ADVERTISEMENT

ಮಕ್ಕಳ ಸ್ವಾಗತಕ್ಕೆ ಶಿಥಿಲ ಕೊಠಡಿಗಳು ಸಜ್ಜು

16ರಿಂದ ಶಾಲೆ ಆರಂಭ, ಸರ್ಕಾರದ ನಿರ್ಧಾರಕ್ಕೆ ಪರ ವಿರೋಧ, ಕಲಿಕಾ ನಷ್ಟ ಸರಿಪಡಿಸುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 8 ಮೇ 2022, 15:18 IST
Last Updated 8 ಮೇ 2022, 15:18 IST
ಸಂತೇಮರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪೂರ್ಣಗೊಂಡಿರುವ ಶಾಲಾ ಕಟ್ಟಡ
ಸಂತೇಮರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪೂರ್ಣಗೊಂಡಿರುವ ಶಾಲಾ ಕಟ್ಟಡ   

ಚಾಮರಾಜನಗರ: ಎರಡು ವರ್ಷಗಳ ಕೋವಿಡ್‌ ಕಾಟದ ನಂತರ ಈ ಬಾರಿ ಶಾಲೆಗಳು ನಿಗದಿ‌ಗಿಂತ ಎರಡು ವಾರಗಳ ಮೊದಲೇ ಆರಂಭವಾಗುತ್ತಿವೆ. ಶಿಕ್ಷಕರು ಮಕ್ಕಳನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಗೆ ಸೋರುವ, ಶಿಥಿಲಗೊಂಡ ಕೊಠಡಿಗಳು ಮಕ್ಕಳ ಬರುವಿಕೆಗಾಗಿ ಕಾಯುತ್ತಿವೆ!

ಶಿಥಿಲಗೊಂಡಿರುವ ಕೊಠಡಿಗಳ ನಿರ್ಮಾಣ ಕಾರ್ಯ, ದುರಸ್ತಿ ಹಲವು ತಾಲ್ಲೂಕುಗಳಲ್ಲಿ ನಡೆದಿಲ್ಲ. ಶಿಕ್ಷಣ ಇಲಾಖೆಯಿಂದ ಸಾಕಷ್ಟು ಅನುದಾನ ಬಾರದಿರವುದು ಇಲಾಖೆಯ ಅಧಿಕಾರಿಗಳಿಗೆ ಕಟ್ಟಡಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ.

2021–22ನೇ ಸಾಲಿನ ಅಂಕಿ ಅಂಶಗಳ ಪ್ರಕಾರ, ಮಳೆ ಹಾಗೂ ಇತರ ಕಾರಣಗಳಿಂದಾಗಿ ಹಾನಿಗೆ ಒಳಗಾಗಿರುವ 686 ಶಾಲಾ ಕೊಠಡಿಗಳ ದುರಸ್ತಿ, 144 ಕೊಠಡಿ ಮರು ನಿರ್ಮಿಸಬೇಕಾಗಿದೆ. ಈ ಎರಡೂ ಕಾರ್ಯಕ್ಕೆ ₹25.57 ಕೋಟಿ ಹಣ ಬೇಕು. ಕೆಲವಡೆ ಕಾಮಗಾರಿ ನಡೆಯುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಕಾಡಿನಂಚಿನ ಪ್ರದೇಶಗಳಲ್ಲಿರುವ ಶಾಲೆಗಳ ಸಂಖ್ಯೆಯೂ ಹೆಚ್ಚು. ಬಹುತೇಕ ಕಡೆಗಳಲ್ಲಿ ಕಟ್ಟಡ ಸೇರಿದಂತೆ ಮೂಲಸೌಕರ್ಯ ಗಳಿಲ್ಲ. ನಿರ್ವಹಣೆಯೂ ಸರಿಯಾಗಿಲ್ಲ.

ಮುಖ್ಯ ಶಿಕ್ಷಕರು ಇಲ್ಲವೇ ಇತರ ಶಿಕ್ಷಕರು ಹೆಚ್ಚು ಸಕ್ರಿಯರಾಗಿರುವೆಡೆ ಕಟ್ಟಡ ನಿರ್ವಹಣೆ ಸಮಸ್ಯೆ ತಲೆದೋರಿಲ್ಲ. ಶಿಕ್ಷಕರು ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಊರವರ ಸಹಕಾರದಿಂದ ದುರಸ್ತಿ ಕೈಗೊಳ್ಳುತ್ತಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು, ಮುಖ್ಯಶಿಕ್ಷಕರು, ಸಹಶಿಕ್ಷಕರು ಹೆಚ್ಚು ಆಸಕ್ತಿ ತೋರದ ಕಡೆಗಳಲ್ಲಿ ಸಮಸ್ಯೆ ಹೆಚ್ಚಿದೆ. ಅನುದಾನ ಬಿಡುಗಡೆಯಾಗದೆ ತಮಗೇನೂ ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಅಧಿಕಾರಿಗಳು.

ಮಕ್ಕಳ ಸ್ವಾಗತಕ್ಕೆ ಸಿದ್ಧತೆ: ಈ ಮಧ್ಯೆ, ಶಾಲೆ ಬೇಗ ಆರಂಭವಾಗುತ್ತಿರುವುದರ ಬಗ್ಗೆ ಪರ ವಿರೋಧ ಚರ್ಚೆಯೂ ನಡೆಯುತ್ತಿದೆ. ಮೇ 16ರಂದು ಆರಂಭಿಸುತ್ತಿರುವುದು ಒಳ್ಳೆಯದು ಎಂದು ಕೆಲವರು ಅಭಿಪ್ರಾಯಪಟ್ಟರೆ, ಜೂನ್‌ 1ರಂದೇ ಆರಂಭಿಸಬೇಕು ಎಂದು ಮತ್ತೂ ಕೆಲವರು ಪ್ರತಿಪಾದಿಸುತ್ತಿದ್ದಾರೆ.

ಸರ್ಕಾರದ ಸೂಚನೆಯಂತೆ ಮೇ 16ರಂದು ಮಕ್ಕಳನ್ನು ತರಗತಿಗಳಿಗೆ ಸ್ವಾಗತಿಸಲು ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಸಜ್ಜುಗೊಂಡಿದ್ದಾರೆ. ಕೋವಿಡ್‌ ನಾಲ್ಕನೇ ಅಲೆಯ ಭೀತಿ ಇದ್ದರೂ, ಇದುವರೆಗೂ ಪ್ರಕರಣಗಳು ಹೆಚ್ಚಾಗಿಲ್ಲ. ಎರಡು ವರ್ಷಗಳಿಂದ ಮಕ್ಕಳಿಗೆ ಸಮರ್ಪಕವಾಗಿ ಪಾಠ ಸಿಕ್ಕಿಲ್ಲ ಎಂಬ ಅಭಿಪ್ರಾಯ ಶಿಕ್ಷಕರು ಹಾಗೂ ಪೋಷಕರಲ್ಲೂ ಇದೆ. ಕಲಿಕಾ ನಷ್ಟ ಸರಿದೂಗಿಸುವ ಉದ್ದೇಶದಿಂದಲೇ ಮುಂಚಿತವಾಗಿ ತರಗತಿ ಆರಂಭವಾಗುತ್ತಿವೆ.

ಹೊಟ್ಟೆಪಾಡಿಗಾಗಿ ವಲಸೆ: ಹನೂರು ಶೈಕ್ಷಣಿಕ ವಲಯದಲ್ಲಿ ಬಹುತೇಕ ಶಾಲೆಗಳು ಅರಣ್ಯದಂಚಿನಲ್ಲಿವೆ. ನಿಗದಿತ ವೇಳೆಗೆ ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಶಾಲೆಯನ್ನೇ ತೊರೆಯುವ ಹಂತಕ್ಕೆ ಬಂದಿದ್ದಾರೆ. ರಾಮಾಪುರ ಹೋಬಳಿಯ ಮಿಣ್ಯಂ, ದಿನ್ನಳ್ಳಿ, ಕೊಪ್ಪ, ಗಾಜನೂರು, ಹೂಗ್ಯಂ ಮುಂತಾದ ಕಡೆಗಳಲ್ಲಿ ಸಮರ್ಪಕ ಬಸ್ ವ್ಯವಸ್ಥೆಯೇ ಇಲ್ಲ. ಅಧಿಕಾರಿಗಳು‌ ಶಾಲೆ ಆರಂಭಕ್ಕೂ ಮುನ್ನ ಬಸ್ ವ್ಯವಸ್ಥೆ ಕಲ್ಪಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಬುದು ಪೋಷಕರ ಒತ್ತಾಯ.

‘ಜೂನ್‌ನಿಂದ ಶಾಲೆ ಆಂರಂಭವಾಗುತ್ತಿದ್ದುದ್ದರಿಂದ ಈ ವರ್ಷವೂ ಮಕ್ಕಳನ್ನು ಜೊತೆಗೇ ಕೊಡಗಿಗೆ ಕರೆದುಕೊಂಡು ಬಂದಿದ್ದೇವೆ. ಶಾಲೆ ಬೇಗ ಆರಂಭವಾದರೆ ಮಕ್ಕಳ ಶಿಕ್ಷಣದ ಸಲುವಾಗಿ ನಾವು ಬರಲೇ ಬೇಕಾಗುತ್ತದೆ’ ಎಂದು ಮಿಣ್ಯಂ ಗ್ರಾಮದ ಮಾದೇವ ಅವರು ಹೇಳಿದರು.

ಯಾರು ಏನಂತಾರೆ?

ಕಟ್ಟಡ ದುರಸ್ತಿ ಮಾಡಲಿ

ಶಿಕ್ಷಣ ಇಲಾಖೆ ಲೆ ಆರಂಭಿಸುವ ಮುನ್ನ ಸೋರುವ ಕೊಠಡಿಗಳನ್ನು ದುರಸ್ತಿ ಮಾಡಲಿ. ಮಕ್ಕಳು ತರಗತಿಗಳಲ್ಲಿ ಸುರಕ್ಷಿತವಾಗಿ ಕೂರುವಂತಾಗಬೇಕು. ಆ ಬಳಿಕ ಪಾಠ ಆರಂಭಿಸಲಿ

ಬಸವಣ್ಣ,ಗ್ರಾ.ಪಂ. ಸದಸ್ಯ ಮಿಣ್ಯಂ

ಬೇಗ ಆರಂಭವಾದರೆ ಒಳಿತು

ಎರಡು ವರ್ಷಗಳಿಂದ ಗುಣಮಟ್ಟದ ಕಲಿಕೆ ಶಾಲೆಗಳಲ್ಲಿ ನಡೆದಿಲ್ಲ. ಶಾಲೆ ಬೇಗ ಆರಂಭವಾದರೆ, ಶಾಲೆಗೆ ಹೊಂದಿಕೊಂಡು ವೇಗವಾಗಿ ಮಕ್ಕಳು ಕಲಿಯಲು ಸಾಧ್ಯವಾಗುತ್ತದೆ

ಮುನಾವರ್ ಬೇಗ್,ಪೋಷಕ,ಯಳಂದೂರು

ಜೂನ್‌ 1ರಂದೇ ಆರಂಭಿಸಿ

ಈ ವರ್ಷ ಶಾಲೆಗೆ ಬೇಗನೆ ಆರಂಭವಾಗುವುದು ಸರಿಯಲ್ಲ. ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ, ಶಿಕ್ಷಣ ಇಲಾಖೆಯು ಜೂನ್‌ 1ರಂದೇ ಆರಂಭಿಸಲಿ

ಚಿರಂತನ್,ಪೋಷಕ, ಕೊಳ್ಳೇಗಾಲ

ಬೇಗ ಆರಂಭ ಸ್ವಾಗತಾರ್ಹ

ಮುಂದಿನ ದಿನಗಳಲ್ಲಿ ಸರ್ಕಾರ ಯಾವಾಗ ಕೋವಿಡ್‌ ನೆಪದಲ್ಲಿ ಶಾಲೆಗಳಿಗೆ ರಜೆ ನೀಡುತ್ತದೆಯೋ ಗೊತ್ತಿಲ್ಲ. ಈ ವರ್ಷವೂ ಮಕ್ಕಳು ಶಾಲೆಯಿಂದ ವಂಚಿತರಾಗಬಾರದು. ಈ ಕಾರಣಕ್ಕಾಗಿ ಶಾಲೆಯನ್ನು ಮುಂಚಿತವಾಗಿ ಆರಂಭಿಸಿರುವುದು ಒಳ್ಳೆಯದು.

ಶಶಿಧರ್,ಹುಲ್ಲೇಪುರ, ಚಾಮರಾಜನಗರ

ಆರೋಗ್ಯ ಮೇಲೆ ಪರಿಣಾಮ

ಬೇಸಿಗೆಯಲ್ಲಿ ತರಗತಿಗಳು ನಡೆಯುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳನ್ನು ಶಾಲೆಗೆ ಕಲಿಸಲು ಪೋಷಕರಿಗೆ ಆತಂಕ ಇದೆ. ಹೀಗಾಗಿ ಜೂನ್ ಒಂದರ ನಂತರ ಶಾಲೆ ಆರಂಭಿಸಬೇಕು.

ಆರ್.ಗಿರೀಶ್,ಲಕ್ಕೂರು, ಗುಂಡ್ಲುಪೇಟೆ

--

ಕಲಿಕಾ ನಷ್ಟ ತುಂಬಲು ಸಹಕಾರಿ

ತಾಲ್ಲೂಕಿನಲ್ಲಿ 15 ದಿನ ಮೊದಲೇ ಶಾಲೆ ಆರಂಭವಾಗುತ್ತಿದೆ. ಕೋವಿಡ್‌ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಂಟಾಗಿರುವ ಅಭ್ಯಾಸ ನಷ್ಟವನ್ನು ತಪ್ಪಿಸುವ ದಿಸೆಯಲ್ಲಿ ರಜಾ ಅವಧಿಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅವರು ಮಕ್ಕಳಿಗೆ ಬೋಧನೆ ಮಾಡಲಿದ್ದಾರೆ. ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅನುಕೂಲವಾಗಲಿದೆ.

ಕೆ.ಕಾಂತರಾಜು,ಕ್ಷೇತ್ರ ಶಿಕ್ಷಣಾಧಿಕಾರಿ, ಯಳಂದೂರು

ಕಲಿಕಾ ಚೇತರಿಕೆ ವರ್ಷ

2022–23ಸಾಲನ್ನು ಕಲಿಕಾ ಚೇತರಿಕೆ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಮೀಸಲಿಡಲಾಗಿದೆ. ಹಿಂದಿನ ವರ್ಷದ ಕಲಿಕೆಯ ಅಂತರವನ್ನು ಸರಿದೂಗಿಸಲು ಕಲಿಕಾ ಚೇತರಿಕೆ ವರ್ಷವಾಗಿ ಶಿಕ್ಷಣ ತಜ್ಞರು ರೂಪಿಸಿದ್ದಾರೆ. ಪೋಷಕರು 15 ದಿನಗಳ ಮುಂಚಿತವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಬೇಕು.

ಸತೀಶ್.ಆರ್,ಬಿಆರ್‌ಪಿ ಹಾಗೂ ಸಂಪನ್ಮೂಲ ವ್ಯಕ್ತಿ, ಯಳಂದೂರು

--

‘ಶಾಲಾರಂಭಕ್ಕೆ ಸಿದ್ಧತೆ, ಹಣ ಬಂದ ತಕ್ಷಣ ದುರಸ್ತಿ’

ಇದೇ 16ರಂದು ಶಾಲೆಗಳ ಆರಂಭಕ್ಕೆ ಸಿದ್ಧತೆ ಮಾಡಿದ್ದೇವೆ. 14, 15 ರಂದು ಎಸ್‌ಡಿಎಂಸಿ ಸದಸ್ಯರ ನೆರವಿನಿಂದ ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛಗೊಳಿಸಲು ಸೂಚಿಸ‌ಲಾಗಿದೆ. ಹಬ್ಬದ ರೂಪದಲ್ಲಿ ಮಕ್ಕಳನ್ನು ನಾವು ಸ್ವಾಗತಿಸಲಿದ್ದೇವೆ. ಶೇ 50ರಷ್ಟು ಪಠ್ಯಪುಸ್ತಕಗಳು ಬಂದಿವೆ. ಶಾಲಾರಂಭದಲ್ಲೇ ವಿತರಿಸಲಾಗುವುದು. ಎಲ್ಲ ಶಾಲೆಗಳಲ್ಲೂ ಬುಕ್‌ ಬ್ಯಾಂಕ್‌ ಮಾಡಿದ್ದೇವೆ. ಉಳಿದ ಮಕ್ಕಳಿಗೆ ಆ ಪುಸ್ತಕಗಳನ್ನು ವಿತರಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎನ್‌.ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲಾ ಕೊಠಡಿಗಳ ದುರಸ್ತಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣ ದುರಸ್ತಿ ಹಾಗೂ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುವುದು’ ಎಂದು ಅವರು ಹೇಳಿದರು.

ನಾಳೆ ಸಭೆ: ‘ಕಳೆದ ವರ್ಷದ ಅಂಕಿ ಅಂಶಗಳು ನಮ್ಮ ಬಳಿ ಇದ್ದು, ಕೆಲವು ಕಡೆ ದುರಸ್ತಿ ಆಗಿದೆ. ಹೊಸ ಕೊಠಡಿಗಳ ನಿರ್ಮಾಣವೂ ನಡೆದಿದೆ. ಜಿಲ್ಲೆಯಲ್ಲಿ ದುರಸ್ತಿ ಮಾಡಬೇಕಾದ ಕೊಠಡಿಗಳು ಹಾಗೂ ಮರು ನಿರ್ಮಾಣ ಮಾಡಬೇಕಾದ ಕೊಠಡಿಗಳ ಪಟ್ಟಿ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ಚರ್ಚಿಸುವುದಕ್ಕಾಗಿ ಮಂಗಳವಾರ (ಮೇ 10) ಅಧಿಕಾರಿಗಳ ಸಭೆಯನ್ನೂ ಅವರು ಕರೆದಿದ್ದಾರೆ’ ಎಂದು ಮಂಜುನಾಥ್‌ ಮಾಹಿತಿ ನೀಡಿದರು.

---

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಅವಿನ್‌ ಪ್ರಕಾಶ್‌ ವಿ., ಮಲ್ಲೇಶ ಎಂ. ಬಿ.ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.