ADVERTISEMENT

ಓಮೈಕ್ರಾನ್‌ ಕಾಟ; ಜಿಲ್ಲಾಡಳಿತದಿಂದ ದಂಡದ ಎಚ್ಚರಿಕೆ

ಶಾಲಾ ವಿದ್ಯಾರ್ಥಿಗಳಲ್ಲಿ ಸೋಂಕು; ಪೋಷಕರಲ್ಲಿ ಆತಂಕ, ನಿಯಮ ಪಾಲಿಸದ ಜನರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 15:11 IST
Last Updated 5 ಡಿಸೆಂಬರ್ 2021, 15:11 IST
ಜನರು ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಚಾಮರಾಜನಗರದ ಚಿತ್ರಮಂದಿರವೊಂದರ ಮುಂದೆ ಕಂಡು ಬಂದ ಮಾಸ್ಕ್‌ ಧರಿಸದೇ ಇದ್ದ ಚಿತ್ರಣ
ಜನರು ಮಾಸ್ಕ್‌ ಧರಿಸುವುದು ಸೇರಿದಂತೆ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಚಾಮರಾಜನಗರದ ಚಿತ್ರಮಂದಿರವೊಂದರ ಮುಂದೆ ಕಂಡು ಬಂದ ಮಾಸ್ಕ್‌ ಧರಿಸದೇ ಇದ್ದ ಚಿತ್ರಣ   

ಚಾಮರಾಜನಗರ: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ರಾಜ್ಯದಲ್ಲಿ ಪತ್ತೆಯಾಗಿರುವ ಬೆನ್ನಲ್ಲೇ, ಸರ್ಕಾರದ ಸೂಚನೆಯ ಅನುಸಾರ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆದರೆ, ಕೋವಿಡ್‌ ನಿಯಮಗಳನ್ನು ಜನರು ಪಾಲಿಸುವಂತೆ ಮಾಡುವ ಬಹುದೊಡ್ಡ ಸವಾಲು ಜಿಲ್ಲಾಡಳಿತದ ಅಧಿಕಾರಿಗಳ ಮುಂದಿದೆ.

ಎರಡನೇ ಅಲೆ ಕ್ಷೀಣ ವಾಗುತ್ತ, ಕೋವಿಡ್‌ ಪ್ರಕರಣ ಕಡಿಮೆಯಾಗಲು ಆರಂಭಿಸುತ್ತಿದ್ದಂತೆಯೇ ಜನ ಸಾಮಾ ನ್ಯರು ಕೋವಿಡ್‌ ನಿಯಮ ಮರೆತಿದ್ದು, ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಬಳಕೆ, ವೈಯಕ್ತಿಕ ಅಂತರ ಕಾಪಾಡುವಿಕೆ ಇತರ ನಿಯಮ ಪಾಲನೆಯಾಗುತ್ತಿಲ್ಲ. ಮದುವೆ ಸಮಾರಂಭ, ಜಾತ್ರೆ, ಹಬ್ಬ ಹರಿದಿನಗಳಲ್ಲಿ ಜನಜಂಗುಳಿಯೇ ನೆರೆದಿರುತ್ತದೆ.

ಇದರ ನಡುವೆಯೇ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿ ಸಾಗಿವೆ. ಶಾಲಾ ವಿದ್ಯಾರ್ಥಿಗಳಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಲೆನೋವು ತಂದರೆ, ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಈವರೆಗೆ ಏಳೆಂಟು ವಿದ್ಯಾರ್ಥಿಗಳಲ್ಲಿ ಕೋವಿಡ್‌ ಇರುವುದು ಪತ್ತೆಯಾಗಿದೆ.

ADVERTISEMENT

ಗಡಿಯಲ್ಲಿ ಕಟ್ಟೆಚ್ಚರ: ಓಮೈಕ್ರಾನ್‌ ತಳಿ ಪತ್ತೆಯಾಗುತ್ತಿದ್ದಂತೆಯೇ ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಹಾಗೂ‌ ಕೆಕ್ಕನಹಳ್ಳ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆ ಚ್ಚರ ವಹಿಸಲಾಗಿದೆ. ಕೇರಳದಿಂದ ಬಂದವರಿಗೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ಹನೂರು ತಾಲ್ಲೂಕಿನಲ್ಲಿ ತಮಿಳು ನಾಡಿಗೆ ಸಂಪರ್ಕ ಕಲ್ಪಿಸುವ ಮೂರು ಚೆಕ್‌ಪೋಸ್ಟ್‌ಗಳಿದ್ದು, ಅಲ್ಲಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿಲ್ಲ. ಸದ್ಯ ಸರ್ಕಾರದ ಸೂಚನೆಯಿಂದ ಕೇರಳದ ಗಡಿಗೆ ಒತ್ತು ನೀಡಲಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಕೋವಿಡ್ ನಿಯಂತ್ರಣ ಸಂಬಂಧ ಪರೀಕ್ಷೆ, ಸಂಪರ್ಕಿತರ ಗುರುತಿಸಿರುವುದು, ಚಿಕಿತ್ಸೆ ಹಾಗೂ ಲಸಿಕೆ ನೀಡುವುದಕ್ಕೆ ಜಿಲ್ಲಾಡಳಿತ ಒತ್ತು ನೀಡಿದೆ. ಪ್ರತಿದಿನ ಕನಿಷ್ಠ 2,500 ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. 16 ಕೋವಿಡ್‌ ಕೇಂದ್ರಗಳನ್ನು ತೆರೆಯ ಲಾಗಿದೆ. ಜಿಲ್ಲೆಯಲ್ಲಿ ಮೊದಲ ಡೋಸ್‌ ಲಸಿಕೆ ಪಡೆಯದ 70 ಸಾವಿರಕ್ಕೂ ಹೆಚ್ಚು ಜನರಿದ್ದು, ಎಲ್ಲ ಇಲಾಖೆಗಳು ಸಮನ್ವಯ ಸಾಧಿಸಿ ಶೇ 100ರಷ್ಟು ಲಸಿಕಾಕರಣ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೋವಿಡ್‌ ನಿಯಮ ಪಾಲಿಸದೆ ಇರುವವರಿಗೆ ದಂಡ ವಿಧಿಸುವಂತೆಯೂ ಸೂಚಿಸಿದ್ದಾರೆ.

ಪರಿಸ್ಥಿತಿ ಎದುರಿಸಲು ಸಿದ್ಧ: ಸಿದ್ಧತೆಗಳ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ‘ಸರ್ಕಾರ ನಮಗೆ ಪ್ರತಿ ದಿನ 800 ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. 2,500 ಪರೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ನಾವು 2000ದಿಂದ 3,500ದವರೆಗೂ ಪರೀಕ್ಷೆ ನಡೆಸುತ್ತಿದ್ದೇವೆ. ಹಾಸ್ಟೆಲ್‌ ವಿದ್ಯಾರ್ಥಿಗಳ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಕ್ರಮ ಕೈಗೊಂಡಿದ್ದೇವೆ. ಕೇರಳ ದಿಂದ ಬಂದವರಲ್ಲಿ ರೋಗ ಲಕ್ಷಣ ಕಂಡು ಬಂದರೆ ಅವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಐದು ಹಾಸಿಗೆ ಮೀಸಲಿಡಲಾಗಿದೆ.

ಶಾಲಾ ಮಕ್ಕಳಲ್ಲಿ ಸೋಂಕು ಕಂಡು ಬರುತ್ತಿರುವುದರಿಂದ ಬಾಲ ವಿಕಾಸ ವೈದ್ಯರ ತಂಡ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದೆ. ಉಳಿದಂತೆ ಸೋಂಕಿತರ ಚಿಕಿತ್ಸೆಗಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ. 16 ಕೋವಿಡ್‌ ಕೇರ್‌ ಕೇಂದ್ರ ತೆರೆದಿದ್ದೇವೆ. ಅಲ್ಲಿ ಹಾಸಿಗೆ ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಲಾಗಿದೆ. ಆಮ್ಲಜನಕ ಪೂರೈಕೆಗೆ ವ್ಯವಸ್ಥೆಯಾಗಿದೆ. ಸ್ವಲ್ಪ ಔಷಧಿಗಳ ಅಗತ್ಯವಿದೆ. ಅನುದಾನ ಒದಗಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ’ ಎಂದರು.

ಮಕ್ಕಳ ಪೋಷಕರು ಏನಂತಾರೆ?

ಆತಂಕ ಇದೆ

ಈಚೆಗೆ ಕಂಡುಬಂದಿರುವ ಕೊರೊನಾ ವೈರಸ್‌‌ನ ಹೊಸ ತಳಿಯು ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳ ತಂದೆ ತಾಯಿಗಳಲ್ಲಿ ಆತಂಕ ಮೂಡಿಸಿದೆ. ಶಾಲೆಗೆ ತೆರಳುವ ಮಕ್ಕಳಿಗೆ ಹೆಚ್ಚಿನ ಸಂರಕ್ಷಣೆ ನೀಡಬೇಕಿದೆ. ಪ್ರತಿದಿನ ಕೊಠಡಿಗಳಿಗೆ ಸ್ಯಾನಿಟೈಸ್‌ ಮಾಡಿಸಿ, ಅಂತರ ಕಾಪಾಡಿಕೊಂಡು ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕಿದೆ. ಶಿಕ್ಷಕರು ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಹೆಚ್ಚು ಆಸ್ಥೆ ವಹಿಸಬೇಕು.

– ಸಾಕಮ್ಮ, ಮಲ್ಲಿಗೆಹಳ್ಳಿ, ಯಳಂದೂರು ತಾಲ್ಲೂಕು

ಆಡಳಿತ ಕ್ರಮ ಕೈಗೊಳ್ಳಲಿ

ಶಾಲಾ ಕಾಲೇಜುಗಳಲ್ಲೇ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಶಾಲೆಗಳಲ್ಲಿ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ, ಸ್ಥಳೀಯ ಆಡಳಿತ ಕೂಡ ಶಾಲೆಯ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕು. ಆಗ ಮಾತ್ರ ಸೋಂಕು ಹರಡದಂತೆ ತಡೆಯಲು ಸಾಧ್ಯ. ಈ‌ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಹೆಚ್ಚಿನ ಗಮನ ಹರಿಸಬೇಕು.

–ಸೈಯದ್ ಇಮ್ರಾನ್, ಹನೂರು

ಶಿಕ್ಷಕರಿಂದ ಜಾಗೃತಿ

ಮಕ್ಕಳಿಗೆ ಜ್ವರದ ಲಕ್ಷಣಗಳು ಕಂಡು ಬಂದರೆ ಶಾಲೆಗೆ ಕಳುಹಿಸದಂತೆ ಶಿಕ್ಷಕರು ತಿಳಿಸಿದ್ದಾರೆ. ಬೇರೆ ಮಕ್ಕಳು ಹಾಗೂ ಹೊರಗಿನಿಂದ ಬಂದಂತಹ ಮಕ್ಕಳ ಜೊತೆಗೆ ಬೆರೆಯಲು ಬಿಡುವುದಿಲ್ಲ. ಶಾಲೆಗಳಲ್ಲಿ ಶಿಕ್ಷಕರು ಪೋಷಕರಿಗೆ ಕೋವಿಡ್‌ ಬಗ್ಗೆ ಹಾಗೂ ಅನುಸರಿಸಬೇಕಾದ ಮುನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.

–ಮಹೇಶ್, ಹೊಸಮೋಳೆ‌, ಚಾಮರಾಜನಗರ ತಾಲ್ಲೂಕು

ಶಿಕ್ಷಣಕ್ಕಾಗಿ ಕಳುಹಿಸಲೇಬೇಕು

ಈಗಿನ ಪರಿಸ್ಥಿತಿಯಲ್ಲಿ ಮಕ್ಕಳ ಸುರಕ್ಷತೆ ಮುಖ್ಯ. ಶಾಲೆಗಳಲ್ಲಿ ನಿಯಮಗಳನ್ನು ಹೇಗೆ ಪಾಲಿಸುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳಿಸಲು ಭಯವಾಗುತ್ತದೆ. ಆದರೂ ಕಲಿಕಾ ದೃಷ್ಟಿಯಿಂದ ಕಳುಹಿಸಲೇ ಬೇಕಾಗಿದೆ.

–ಮೋಹನ್‌ಕುಮಾರ್‌, ಗುಂಡ್ಲುಪೇಟೆ

ಅಧಿಕಾರಿಗಳು ಹೇಳುವುದೇನು?

‘ಗಡಿಗಳಲ್ಲಿ ಬಿಗಿ ಭದ್ರತೆ’

ಕೇರಳಕ್ಕೆ ಹೊಂದಿಕೊಂಡಂತಿರುವ ಗಡಿಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ತಮಿಳುನಾಡು ಗಡಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಆದೇಶ ಬಂದಿಲ್ಲ.ಆದೇಶ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕಿನಲ್ಲಿ ಕೋವಿಡ್‌ ಮುಂಜಾಗ್ರತಾ ನಿಯಮ ಪಾಲನೆಗೆ ಕ್ರಮ ವಹಿಸಲಾಗಿದೆ.

-ಜಿ.ಎಚ್.ನಾಗರಾಜು, ತಹಶೀಲ್ದಾರ್, ಹ‌ನೂರು

‘ನಿಯಮ ಉಲ್ಲಂಘಿಸಿದರೆ ದಂಡ’

ಗ್ರಾಮೀಣ ಮತ್ತು ಪಟ್ಟಣ ಭಾಗಗಳಲ್ಲಿ ಸಂಚರಿಸುವವರು ಕಡ್ಡಾಯವಾಗಿ ಮಾಸ್ಕ್ ತೊಡಬೇಕು. ಸ್ಯಾನಿಟೈಸರ್ ಬಳಕೆ ಕಡ್ಡಾಯ. ದೇವಾಲಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವ ಬಗ್ಗೆ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ. ನಿಯಮ ಉಲ್ಲಂಘಿಸುವವರ ಮೇಲೆ ಕೇಸು ದಾಖಲಿಸಿ ದಂಡ ವಿಧಿಸಲಾಗುತ್ತದೆ

-ಎಚ್.ಬಿ.ಮಾದೇಗೌಡ,ಸಬ್‌ಇನ್ಸ್‌ಪೆಕ್ಟರ್‌, ಅಗರ, ಯಳಂದೂರು ತಾಲ್ಲೂಕು

‘ಆತಂಕ ಬೇಡ’

ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೈ ಸ್ವಚ್ಛತೆ, ಜ್ವರ ತಪಾಸಣೆ, ಅಂತರ ಪಾಲನೆಗೆ ಒತ್ತು ನೀಡಲಾಗಿದೆ. ವೈದ್ಯರು ತರಗತಿಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಾರೆ. ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು, ವಾಂತಿ ಲಕ್ಷಣ ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ತಿಳಿಸಲಾಗುತ್ತದೆ

-ಶಿವಶಂಕರ್, ಹಿಂದಿ ಶಿಕ್ಷಕ, ಯಳಂದೂರು

---

ಕಟ್ಟುನಿಟ್ಟಿನ ಮುನ್ನೆಚ್ಚರಿಕೆ

ರಾಜ್ಯದಲ್ಲಿ ಓಮೈಕ್ರಾನ್‌ ವೈರಸ್‌ ಪತ್ತೆಯಾಗಿರುವುದರಿಂದ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗುಂಡ್ಲುಪೇಟೆಯ ಕೇರಳ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್‌ ನಿಯಮ ಪಾಲನೆ, ಪರೀಕ್ಷೆ, ಸಂಪರ್ಕಿತರ ಗುರುತಿಸುವುದು ಹಾಗೂ ಕೋವಿಡ್‌ ಲಸಿಕೆ ನೀಡುವುಕ್ಕೆ ಆದ್ಯತೆ ನೀಡಲಾಗಿದೆ

–ಎಸ್‌.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ

ಸಮನ್ವತೆಯಿಂದ ಕೆಲಸ

ಸದ್ಯ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಕೋವಿಡ್‌ ನಿಯಮವನ್ನು ಜನರು ಪಾಲನೆ ಮಾಡುವಂತೆ ಮಾಡಲು ಗಮನ ಹರಿಸಲಾಗಿದೆ. ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಪೊಲೀಸ್‌ ಇಲಾಖೆ ಕೆಲಸ ಮಾಡುತ್ತಿದೆ.

–ಕೆ.ಎಸ್‌.ಸುಂದರ್‌ರಾಜ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಜನರ ಸಹಕಾರ ಬೇಕು

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಮುಂದೆ ಬರಬಹುದಾದಂತಹ ಎಲ್ಲ ಪರಿಸ್ಥಿತಿಗಳನ್ನು ಎದುರಿಸಲು, ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಸೂಚನೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ಜನರ ಸಹಕಾರ ಇಲ್ಲದಿದ್ದರೆ ಕೋವಿಡ್‌ ಪರಿಸ್ಥಿತಿ ಎದುರಿಸಲು ಸಾಧ್ಯವಿಲ್ಲ. ಪ್ರಕರಣಗಳು ಕಡಿಮೆ ಇದೆ ಎಂಬ ಕಾರಣಕ್ಕೆ ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದು ತಪ್ಪಬೇಕು. ಕೋವಿಡ್‌ ನಿಯಮಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಬೇಕು.

–ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

--

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ., ಬಿ.ಬಸವರಾಜು, ಬಿ.ಬಸವರಾಜು, ಮಹದೇವ್‌ ಹೆಗ್ಗವಾಡಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.