ADVERTISEMENT

ಹಳ್ಳ ಹಿಡಿದ ಹಳ್ಳಿ ರಸ್ತೆ, ಗ್ರಾಮೀಣ ಬದುಕು ದುಸ್ತರ

ಒಂದೆರಡು ಮಳೆಗೆ ಗ್ರಾಮೀಣ ರಸ್ತೆಗಳ ನೈಜ ದರ್ಶನ, ಅಧಿಕಾರಿಗಳು, ಜನಪ್ರತಿನಧಿಗಳ ನಿರ್ಲಕ್ಷ್ಯದ ಆರೋಪ

ನಾ.ಮಂಜುನಾಥ ಸ್ವಾಮಿ
Published 2 ಆಗಸ್ಟ್ 2021, 1:15 IST
Last Updated 2 ಆಗಸ್ಟ್ 2021, 1:15 IST
ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಈಚೆಗೆ ಸುರಿದ ಮಳೆಗೆ ರಸ್ತೆಯಲ್ಲಿ ಕೆಸರು ತುಂಬಿ ಸಂಚಾರ ದುಸ್ತರವಾಗಿದೆ
ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಈಚೆಗೆ ಸುರಿದ ಮಳೆಗೆ ರಸ್ತೆಯಲ್ಲಿ ಕೆಸರು ತುಂಬಿ ಸಂಚಾರ ದುಸ್ತರವಾಗಿದೆ   

ಯಳಂದೂರು: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ದಾರಿ ತೋರಬೇಕಾಗಿರುವ ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹದಗೆಟ್ಟು ಹಳ್ಳಿಗಳ ಜನರ ಬದುಕನ್ನು ದುಸ್ತರಗೊಳಿಸಿವೆ.

ಒಂದು ಮಳೆ ಬಂದರೆ ಸಾಕು, ಗ್ರಾಮೀಣ ರಸ್ತೆಗಳ ನೈಜ ದರ್ಶನವಾಗುತ್ತದೆ. ಕೆಲವು ವಾರಗಳಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಹಳ್ಳಿಗಳ ರಸ್ತೆಗಳು ಹದಗೆಟ್ಟಿವೆ. ಗುಂಡಿ ಬಿದ್ದು, ನೀರು ತುಂಬಿ ಜನರ ಸುಗಮ ಸಂಚಾರಕ್ಕೆ ಸಂಚಕಾರ ತಂದಿವೆ.

ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ರಸ್ತೆ ನಿರ್ಮಿಸಲು ಯೋಜನೆಗಳಿಗೆ ಕೊರತೆ ಇಲ್ಲ. ಆದರೆ, ಯೋಜನೆ ಅನುಷ್ಠಾನವನ್ನು ವೈಜ್ಞಾನಿಕವಾಗಿ ನಡೆಸುವುದಿಲ್ಲ.ಅಗತ್ಯ ಇರುವ ಕಡೆ ರಸ್ತೆ ದುರಸ್ತಿ, ಒಳ ಚರಂಡಿ ವ್ಯವಸ್ಥೆ ಕಲ್ಪಿಸುವುದಿಲ್ಲ. ಜನ,ಜಾನುವಾರು ಓಡಾಡುವ ಸ್ಥಳಗಳಲ್ಲಿ ಜನೋಪಯೋಗಿ ಕೆಲಸ ಮಾಡುವುದಿಲ್ಲ. ಉತ್ತಮ ದಾರಿಇರುವೆಡೆ ಮಾತ್ರ ಮಣ್ಣು ಸುರಿದು ಕೈತೊಳೆದುಕೊಳ್ಳುತ್ತಾರೆ. ಸರಿಯಾಗಿ ಕಲ್ಲು, ಮರಳುಮಿಶ್ರಣ ಮಾಡದೆ ಬಿಡಲಾಗುತ್ತದೆ. ಪರಿಣಾಮ ರಸ್ತೆ ಕೆಲವೇ ತಿಂಗಳಲ್ಲಿ ಕಲ್ಲು ಮೇಲೆಬರುತ್ತದೆ. ಭಾರಿ ಮಳೆ ಸುರಿದರೆ ರಸ್ತೆಯ ಕೆಲಸದ ನೈಜ ಬಣ್ಣ ಬಯಲಾಗುತ್ತದೆ
ಎನ್ನುತ್ತಾರೆ ಬಹಳಷ್ಟು ಗ್ರಾಮಸ್ಥರು.

ADVERTISEMENT

ತಾಲ್ಲೂಕು ವ್ಯಾಪ್ತಿಯ ಯಾವುದೇ ಗ್ರಾಮಕ್ಕೆ ಹೋಗಿ ನೋಡಿದರೂ, ಟಾರು ಹಾಕದ, ಗುಂಡಿ ಬಿದ್ದ, ಕಳಪೆ ಕಾಮಗಾರಿಯ ರಸ್ತೆಗಳು ಕಾಣಸಿಗುತ್ತವೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಇದು ತಿಳಿದಿದ್ದರೂ ಅವರದು ಜಾಣ ಕುರುಡು ವರ್ತನೆ ಎಂಬುದು ಜನರ ಆರೋಪ.

‘ಇತ್ತೀಚಿಗೆ ಸುರಿದ ಮಳೆಗೆ ಊರೊಳಗೆ ಸಂಚರಿಸುವುದೇ ಕಷ್ಟವಾಯಿತು. ದ್ವಿಚಕ್ರ ಮತ್ತುಸಣ್ಣ ವಾಹನಗಳು ಕೆಸರಿನಲ್ಲಿ ಸಿಲುಕಿತು. ಗುಂಡಿ ಬಿದ್ದ ಕಡೆ ವೃದ್ಧರು ಮತ್ತು ಮಕ್ಕಳುಇತರರ ನೆರವು ಪಡೆದು ತೆರಳಬೇಕಾಯಿತು. ಪಂಚಾಯಿತಿಗಳಲ್ಲಿ ಈ ಬಗ್ಗೆ ಗೊತ್ತಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಮಲ್ಲಿಗೆಹಳ್ಳಿ ಮಹೇಶ್ ಆರೋಪಿಸಿದರು.

‘ಹೊಸ ಬೀದಿಯ ರಸ್ತೆಗಳು ಏರು-ಪೇರಿನಿಂದ ಕೂಡಿದೆ. ಕೆಲವೊಮ್ಮೆ ಚರಂಡಿ ನೀರು ಬೀದಿ ಬದಿಸಂಗ್ರಹವಾಗುತ್ತವೆ. ಕೆಲವೆಡೆ ಸಿಸಿ ರಸ್ತೆ ನಿರ್ಮಿಸಿ, ನಡುವೆ ಮಣ್ಣಿನ ದಾರಿಯನ್ನುಹಾಗೆ ಬಿಟ್ಟಿದ್ದಾರೆ. ಇದರಿಂದ ಮನೆಗಳು ಆಳಕ್ಕೆ ಇಳಿದಿವೆ. ಮಳೆ ಸುರಿದರೆ ದಾರಿ,ಬೀದಿ ಗೊತ್ತಾಗದಂತೆ ನೀರು ತುಂಬಿಕೊಳ್ಳುತ್ತದೆ’ ಎಂದು ಎಂದು ಕಂದಹಳ್ಳಿಉಪ್ಪಾರ ಬೀದಿಯ ಗೌರಮ್ಮ ಅವರು ದುಃಖಿಸಿದರು.

‘ಮಾಂಬಳ್ಳಿ, ಅಗರ ಸೇರಿದಂತೆ ಕೆಲವು ಗ್ರಾಮಗಳ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಅಗತ್ಯ ಇರುವ ಕಡೆ ಜಾಗ ಎತ್ತರಿಸಿಲ್ಲ. ಮಳೆಗೆ ಹೂಳು ಸೃಷ್ಟಿಯಾಗದಂತೆ ನೆಲಹಾಸುಗಟ್ಟಿಗೊಳಿಸಿಲ್ಲ. ಇಂತಹ ಕಡೆ ವಾಹನಗಳು ಹೂತು ಸಿಕ್ಕಿ ಬೀಳುತ್ತವೆ. ಚರಂಡಿಯಲ್ಲಿನೀರು ಹರಿಯದೆ ಮನೆಗಳ ಸುತ್ತ ಅನೈರ್ಮಲ್ಯ ನಿರ್ಮಾಣ ಆಗುತ್ತವೆ’ ಎಂದು ದೂರುತ್ತಾರೆಪರ್ವಿನ್ತಾಜ್ ಅವರು.

'ಸಮಸ್ಯೆ ಕೇಂದ್ರಿತ ಗ್ರಾಮಗಳಲ್ಲಿ ಸಭೆಗಳನ್ನು ಆಯೋಜಿಸಬೇಕು. ಊರಿಗೆ ಅಗತ್ಯಸೇವೆಗಳನ್ನು ಒದಗಿಸಲು ರೂಪುರೇಷೆ ತಯಾರಿಸಬೇಕು. ಆದರೆ, ಒಂದೇ ಗ್ರಾಮಕ್ಕೆ ಅನುದಾನಪೂರೈಸುವಷ್ಟು ಸಂಪನ್ಮೂಲ ಗ್ರಾಮ ಪಂಚಾಯಿತಿಗಳಲ್ಲಿ ಇರುವುದಿಲ್ಲ. ಹಾಗಾಗಿ, ಜಿಲ್ಲಾಮತ್ತು ತಾಲ್ಲೂಕು ಪಂಚಾಯಿತಿಗಳ ಸಹಕಾರ ಪಡೆದರೆ ಮಾತ್ರ ಜನೋಪಯೋಗಿ ಕಾಮಗಾರಿಕೈಗೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಜನಪ್ರತಿನಿಧಿಗಳು ಯೋಚಿಸಬೇಕಾದ ಅಗತ್ಯ ಇದೆ’
ಎಂದು ಮದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಅವರು ಅಭಿಪ್ರಾಯಪಟ್ಟರು.

ಜನರು ಏನಂತಾರೆ?

ಸುಮಾರ್ಗ ಯೋಜನೆ ಇಲ್ಲಿಲ್ಲ

‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ’ ಇದ್ದರೂ ಪ್ರಯೋಜನ ಆಗಿಲ್ಲ. ಗ್ರಾಮೀಣ ರಸ್ತೆಗಳಸುಧಾರಣೆಗಾಗಿ ಜಾರಿಗೆ ಬಂದಿರುವ 'ಗ್ರಾಮೀಣ ಸುಮಾರ್ಗ ಯೋಜನೆ'ಯನ್ನು ಜಾರಿಗೆ ತರಬೇಕು.ಇದರಿಂದ ಸರ್ವ ಋತು ರಸ್ತೆಗಳನ್ನು ನಿರ್ಮಿಸಲು ಸಾಧ್ಯ ಆಗುತ್ತದೆ. ಜನರು ಮಳೆಗಾಲದಲ್ಲಿನೆಮ್ಮದಿಯಿಂದ ಸಂಚರಿಸಬಹುದು.

– ನಂಜನಾಯಕ, ಕೃಷಿಕ, ಯರಿಯೂರು

ಪಕ್ಕದ ಮನೆಗೂ ತೆರಳುವಂತಿಲ್ಲ

ಜನರ ನೆಮ್ಮದಿ ಕಾಪಾಡುವಲ್ಲಿ ಸುಂದರ ರಸ್ತೆಗಳು ಅತ್ಯಗತ್ಯ. ಊರ ಒಳಭಾಗದಿಂದವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರು ಮುಖ್ಯ ರಸ್ತೆ ಸಂಪರ್ಕಿಸುವಾಗ ಬಹಳತೊಂದರೆ ಅನುಭವಿಸುತ್ತಾರೆ. ಇದರಿಂದ ಸರಿಯಾದ ಸಮಯಕ್ಕೆ ಬಸ್, ಆಟೊ ಹಿಡಿಯುವುದೇ ಕಷ್ಟವಾಗಿದೆ. ಮನೆಯಿಂದ ಮನೆಗೆ ತೆರಳಲು ಪ್ರಯಾಸ ಪಡಬೇಕಿದೆ.

– ಮಂಗಳಮ್ಮ, ನಾಯಕರ ಬಡಾವಣೆ, ಮಲಾರಪಾಳ್ಯ

ವಾಹನಗಳೇ ಕೆಸರಲ್ಲಿ ಸಿಲುಕುತ್ತವೆ

ಹತ್ತಾರು ವರ್ಷಗಳಿಂದ ಬೀದಿಗಳನ್ನು ನಿರ್ವಹಣೆ ಮಾಡದೆ ಹಾಗೆ ಬಿಡಲಾಗಿದೆ.ಮಳೆಗಾಲದಲ್ಲಿ ಊರು ತುಂಬ ನೀರು ತುಂಬಿ ಕೊಚ್ಚೆ ಗುಂಡಿ ಆಗುತ್ತದೆ. ಮನೆಯಿಂದ ವಾಹನಹೊರತರಲು ಆಗದ ದುಃಸ್ಥಿತಿ ಇದೆ. ಆಟೊ, ಟೆಂಪೊ, ಬೈಕ್‌ಗಳು ಕೆಸರಿನಲ್ಲಿ ಸಿಕ್ಕಿನಿಲ್ಲುವುದು ಇಲ್ಲಿ ಸಾಮಾನ್ಯ. ಪಂಚಾಯಿತಿಗಳು ಮಳೆಗಾಲಕ್ಕೂ ಮೊದಲು ಜನರಸಂಕಟ ನಿವಾರಿಸಲಲು ಕ್ರಮ ಕೈಗೊಳ್ಳಬೇಕು.

–ಪ್ರಮೋದ್, ಗ್ರಾಮಸ್ಥ ಮಲ್ಲಿಗೆಹಳ್ಳಿ

ಮಳೆಯಲ್ಲಿ ನೈಜ ಗ್ರಾಮ ದರ್ಶನ

ಕೆಲವೆಡೆ ಸಿಮೆಂಟ್ ರಸ್ತೆ ಮತ್ತು ಮಣ್ಣಿನ ರಸ್ತೆಗಳನ್ನು ಅಡ್ಡಾದಿಡ್ಡಿ ನಿರ್ಮಿಸಲಾಗಿದೆ. ಇದರಿಂದ ಮಳೆ ನೀರಿನ ಜೊತೆಗೆ ಚರಂಡಿ ನೀರು ರಸ್ತೆಗೆ ಹರಿದು,ಕ್ರಿಮಿ ಕೀಟಗಳ ಆಗರವಾಗುತ್ತದೆ. ಈ ಸಮಯ ಗೃಹ ಪ್ರವೇಶ ಮಾಡಲು ಸಾರ್ವಜನಿಕರು ಪರದಾಡಬೇಕಿದೆ. ಈ ಬಗ್ಗೆ ಪಂಚಾಯಿತಿಗೆ ದೂರಿದರೂ ಪ್ರಯೋಜನ ಆಗಿಲ್ಲ.

– ನಾಗೇಶ್, ಉಪ್ಪಾರ ಬಡಾವಣೆ ಕಂದಹಳ್ಳಿ.

ಸಂಚಾರಕ್ಕೆ ಯೋಗ್ಯ ರಸ್ತೆ ಬೇಕಿದೆ

ತಾಲ್ಲೂಕಿನ ಕೆಲವು ಗ್ರಾಮಗಳ ರಸ್ತೆ ಇದ್ದರೂ ಗುಣಮಟ್ಟದಿಂದ ಕೂಡಿಲ್ಲ. ಹಾದಿಯ ನಡುವೆತಿಪ್ಪೆ ರಾಶಿ, ಕೊಳಚೆ ಸೇರಿ ಕೊಚ್ಚೆ ಗುಂಡಿಯಾಗಿ ಬದಲಾಗುತ್ತದೆ. ಇದರಿಂದ ನಿವಾಸಿಗಳುಸಂಚರಿಸುವುದು ಕಷ್ಟ. ನೀರು ತುಂಬಿದ ಕೆಸರು ಗುಂಡಿಗಳು ಅಪಾಯಕ್ಕೂ ಆಹ್ವಾನನೀಡುತ್ತವೆ.

– ಗೀತಾ, ಪದವಿ ವಿದ್ಯಾರ್ಥಿನಿ, ಕೆಸ್ತೂರು

–––

‘ಗ್ರಾಮೀಣ ರಸ್ತೆಗಳಿಗೆ ಆದ್ಯತೆ’

ಲಾಕ್‌ಡೌನ್‌ ಕಾರಣದಿಂದ ಬಹಳಷ್ಟು ಕಾಮಗಾರಿಗಳು ನಿಧಾನವಾಗಿವೆ. ತಾಲ್ಲೂಕಿನ ಕೆರೆಕಟ್ಟೆ ಹಾಗೂ ಏರಿಗಳ ಪುನರುಜ್ಜೀವನಕ್ಕೆ ಖಾತ್ರಿ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಹಳ್ಳಿಗಳ ಕಿರು ರಸ್ತೆ ಪುನರ್‌ರಚನೆ, ನವೀಕರಣ, ಪುನರ್ ನಿರ್ಮಾಣ ಕಾಮಗಾರಿಗಳಿಗೆ ಒಂದೆರಡು ತಿಂಗಳಲ್ಲಿ ಆದ್ಯತೆ ನೀಡಲಾಗುವುದು. ಗ್ರಾಮ ಸ್ವರಾಜ್ ಯೋಜನೆಯಡಿ ರಸ್ತೆ, ಸೇತುವೆ, ಚರಂಡಿ ಅಭಿವೃದ್ಧಿಗೆ ಮಳೆಗಾಲದ ನಂತರ ಆದ್ಯತೆ ಕಲ್ಪಿಸಲಾಗುವುದು.

–ಆರ್.ಉಮೇಶ್,ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ, ಯಳಂದೂರು

–––

ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ರಸ್ತೆ: ಶಾಸಕ

ಕೊಳ್ಳೆಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಕಾಲೊನಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ದೆಸೆಯಲ್ಲಿ ಸುಧಾರಣೆ ಆಗಿದೆ. ಕೊಟ್ಯಂತರ ರೂಪಾಯಿ ಅನುದಾನ ತಂದು ಸಿಸಿ ರಸ್ತೆ, ನಮ್ಮ ಗ್ರಾಮ ನಮ್ಮ ರಸ್ತೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಮತ್ತು ಸುವರ್ಣಾ ಗ್ರಾಮೋದಯ ಯೋಜನೆಗಳಡಿ ಗ್ರಾಮೀಣ ರಸ್ತೆಗಳನ್ನು ವಿಸ್ತರಿಸಲಾಗಿದೆ.

ಕೆಲವೆಡೆ ನಿರ್ವಹಣೆ ಸಮಸ್ಯೆಯಿದೆ. ತಾಲ್ಲೂಕು, ಜಿಲ್ಲಾ ಹಾಗೂ ರಾಷ್ಟ್ರೀಯ ಹೆದ್ದಾರಿ ಎತ್ತರೀಕರಿಸಲಾಗಿದೆ. ಗ್ರಾಮ ರಸ್ತೆಗಳನ್ನು ಸುಧಾರಿಸಲು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

–ಎನ್. ಮಹೇಶ್,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.