ADVERTISEMENT

ಪಡಿತರಕ್ಕೆ ನೆಟ್‌ವರ್ಕ್‌ ಸಮಸ್ಯೆ: ಗ್ರಾಮಸ್ಥರ ಪರದಾಟ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:38 IST
Last Updated 28 ಏಪ್ರಿಲ್ 2025, 14:38 IST
ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಗ್ರಾಮದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಪಡಿತರದಾರರು ನಿಂತಿರುವ ಸಂದರ್ಭ ಪಡಿತರ ಚೀಟಿ ಪ್ರದರ್ಶಿಸಿದರು
ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಗ್ರಾಮದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಪಡಿತರದಾರರು ನಿಂತಿರುವ ಸಂದರ್ಭ ಪಡಿತರ ಚೀಟಿ ಪ್ರದರ್ಶಿಸಿದರು   

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿ ಪಡೆಯಲು ನೆಟ್‌ವರ್ಕ್ ಸಮಸ್ಯೆ ಎದುರಾಗಿರುವ ಪರಿಣಾಮ ಪಡಿತರದಾರರು ಪರದಾಡುವಂತಾಗಿದೆ.

ಪೊನ್ನಾಚಿ ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಅಸ್ತೂರು ಗ್ರಾಮದಲ್ಲಿ 250ಕ್ಕೂ ಹೆಚ್ಚು ಪಡಿತರ ಪಡೆಯುವ ಕುಟುಂಬಗಳಿವೆ. ಇವರಲ್ಲಿ ಅಂಗವಿಕಲರು, ಗರ್ಭಿಣಿಯರು, ವಯೋವೃದ್ಧರು ಇದ್ದಾರೆ. ಪಡಿತರ ಹಂಚುವ ಮೊದಲು ಬೆರಳಚ್ಚು ನೀಡುವುದು ಕಡ್ಡಾಯ. ಆದರೆ, ಬೆರಳಚ್ಚು ಮಾಡಲು ಇಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿಯವರು ಪೊನ್ನಾಚಿಗೆ ಬಂದು ಸೇವೆ ನೀಡುತ್ತಿದ್ದು, ಅಸ್ತೂರು ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ.

ಇಲ್ಲಿಗೆ ನಡೆದುಕೊಂಡು ಬಂದರೂ ಬೆಳಿಗ್ಗೆಯಿಂದ ಸಂಜೆವರೆಗೆ ಸರದಿ ಸಾಲಿನಲ್ಲಿ ನಿಂತು ಊಟ ನೀರು ಇಲ್ಲದೆ ಪಡಿತರ ಬೆರಳಚ್ಚು ಮಾಡಬೇಕಾಗುತ್ತದೆ. ಇಲ್ಲಿರುವ ಗ್ರಾಮಗಳೆಲ್ಲವೂ ಕಾಡಂಚಿನಲ್ಲಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಕೂಡ ಜನರಲ್ಲಿ ಆತಂಕ ಉಂಟುಮಾಡಿದೆ. ಸಂಬಂಧಪಟ್ಟವರು ಸಮಸ್ಯೆ ಸರಿಪಡಿಸಿಕೊಡುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.

ADVERTISEMENT

‘ಪೊನ್ನಾಚಿಯಲ್ಲಿ ಏರಟೆಲ್‌ ಮತ್ತು ಜಿಯೋ ಟವರ್‌ಗಳಿದ್ದು, ಅಕ್ಕಪಕ್ಕದ ಗ್ರಾಮಗಳಿಗೆ ನೆಟ್‌ವರ್ಕ್ ಸಿಗದಿರುವುದು ದುರದೃಷ್ಟಕರ.  ಇಂತಹ ಅವ್ಯವಸ್ಥೆಯ ಬಗ್ಗೆ ಯಾರನ್ನು ಕೇಳುವುದು’ ಎಂದು ಗ್ರಾಮದ ರವಿಕುಮಾರ್ ಅವಲತ್ತುಕೊಂಡರು.

ಶೀಘ್ರವಾಗಿ ಸಮಸ್ಯೆ ನಿವಾರಿಸದಿದ್ದಲ್ಲಿ ಗ್ರಾಮಸ್ಥರೆಲ್ಲರೂ ಹನೂರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.