ADVERTISEMENT

ಸಿಗದ ಚಲನ್‌: ತೆರಿಗೆ ಕಟ್ಟಲು ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
ಕರಿಬಸವಯ್ಯ
ಕರಿಬಸವಯ್ಯ   

ಚಾಮರಾಜನಗರ: ನಗರದ ಸಾರ್ವಜನಿಕರು ನಗರಸಭೆ ಕಚೇರಿಯಲ್ಲಿ ವಿವಿಧ ತೆರಿಗೆಗಳನ್ನು ಕಟ್ಟಲು 15 ದಿನಗಳಿಂದ ಪರದಾಟ ನಡೆಸುತ್ತಿದ್ದಾರೆ.

ನಿವೇಶನ, ಮನೆ, ಕಟ್ಟಡ ಸೇರಿದಂತೆ ವಿವಿಧ ತೆರಿಗೆಗಳನ್ನು ಪಾವತಿಸಲು ಚಲನ್‌ ಸಿಗದಿರುವುದರಿಂದ ಜನರು ತೊಂದರೆಗೆ ಸಿಲುಕಿದ್ದಾರೆ. ತಾಂತ್ರಿಕ ಕಾರಣದಿಂದ ಈ ಸಮಸ್ಯೆ ಉಂಟಾಗಿದ್ದು, ರಾಜ್ಯದಾದ್ಯಂತ ಇದೇ ರೀತಿ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಏಪ್ರಿಲ್‌ ತಿಂಗಳಲ್ಲಿ ತೆರಿಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ನೀಡುವ ಘೋಷಣೆಯನ್ನು ನಗರಸಭೆ ಆಡಳಿತ ಮಾಡಿದೆ. ಹಾಗಾಗಿ, ನಿವೇಶನ, ಕಟ್ಟಡಗಳ ಮಾಲೀಕರು ಕಂದಾಯ ಪಾವತಿಸಲು ಆಸಕ್ತಿ ತೋರುತ್ತಿದ್ದಾರೆ. ಹಲವರು ನಗರಸಭೆಗೆ ಕಚೇರಿಗೆ ಬಂದು, ತೆರಿಗೆ ಕಟ್ಟಲು ಸಾಧ್ಯವಾಗದೇ ವಾಪಸ್‌ ಹೋಗುತ್ತಿದ್ದಾರೆ.

ADVERTISEMENT

‘ರಿಯಾಯಿತಿ ಇದೆ ಎಂಬ ಕಾರಣಕ್ಕೆ ಏಪ್ರಿಲ್‌ ಒಂದರಿಂದ ನಗರಸಭೆ ಕಚೇರಿಗೆ ಅಲೆದಾಡುತ್ತಿದ್ದಾರೆ. ನಾನೂ ಪ್ರತಿ ದಿನ ಹೋಗುತ್ತಿದ್ದೇನೆ. ಚಲನ್‌ ಬರುತ್ತಿಲ್ಲ. ತಾಂತ್ರಿಕ ಸಮಸ್ಯೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಎಷ್ಟೋ ಮಂದಿ ಕಂದಾಯ ಕಟ್ಟುವ ಉದ್ದೇಶಕ್ಕಾಗಿ ಕೆಲಸಕ್ಕೆ ರಜೆ ಹಾಕಿ ಬರುತ್ತಾರೆ. ಆದರೆ, ಇಲ್ಲಿ ಕೆಲಸ ಆಗುತ್ತಿಲ್ಲ’ ಎಂದು ನಗರದ ನಿವಾಸಿ ಜೀಶಾನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಂತ್ರಿಕ ಸಮಸ್ಯೆ ಇದ್ದರೆ ಒಂದರೆಡು ದಿನಗಳಲ್ಲಿ ಪರಿಹರಿಸಲು ಸಾಧ್ಯವಿಲ್ಲವೇ? 15 ದಿನಗಳಾದರೂ ಬಗೆಹರಿದಿಲ್ಲ ಅಂದರೆ ಏನರ್ಥ? ಸೋಮವಾರದಿಂದ ಚಲನ್ ಸಿಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಏನಾಗುತ್ತದೋ ಕಾದು ನೋಡಬೇಕು' ಎಂದು ಅವರು ಹೇಳಿದರು.

ಕ್ರಮಕ್ಕೆ ಒತ್ತಾಯ:‘15 ದಿನಗಳಿಂದ ಕಚೇರಿಯಲ್ಲಿ ಕಂದಾಯದ ರಶೀದಿ ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಏಪ್ರಿಲ್ ತಿಂಗಳಲ್ಲಿ ಕಂದಾಯ ಪಾವತಿ ಮಾಡುವವರಿಗೆ ಶೇ 5ರಷ್ಟು ರಿಯಾಯಿತಿಯನ್ನೂ ಘೋಷಿಸಲಾಗಿದೆ. ಚಲನ್‌ ಸಿಗದಿರುವುದರಿಂದ ಜನರಿಗೆ ಇದರ ಪ್ರಯೋಜನವೂ ಆಗುತ್ತಿಲ್ಲ. ಸರಿಯಾಗಿ ತೆರಿಗೆ ಸಂಗ್ರಹ ಆಗದೇ ಇರುವುದರಿಂದ ಪೌರ ಕಾರ್ಮಿಕರಿಗೆ ಕೊಡಬೇಕಾಗಿರುವ ಸಂಬಳಕ್ಕೂ ತೊಂದರೆ ಉಂಟಾಗಿದೆ. ಶೀಘ್ರವಾಗಿ ಈ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ನಗರಸಭಾ ಸದಸ್ಯ ಎಂ.ಮಹೇಶ್‌ ಅವರು ಒತ್ತಾಯಿಸಿದರು.

ಇನ್ನೆರಡು ದಿನಗಳಲ್ಲಿ ಪರಿಹಾರ

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ನಗರಸಭಾ ಆಯುಕ್ತ ಕರಿಬಸವಯ್ಯ ಅವರು, 'ಪರಿಷ್ಕೃತ ತೆರಿಗೆ ದರವನ್ನು ವೆಬ್ಸೈಟ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ಈ ಪ್ರಕ್ರಿಯೆ ನಡೆಯುತ್ತಿದ್ದು, ಇದರಿಂದಾಗಿ ಚಲನ್ ಬರುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.