ಚಾಮರಾಜನಗರ: ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರು ಸೋಮವಾರ ತಾಲ್ಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರ ಮತದಾರರಲ್ಲಿ ಮತಯಾಚನೆ ಮಾಡಿದರು.
ಮರಿಯಾಲ ಐಟಿಐ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಪದವಿ ಪೂರ್ವ ಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ಜೆಎಸ್‌ಎಸ್ ಮಹಿಳಾ ಕಾಲೇಜು ಹಾಗೂ ಸೇವಾ ಭಾರತಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಿಮ್ಮೆಲ್ಲರ ಅಶೀರ್ವಾದದಿಂದ ಮೇಲ್ಮನೆಗೆ ಆಯ್ಕೆಯಾದರೆ, ಗೌರವ ಧನವನ್ನು ಪಡೆದುಕೊಳ್ಳದೆ ಇನ್ನು ಹೆಚ್ಚಿನ ಹಣವನ್ನು ಹಾಕಿ ಶಿಕ್ಷಕರ ಕ್ಷೇಮಾಭಿವೃದ್ದಿ ನಿಧಿಯನ್ನು ಸ್ಥಾಪಿಸಿ, ಸಂಕಷ್ಟದಲ್ಲಿರುವ ನೀವು ಸೂಚಿಸಿದ ಶಿಕ್ಷಕರಿಗೆ ನೆರವು ನೀಡಲು ಬದ್ದನಾಗಿದ್ದೇನೆ’ ಎಂದರು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸೂಚನೆಯಂತೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಶಿಕ್ಷಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಅವರ ಸೇವಕನಾಗಿ ಕೆಲಸ ಮಾಡುವ ಆಸೆ ನನ್ನದಾಗಿದೆ. ನಾನು ವಿಧಾನ ಪರಿಷತ್‌ಗೆ ಆಯ್ಕೆಯಾದರೆ, ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದರು.
‘ಶಿಕ್ಷಕರ ಸಂಕಷ್ಟಗಳು ಅರ್ಥವಾಗಿವೆ. ನಿಮ್ಮೆಲ್ಲದ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಶಿಕ್ಷಕರ ನಿಧಿ ಸ್ಥಾಪನೆ ಜೊತೆಗೆ ಶಿಕ್ಷಕರ ಬಡಾವಣೆಯನ್ನು ನಿರ್ಮಾಣ ಮಾಡಿ, ಅತ್ಯಂತ ಕಡಿಮೆ ದರದಲ್ಲಿ ಶಿಕ್ಷಕ ಬಂಧುಗಳು ಸಹ ಸ್ವಂತ ನಿವೇಶನ ಹೊಂದಿ ನೆಮ್ಮದಿ ಜೀವನ ನಡೆಸುವಂತಾಗಬೇಕು. ಶಿಕ್ಷಕರ ಶ್ರೇಯೋಭಿವೃದ್ದಿಗೆ ದುಡಿಯವ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ವಿವೇಕಾನಂದ ಹೇಳಿದರು.
ಕಳೆದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ನಿರಂಜನ್‌ಕುಮಾರ್ ಮಾತನಾಡಿದರು.
ಬಿಜೆಪಿ ಮುಖಂಡರಾದ ಎಂ.ರಾಮಚಂದ್ರ, ಡಾ.ಎ.ಆರ್.ಬಾಬು, ನೂರೊಂದುಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಉಪಾಧ್ಯಕ್ಷ ಎಚ್.ಎಂ. ಬಸವಣ್ಣ, ಮಾಜಿ ಅಧ್ಯಕ್ಷ ಆರ್. ಸುಂದರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಮಲೆಯೂರು ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಶೈಲಾ, ನಟರಾಜು, ನಗರ ಮಂಡಲದ ಅಧ್ಯಕ್ಷ ಶಿವರಾಜ್, ಜೆಡಿಎಸ್ ಮುಖಂಡ ಆಲೂರು ಮಲ್ಲು ಇತರರು ಪಾಲ್ಗೊಂಡಿದ್ದರು.
ಮರಿಯಾಲ ಶ್ರೀಗಳ ಭೇಟಿ: ವಿವೇಕಾನಂದ ಅವರು ತಾಲ್ಲೂಕಿನ ಮರಿಯಾಲದ ಮಠಕ್ಕೆ ಭೇಟಿ ನೀಡಿ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.