂ ಮುಖ್ಯ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸು ಎಂದು ಹೇಳಿದ್ದೇವೆ. ಹಾಸ್ಟೆಲ್‌ ಸಿಬ್ಬಂದಿ ಕೂಡ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.

–ನಿಂಗರಾಜು, ಕೊಳ್ಳೇಗಾಲ

--

ಅಧಿಕಾರಿಗಳು ಏನಂತಾರೆ...?

ಪೋಷಕರಲ್ಲಿ ಜಾಗೃತಿ ಕೊರತೆ

ನಮ್ಮ ಇಲಾಖೆ ಅಡಿಯಲ್ಲಿ 31 ಹಾಸ್ಟೆಲ್‌ಗಳಿವೆ. ಕೋವಿಡ್‌ ಕಾರಣದಿಂದ ಕಳೆದ ವರ್ಷ ಹೆಚ್ಚು ಮಕ್ಕಳು ದಾಖಲಾಗಿರಲಿಲ್ಲ. ಈ ಬಾರಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವರ್ಷ ಗರಿಷ್ಠ ಎಂದರೆ ಶೇ 70ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಉತ್ತಮ ಹಾಸ್ಟೆಲ್‌ಗಳಿದ್ದು, ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದರೂ, ಪೋಷಕರು ಮಕ್ಕಳನ್ನು ಹಾಸ್ಟೆಲ್‌ಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳು, ವೃತ್ತಿ ಪರ ಕೋರ್ಸ್‌ ವಿದ್ಯಾರ್ಥಿಗಳ ಹಾಸ್ಟೆಲ್‌ಗಳು ಭರ್ತಿಯಾಗುತ್ತವೆ. ವಾರ್ಡನ್‌ಗಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸಿ ಹಾಸ್ಟೆಲ್‌ನಲ್ಲಿರುವ ಸೌಲಭ್ಯಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದೇವೆ.

– ಬಿ.ರೇವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ

ವಸತಿ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು

ಪ್ರತಿ ವರ್ಷ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್‌ಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವುದಿಲ್ಲ ಎನ್ನುವುದು ನಿಜ. ಜಿಲ್ಲೆಯಲ್ಲಿ ಮೊರಾರ್ಜಿ ದೇಸಾಯಿ, ಅಂಬೇಡ್ಕರ್‌, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿದ್ದು, ಮಕ್ಕಳು ಅಲ್ಲಿಗೆ ಹೆಚ್ಚು ಹೆಚ್ಚು ಸೇರ್ಪಡೆಯಾಗುತ್ತಿದ್ದಾರೆ. ಇದರ ಜೊತೆಗೆ ಜಿಲ್ಲೆಯ ವಿದ್ಯಾರ್ಥಿಗಳು ಮೈಸೂರಿನಲ್ಲಿ ಶಿಕ್ಷಣ ಪಡೆಯಲು ಹೆಚ್ಚು ಒಲವು ತೋರುತ್ತಿದ್ದಾರೆ. ಇದರ ನಡುವೆಯೂ, ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಹಾಸ್ಟೆಲ್‌ನಲ್ಲಿ ಉಳಿಯುವುದರ ಲಾಭ ಹಾಗೂ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ.

–ಭಾಗೀರಥಿ, ಉಪನಿರ್ದೇಶ‌ಕಿ ಸಮಾಜ ಕಲ್ಯಾಣ ಇಲಾಖೆ

ಹೋಬಳಿ, ಗ್ರಾಮೀಣ ಮಟ್ಟದಲ್ಲಿ ಕಡಿಮೆ ಮಕ್ಕಳು

10 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ವಸತಿ ಸಹಿತ ಶಾಲೆಗಳು ಇರಲಿಲ್ಲ. ಈಗ 22 ಮೊರಾರ್ಜಿ ದೇಸಾಯಿ ಶಾಲೆಗಳಿವೆ. ಇದಲ್ಲದೇ ಇತರ ವಸತಿ ಶಾಲೆಗಳೂ ಇವೆ. ಇತ್ತೀಚೆಗೆ ಮಕ್ಕಳು ಅಲ್ಲಿಗೆ ಸೇರಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನಮ್ಮ ಹಾಸ್ಟೆಲ್‌ಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಗ್ರಾಮೀಣ ಮತ್ತು ಹೋಬಳಿ ಮಟ್ಟದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಈಗ ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲೂ ಶಾಲಾ ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಮನೆಯಿಂದಲೇ ಹೋಗಿ ಬರುತ್ತಿದ್ದಾರೆ. ಈ ಕಾರಣಕ್ಕೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.

– ಎಸ್‌.ಹೊನ್ನೇಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ

ಜಾಗೃತಿ ಮೂಡಿಸಲಾಗುತ್ತಿದೆ...

ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ಮೂರು ಹಾಸ್ಟೆಲ್‌ಗಳು ಮಾತ್ರ ಇವೆ. ಚಾಮರಾಜನಗರದಲ್ಲಿ ಎರಡು ಹಾಸ್ಟೆಲ್‌ಗಳಿವೆ. ಗುಂಡ್ಲುಪೇಟೆಯಲ್ಲಿ ಒಂದಿದೆ.ಗುಂಡ್ಲುಪೇಟೆ ಭಾಗದಲ್ಲಿ ನಮ್ಮ ಹಾಸ್ಟೆಲ್‌ಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಕೊಳ್ಳೇಗಾಲ ಭಾಗದಲ್ಲಿ ಹಾಸ್ಟೆಲ್‌ ಇಲ್ಲ. ಪೂರ್ಣ ಪ್ರಮಾಣದಲ್ಲಿ ಸೀಟು ಭರ್ತಿಯಾಗುವುದಿಲ್ಲ. ಶಾಲಾ ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ

– ಪ್ರೀತಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ

---

ಹಾಸ್ಟೆಲ್‌ನಲ್ಲಿ ಉತ್ತಮ ಊಟ, ವಸತಿ ಕಲ್ಪಿಸಲಾಗಿದೆ. ಪ್ರತಿದಿನ ಸ್ನಾನ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸೌಲಭ್ಯಗಳು ಕಲಿಕೆಗೆ ನೆರವಾಗಿದೆ
ಮುರಳಿ ಎಂ.ಎಲ್., ವಿದ್ಯಾರ್ಥಿ,ಮಲ್ಲಿಗೆಹಳ್ಳಿ ಯಳಂದೂರು ತಾಲ್ಲೂಕು

-------------

ಕೆಸ್ತೂರು ಗ್ರಾಮದ ಹಾಸ್ಟೆಲ್ನಲ್ಲಿ ಉಳಿದಿದ್ದೇನೆ. ಊಟ, ವಸತಿಯೊಂದಿಗೆ ಉಳಿದುಕೊಳ್ಳಲು ತೊಂದರೆ ಇಲ್ಲ. ಕೋವಿಡ್‌ ಮುನ್ನೆಚ್ಚರಿಕೆ ಪಾಲನೆ ಕಡ್ಡಾಯವಾಗಿದೆ
ಮನೋಜ್ ವಿದ್ಯಾರ್ಥಿ, ಕಟ್ನವಾಡಿ, ಯಳಂದೂರು ತಾಲ್ಲೂಕು]

---------------

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಬಿ.ಬಸವರಾಜು, ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್ ವಿ., ಮಲ್ಲೇಶ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.