ಹನೂರು: ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದ ಸಂಸದ ಸುನಿಲ್ ಬೋಸ್ ಅವರಿಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಪತ್ರಕರ್ತರ ಭವನದ ಮುಂದುವರಿದ ಕಾಮಗಾರಿಗೆ ಅನುದಾನ ನೀಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಂಸದ ಸುನಿಲ್ ಬೋಸ್, ಚಾಮರಾಜನಗರ ಜಿಲ್ಲೆಯ ಗಡಿ ತಾಲ್ಲೂಕಿನಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ. ಈಗಾಗಲೇ ಮಾಜಿ ಸಂಸದ, ದಿವಂಗತ ಶ್ರೀನಿವಾಸ್ ಪ್ರಸಾದ್ ಅವರು ಸಹ ಅವರ ಅವಧಿಯಲ್ಲಿ ₹5 ಲಕ್ಷ ಅನುದಾನ ನೀಡಿ, ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಪತ್ರಕರ್ತ ಸಂಘದವರು ನಿರ್ಮಿತಿ ಕೇಂದ್ರಕ್ಕೆ ಹಣ ವರ್ಗಾಯಿಸುವಂತೆ ಮನವಿ ನೀಡಿದ್ದರಿಂದ ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ಅನುದಾನ ವರ್ಗಾಯಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಮುಂದುವರಿದ ಕಾಮಗಾರಿಗೆ ಸಂಸದರ ನಿಧಿಯಿಂದ ₹10 ಲಕ್ಷ ಅನುದಾನ ನೀಡುತ್ತೇನೆ. ತಾಲ್ಲೂಕು ಮಟ್ಟದಲ್ಲಿ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಿಸಿ, ಸಾರ್ವಜನಿಕರು ಹಾಗೂ ಪತ್ರಕರ್ತರು ಈ ಕಟ್ಟಡ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಮಹಾದೇಶ್, ಗೌರವ ಅಧ್ಯಕ್ಷ ದೇವರಾಜ್ ನಾಯ್ಡು, ನಿರ್ದೇಶಕ ಸೋಮಶೇಖರ್, ಸಂಸದರ ಆಪ್ತ ಸಹಾಯಕ ಸಂತೋಷ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.