ಹನೂರು: ಪಟ್ಟಣದ ಲೋಕೋಪಯೋಗಿ ಅಥಿತಿ ಗೃಹದಲ್ಲಿ ಇತ್ತೀಚೆಗೆ ಶಾಸಕ ಎಂ.ಆರ್.ಮಂಜುನಾಥ್ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಭೆ ನಡೆಸಿದರು.
ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದ ಶಾಸಕರು, ‘ನರೇಗಾ ಮತ್ತು 15ನೇ ಹಣಕಾಸು ಕಾಮಗಾರಿಗಳು ಪಾರದರ್ಶಕ ಹಾಗೂ ಗುಣಮಟ್ಟದಿಂದ ನಡೆಯುತ್ತಿಲ್ಲ. ಬದಲಾಗಿ 15ನೇ ಹಣಕಾಸನ್ನು ಗ್ರಾಮಪಂಚಾಯಿತಿ ಸದಸ್ಯರೇ ಹಂಚಿಕೊಳ್ಳುತ್ತಿರುವುದು ಬೇಸರದ ಸಂಗತಿ. ಅನುದಾನದ ಹಣವನ್ನು ವೈಯಕ್ತಿಕವಾಗಿ ಹಂಚಿಕೊಳ್ಳುವುದನ್ನು ಬಿಟ್ಟು ಅದೇ ಹಣದಲ್ಲಿ ಉತ್ತಮ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.
‘ಗ್ರಾಮಪಂಚಾಯಿತಿಗಳಲ್ಲಿ ಸಮರ್ಪಕ ಕಂದಾಯ ವಸೂಲು ಆಗದೇ ಇರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಇದರ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು. ರಾಮಾಪುರ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೆ ತೊಂದರೆ ಉಂಟಾಗುವ ಮುನ್ನ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು’ ಎಂದರು.
ಪಶು ಸಂಗೋಪನೆ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಸಿದ್ದರಾಜು ಮಾತನಾಡಿ, ‘ತಾಲ್ಲೂಕಿನಲ್ಲಿ ಸಧ್ಯ ಮೇವಿನ ಕೊರತೆ ಇಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಉತ್ತಮ ಮಳೆಯಾದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದರು. ಮಾನ್ಸುನ್ ಪ್ರಾರಂಭವಾಗುವುದರಿಂದ ಮಳೆಯಾಗುವ ಹಿನ್ನೆಲೆಯಲ್ಲಿ ವಿದ್ಯುತ್ ಸೌಕರ್ಯಕ್ಕೆ ತೊಂದರೆಯಾಗಬಾರದು. ವಿದ್ಯುತ್ ಅವಘಡಗಳು ಸಂಭವಿಸದಂತೆ ವಿದ್ಯುತ್ ತಂತಿಗಳ ಹತ್ತಿರದ ಕೊಂಬೆ ತೆರವು ಕೈಗೊಳ್ಳಲು ಸೆಸ್ಕ್ ಕ್ರಮವಹಿಸಬೇಕು’ ಎಂದರು.
ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಪ್ರಕಾಶ್ ಮಾತನಾಡಿದರು.
ಶಾಸಕರಿಂದ ಅಧಿಕಾರಿಗಳಿಗೆ ನೀತಿಪಾಠ: ಇಂದಿಗೂ ನಮ್ಮ ಸುತ್ತಮುತ್ತ ಅಸಹಾಯಕ, ಮುಗ್ಧ, ಬಡ ಜನರನ್ನು ಕಾಣಬಹುದು ಅಂತಹವರನ್ನು ನೋಡಿಯಾದರೂ ಅವರಿಗೆ ಸರ್ಕಾರದ ಸೌಲಭ್ಯ ಒದಗಿಸಲು ಅಧಿಕಾರಿಗಳು ಮುಂದಾಗುವ ಮೂಲಕ ತೊಡಗಿಸಿಕೊಳ್ಳಿ’ ಎಂದು ಶಾಸಕ ಎಂ.ಆರ್.ಮಂಜುನಾಥ್ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಎ.ಡಿ.ರಾಧಾ ಉಪಸ್ಥಿತರಿದ್ದರು.
ಗ್ರಾಮಪಂಚಾಯಿತಿ ಸದಸ್ಯರು ಕೆಲಸ ಮಾಡದ ಆರೋಪ ಪಂಚಾಯಿತಿ ಮಟ್ಟದಲ್ಲಿ ಸಮರ್ಪಕ ಕಂದಾಯ ವಸೂಲು ಇಲ್ಲ ಕುಡಿಯುವ ನೀರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.