ADVERTISEMENT

ಸಭೆಗೆ ಬಾರದ ಅಧಿಕಾರಿಗಳು ಬೇಡ: ನಿರಂಜನ್

ಭತ್ತದ ಖರೀದಿ ಕೇಂದ್ರ ತೆರೆಯಲು ತಾ.ಪಂ. ಸದಸ್ಯರ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:56 IST
Last Updated 1 ಡಿಸೆಂಬರ್ 2019, 14:56 IST
ಯಳಂದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು
ಯಳಂದೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು   

ಯಳಂದೂರು: ‘ತಾಲ್ಲೂಕು ಪಂಚಾಯಿತಿ ಸಭೆಗೆ ಬಾರದ ಅಧಿಕಾರಿಗಳು, ಇನ್ನೂ ಮುಂದೆ ತಾಲ್ಲೂಕಿಗೂ ಬೇಕಾಗಿಲ್ಲ’ ಎಂದು ಸಭೆಯಲ್ಲಿ ನಿರ್ಣಯ ಮಾಡಲಾಗುವುದು ಎಂದು ತಾ.ಪಂ. ಅಧ್ಯಕ್ಷ ಎಂ.ನಿರಂಜನ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಅಧಿಕಾರಿಗಳು ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕೆಳ ಹಂತದ ಅಧಿಕಾರಿಗಳನ್ನು ಕಳುಹಿಸಿ, ಕರ್ತವ್ಯದಿಂದ ನುಣುಚಿಕೊಳ್ಳುತ್ತಾರೆ. ಇವರ ಬಗ್ಗೆ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು’ ಎಂದರು.

ADVERTISEMENT

‘ತಾಲ್ಲೂಕಿನ ಬಿಆರ್‌ಟಿಯಲ್ಲಿ ಒತ್ತುವರಿ ಸಮಸ್ಯೆ ಕಾಡಿದೆ. ಕಾಡಂಚಿನ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸುವರ್ಣಾವತಿ ಸೇತುವೆ ಮೇಲೆ ಲಾರಿಗಳು ಅತಿ ಭಾರದ ಕಲ್ಲು ಹೊತ್ತ ಸಂಚರಿಸುತ್ತವೆ. ಗಣಿ ಇಲಾಖೆ ಈ ಬಗ್ಗೆ ಸಮರ್ಪಕ ಮಾಹಿತಿ ಸಲ್ಲಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಯಂತ್ರದ ಮೂಲಕ ಭತ್ತದ ನಾಟಿ ಕೈಗೊಳ್ಳುವ ಕೃಷಿಕರಿಗೆ ಸಹಾಯಧನ ಒದಗಿಸಬೇಕು ಮತ್ತು ಬೆಂಬಲ ಬೆಲೆ ನಿಗದಿಪಡಿಸಬೇಕು. ಡಿಸೆಂಬರ್ ಒಳಗೆ ಕೊಯ್ಲು ಮಾಡಲು ಜಾಗೃತಿ ಮೂಡಿಸಬೇಕು, ಸಹಕಾರಿ ಸಂಘಗಳ ಸದಸ್ಯರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಆರೋಗ್ಯ ಇಲಾಖೆ ವಿಶೇಷ ದಿನಗಳನ್ನು ಆಚರಿಸುವಾಗ ಸದಸ್ಯರನ್ನು ಆಹ್ವಾನಿಸಬೇಕು’ ಎಂದು ಸದಸ್ಯ ನಾಗರಾಜು ವೈ.ಕೆ.ಮೋಳೆ ವೈದ್ಯರು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು.

ಗಣಿ, ಭೂ ವಿಜ್ಞಾನ, ಅಬ್ಕಾರಿ ಮತ್ತು ಸರ್ವೇ ಇಲಾಖಾ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲ ಎಂದು ಸದಸ್ಯ ಅಗರ ವೆಂಕಟೇಶ್ ದೂರಿದರು.

‘ತಾಲ್ಲೂಕಿನಲ್ಲಿ 3500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿದೆ. ಡಿಸೆಂಬರ್‌ನಲ್ಲಿ ಭತ್ತದ ಕೊಯ್ಲು ಮಾಡುವುದರಿಂದ ಖರೀದಿ ಕೇಂದ್ರ ತೆರೆಯಲು ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಯಂತ್ರದ ಮೂಲಕ ಕೊಯ್ಲು ಮಾಡಿದರೆ ಸಹಾಯಧನ ಇರುವುದಿಲ್ಲ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಸಭೆಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷೆ ಮಲ್ಲಾಜಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಸದಸ್ಯರಾದ ಸಿದ್ದರಾಜು, ಮಣಿ, ಶಾರದಾಂಬೆ, ಭಾಗ್ಯ ನಂಜಯ್ಯ, ಪುಟ್ಟು ಮತ್ತು ಇಒ ಬಿ.ಎಸ್ ರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.