ADVERTISEMENT

ಏಡ್ನ್‌ ತಡೆ ಸೊಸೈಟಿ ಗುತ್ತಿಗೆ ನೌಕರರ ಮುಷ್ಕರಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 5:45 IST
Last Updated 18 ಫೆಬ್ರುವರಿ 2024, 5:45 IST
ಚಂದ್ರಶೇಖರ ಪಾಟೀಲ
ಚಂದ್ರಶೇಖರ ಪಾಟೀಲ   

ಚಾಮರಾಜನಗರ: ಸೇವೆ ಕಾಯಂ ಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏಡ್ಸ್‌ ತಡೆ (ಪ್ರಿವೆನ್ಷನ್) ಸೊಸೈಟಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರು ಸೋಮವಾರದಿಂದ (ಫೆ.19) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಏಡ್ಸ್‌ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಬೆಂಬಲ ನೀಡಿವೆ. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಸ್ನೇಹ ಜ್ಯೋತಿ ಮಹಿಳಾ ಸಂಘ, ಚೈತನ್ಯ ನೆಟ್‌ವರ್ಕ್‌, ಸಮತ ಸೊಸೈಟಿ ಮತ್ತು ಕೂರ್‌ ಸಂಸ್ಥೆಯ ಪ್ರತಿನಿಧಿಗಳು, ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು. 

ಸ್ನೇಹ ಜ್ಯೋತಿ ಮಹಿಳಾ ಸಂಘದ ಸಿಇಒ ಚಂದ್ರಶೇಖರ್‌ ಪಾಟೀಲ ಮಾತನಾಡಿ, ‘ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿಯ ಐಸಿಟಿಸಿ, ಎಆರ್‌ಟಿ ಕೇಂದ್ರಗಳಲ್ಲಿ 22 ವರ್ಷಗಳಿಂದ 1800ಕ್ಕೂ ನೌಕರರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವದ ಬಗ್ಗೆ ಭಯಪಡದೆ ಎಚ್‌ಐಸಿ ಸೋಂಕಿತರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಅಂತವರಿಗೆ ಸರ್ಕಾರ ಸೇವಾ ಭದ್ರತೆಯನ್ನು ನೀಡಬೇಕು’ ಎಂದು ಒತ್ತಾಯಿಸಿದರು. 

ADVERTISEMENT

‘ಜಿಲ್ಲೆಯಲ್ಲಿ ಐದು ಐಸಿಟಿಸಿ, ಎರಡು ಎಆರ್‌ಟಿಗಳಿವೆ. 35ರಿಂದ 40ರಷ್ಟು ನೌಕರರು ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ನೌಕರರ ಹುದ್ದೆಗಳನ್ನು ಆರೋಗ್ಯ ಇಲಾಖೆಯಲ್ಲಿರುವ ಸಮಾನಾಂತರ ಹುದ್ದೆಗಳಿಗೆ ವಿಲೀನಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ತರ್ಕಬದ್ಧಗೊಳಿಸುವಿಕೆ ರದ್ದುಗೊಳಿಸಬೇಕು, ಸರ್ಕಾರದಿಂದ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ. ಅದಕ್ಕೆ ನಮ್ಮ ಬೆಂಬಲವಿದೆ’ ಎಂದರು.  

ಚೈತನ್ಯ ನೆಟ್‌ವರ್ಕ್‌ ಭಾಗ್ಯ ಮಾತನಾಡಿ, ‘ಎಚ್‌ಐವಿ ಸೋಂಕಿತರ ರಕ್ತಪರೀಕ್ಷೆ, ರೋಗಿಗಳಿಗೆ ಮಾತ್ರೆಗಳ ವಿತರಣೆ ಸೇರಿದಂತೆ ವಿವಿಧ ಕೆಲಸಗಳನ್ನು ಗುತ್ತಿಗೆ ನೌಕರರು ಮಾಡುತ್ತಿದ್ದಾರೆ. ಅವರಿಗೆ ಉತ್ತಮ ವೇತನ ಹಾಗೂ ಸೇವೆ ಕಾಯಂ ಮಾಡಬೇಕು’ ಎಂದು ಒತ್ತಾಯಿಸಿದರು. 

ಸಮತ ಸೊಸೈಟಿಯ ಉಮೇಶ್‌, ಸಿದ್ದು, ಶಿವಮಲ್ಲು, ಮಹದೇವಸ್ವಾಮಿ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.