ADVERTISEMENT

ಗುಂಡ್ಲುಪೇಟೆ: ಜೇನು ಕುರಬರ ಬದುಕು ದುಸ್ತರ

ಬಂಡೀಪುರ ಕಾಡಂಚಿನ ಗ್ರಾಮ: ವ್ಯವಸ್ಥಿತವಾಗಿರದ ಮನೆ, ಶಿಕ್ಷಣ, ಆರೋಗ್ಯ, ಸಾರಿಗೆ ಸೇವೆ ಅಲಭ್ಯ

ಮಲ್ಲೇಶ ಎಂ.
Published 28 ಮೇ 2022, 4:05 IST
Last Updated 28 ಮೇ 2022, 4:05 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಪ್ರದೇಶದ ಆಡಿನ ಕಣಿವೆಯಲ್ಲಿರುವ ಮನೆಗಳ ನೋಟ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಪ್ರದೇಶದ ಆಡಿನ ಕಣಿವೆಯಲ್ಲಿರುವ ಮನೆಗಳ ನೋಟ   

ಗುಂಡ್ಲುಪೇಟೆ: ಬುಡಕಟ್ಟು ಹಾಗೂ ಆದಿವಾಸಿ ಜನರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಅನೇಕ ಯೋಜನೆಗಳನ್ನು ಸರ್ಕಾರ ರೂಪಿಸಿದ್ದರೂ ಅವುಗಳು ಸಮರ್ಪಕವಾಗಿ ಆದಿವಾಸಿ ಜನರಿಗೆ ತಲುಪದ ಕಾರಣದಿಂದ ಅವರ ಬದುಕು ಇನ್ನೂ ಸುಧಾರಿಸಿಲ್ಲ.

ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಆಡಿನ ಕಣಿವೆ ಗ್ರಾಮದ ಜನರು ರಸ್ತೆ, ಸಾರಿಗೆ, ಶಾಲೆ ಮುಂತಾದ ಮೂಲ ಸೌಕರ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ.

ಈ ಹಾಡಿಯಲ್ಲಿ 40ಕ್ಕೂ ಹೆಚ್ಚಿನ ಜೇನುಕುರುಬ ಕುಟುಂಬಗಳು ವಾಸುತ್ತಿವೆ. ಆಡಿನಕಣಿವೆಗೆ ಗ್ರಾಮದಸ್ಥಾನಮಾನ ಸಿಕ್ಕಿ ಮೂರು ದಶಕಗಳು ಕಳೆದರೂ,ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಶಾಲೆ, ಆಸ್ಪತ್ರೆ ಸೇರಿದಂತೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜನರು ಎರಡು ಕಿ.ಮೀ ದೂರ ಕಾಡಿನಲ್ಲಿ ನಡೆಯಬೇಕಿದೆ. ಕಾಡು ಪ್ರಾಣಿಗಳ ಹಾವಳಿಯ ನಡುವೆ ಜನರು ಬದುಕು ನಡೆಸಬೇಕಿದೆ.

ADVERTISEMENT

ಸರ್ಕಾರದ ವತಿಯಿಂದ ಮನೆಗಳು ನಿರ್ಮಾಣವಾಗಿದ್ದರೂ, ಸುವ್ಯವಸ್ಥಿತವಾಗಿಲ್ಲ. ಶೌಚಾಲಯಗಳಿಗೆ ಬಾಗಿಲು ಹಾಕಿಲ್ಲ, ಗೋಡೆಗಳನ್ನು ನಿರ್ಮಿಸಿ ಬಣ್ಣ ಬಳಿದಿದ್ದಾರೆ.

ಕಾಲೋನಿಯಲ್ಲಿ 20 ಹೆಚ್ಚು ಮಕ್ಕಳಿದ್ದಾರೆ. ಆದರೆ ಶಾಲೆಗೆ ಕೇವಲ ಐದಾರು ಮಕ್ಕಳು ಹೋಗುತ್ತಾರೆ.ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದ್ದರೂ ಶಿಕ್ಷಕರು ಬಾರದಿದ್ದರಿಂದಾಗಿ ಮಂಗಲ ಗ್ರಾಮಕ್ಕೆ ಹೋಗಬೇಕಿದೆ.

ಬೆಳಿಗ್ಗೆ ಸಂಜೆ ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸದೆ ಮನೆಯಲ್ಲೇ ಇರಿಸಿದ್ದಾರೆ. ಕೆಲವರು ಮಾತ್ರ ಮಕ್ಕಳನ್ನು ಮಂಗಲ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾರೆ.

ಮಕ್ಕಳನ್ನು ಶಾಲೆಗೆ ಬಿಡುವುದೇ ಕೆಲಸ ಆಗುತ್ತಿದೆ. ಕೂಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಹೀಗಾಗಿ ಕೆಲವರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಹೇಳುತ್ತಾರೆ ಇಲ್ಲಿನ ಮಹಿಳೆಯರು.

ವನಂ ಪೌಂಡೇಷನ್ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ಕಾಡಂಚಿನ ಗ್ರಾಮಗಳ ಮಕ್ಕಳನ್ನು ಕರೆತರಲು ಮಂಗಲ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಬಸ್ ಒಂದನ್ನು ಕೊಡುಗೆಯಾಗಿ ನೀಡಿದೆ. ಆದರೆ ಬಸ್ ನಿರ್ವಹಣೆ ಸಮಸ್ಯೆಯಿಂದ ಬುಡಕಟ್ಟು ಜನಾಂಗದ ಕೆಲ ಕಾಲೋನಿಗಳಿಗೆ ಬಸ್ ಬರುತ್ತಿಲ್ಲ. ಆಡಿನ ಕಣಿವೆ ಕಾಲೋನಿಗೆ ಒಂದು ಸಲನೂ ಬಂದಿಲ್ಲ ಎಂದು ಹೇಳುತ್ತಾರೆ ನಿವಾಸಿಗಳು.

‘ಕಾಲೊನಿಯಲ್ಲಿ ಅಂಗನವಾಡಿ ಇದ್ದು, ಇಲ್ಲಿಗೆ ಸಾರಿಗೆ ಸೌಕರ್ಯ ಇಲ್ಲದಿರುವುದರಿಂದ ಮತ್ತು ಕಾಡು ಪ್ರಾಣಿಗಳಿಗೆ ಹೆದರಿ ಸಿಬ್ಬಂದಿ ವಾರಕ್ಕೊಮ್ಮೆ ಬಂದು ಪಡಿತರ ಪದಾರ್ಥಗಳನ್ನು ನೀಡಿ ಹೋಗುತ್ತಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

ಮನವಿಗೂ ಸಿಕ್ಕಿಲ್ಲ ಸ್ಪಂದನೆ
‘ಆಡಿನ ಕಣಿವೆ ಮಕ್ಕಳು ಪ್ರತಿದಿನ ಕಾಡಿನಲ್ಲಿ ನಡೆದುಕೊಂಡು ಶಾಲೆಗೆ ಬರುತ್ತಾರೆ. ಸಾರಿಗೆ ವ್ಯವಸ್ಥೆ ಮಾಡುವಂತೆ ಕೆಎಸ್‌ಆರ್‌ಟಿಸಿ ಡಿಪೊ ಮ್ಯಾನೇಜರ್ ಅವರಿಗೆ ಮನವಿ ಮಾಡಿದ್ದರೂ ವ್ಯವಸ್ಥೆ ಆಗಿಲ್ಲ. ಜೇನು ಕುರುಬರು ಬಹಳ ಹಿಂದುಳಿದ ಜನ ಬಾಯಿಬಿಟ್ಟು ಏನನ್ನೂ ಕೇಳುವುದಿಲ್ಲ. ಜನರ ಜೊತೆಗೆ ಬರೆಯುವುದಕ್ಕೆ ಹಿಂಜರಿಯುತ್ತಾರೆ. ಆದ್ದರಿಂದ ಸಮಸ್ಯೆಗಳು ಹೆಚ್ಚಾಗುತ್ತಿದೆ. ಸರ್ಕಾರ ಇವರ ಬದುಕಿಗೆ ನ್ಯಾಯ ಒದಗಿಸಬೇಕು’ ಎಂದು ಮಂಗಲ ಗ್ರಾಮದ ಮುಖಂಡ ಉಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

*
ಆಡಿನ ಕಣಿವೆಗೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಮಾಡುವ ಸಂಬಂಧ ಅಧಿಕಾರಿಗಳ ಜೊತೆಗೆ ಮಾ‌ತಾಡುತ್ತೇನೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗುವುದು.
-ಸಿ.ಜೆ.ರವಿಶಂಕರ್, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.