ADVERTISEMENT

ಉಮ್ಮತ್ತೂರು: ಉರುಕಾತೇಶ್ವರಿ ಅಮ್ಮನಿಗೆ ನಡೆಯದೆ ಪೂಜೆ

ಗ್ರಾಮದಲ್ಲಿ ನಿಷೇಧಾಜ್ಞೆ, ಪೊಲೀಸ್‌ ಬಂದೋಬಸ್ತ್‌, ಹೊರಗಿನಿಂದಲೇ ಕೈಮುಗಿದು ತೆರಳಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 15:40 IST
Last Updated 5 ಏಪ್ರಿಲ್ 2022, 15:40 IST
ಉಮ್ಮತ್ತೂರಿನ ಉರುಕಾತೇಶ್ವರಿ ಅಮ್ಮನವರ ದೇವಾಲಯದ ಸುತ್ತ ಮಂಗಳವಾರ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಹಾಗೂ ಪೂಜೆಗೆ ಅವಕಾಶ ನೀಡದೇ ಇದ್ದುದರಿಂದ ದೇವಾಲಯ ಬಿಕೋ ಎನ್ನುತ್ತಿತ್ತು
ಉಮ್ಮತ್ತೂರಿನ ಉರುಕಾತೇಶ್ವರಿ ಅಮ್ಮನವರ ದೇವಾಲಯದ ಸುತ್ತ ಮಂಗಳವಾರ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಹಾಗೂ ಪೂಜೆಗೆ ಅವಕಾಶ ನೀಡದೇ ಇದ್ದುದರಿಂದ ದೇವಾಲಯ ಬಿಕೋ ಎನ್ನುತ್ತಿತ್ತು   

ಸಂತೇಮರಹಳ್ಳಿ: ಹೋಬಳಿಯಉಮ್ಮತ್ತೂರು ಗ್ರಾಮದ ಉರುಕಾತೇಶ್ವರಿ ಅಮ್ಮನವರ ದೇವಸ್ಥಾನದ ಬಾಗಿಲನ್ನು ಮಂಗಳವಾರ ತೆರೆಯಲು ಜಿಲ್ಲಾಡಳಿತ ಯಾರಿಗೂ ಅವಕಾಶ ನೀಡಲಿಲ್ಲ. ಇದರಿಂದ ಏಪ್ರಿಲ್‌ ತಿಂಗಳ ಮೊದಲ ಮಂಗಳವಾರದಂದು ಪೂಜೆ ನಡೆಯಲಿಲ್ಲ.

ದೇವ‌ಸ್ಥಾನದ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಏಪ್ರಿಲ್‌ 1ರಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನದ ಸುತ್ತ ಸೇರಿದಂತೆ ಗ್ರಾಮದಲ್ಲಿ ಮಂಗಳವಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ದೇವಾಲಯದ ಸುತ್ತಲೂ ಹಾಗೂ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ದೇವಸ್ಥಾನ ಆಡಳಿತ ನಿರ್ವಹಿಸುತ್ತಿದ್ದ ಟ್ರಸ್ಟ್‌ನ ಪದಾಧಿಕಾರಿಗಳು, ಗ್ರಾಮಸ್ಥರು ದೇವಾಲಯದತ್ತ ಸುಳಿಯಲಿಲ್ಲ.

ಮುಜರಾಯಿ ಇಲಾಖೆಯ ಆದೇಶದಂತೆ ಜಿಲ್ಲಾಡಳಿತ ದೇವಾಲಯವನ್ನು ವಶಕ್ಕೆ ತೆಗೆದುಕೊಂಡಿದ್ದರೂ, ಹೈಕೋರ್ಟ್‌ನ ಮಧ್ಯಂತರ ಆದೇಶದ ಕಾರಣದಿಂದ ಮುಜರಾಯಿ ಇಲಾಖೆಯ ವತಿಯಿಂದ ಪೂಜೆ ನಡೆಯಲಿಲ್ಲ. ಟ್ರಸ್ಟ್‌ನವರಿಗೂ ಪೂಜೆ ಸಲ್ಲಿಸಲೂ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ.

ADVERTISEMENT

ಪ್ರತಿ ತಿಂಗಳ ಮೊದಲ ಮಂಗಳವಾರ ದೇವಾಲಯದ ಬಾಗಿಲು ತೆರೆದು ಉರುಕಾತೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸುವುದಕ್ಕಾಗಿ ಮಂಗಳವಾರ ಬೆಳಿಗ್ಗೆಯೇ ಹಲವು ಭಕ್ತರು ದೇವಾಲಯಕ್ಕೆ ಬಂದಿದ್ದರು. ಆದರೆ, ನಿಷೇಧಾಜ್ಞೆ ಜಾರಿಯಲ್ಲಿದ್ದುದರಿಂದ ‍ಪೊಲೀಸ್‌ ಸಿಬ್ಬಂದಿ ಅವರನ್ನು ಕಳುಹಿಸಿದರು. ಭಕ್ತರು ದೇವಾಲಯದ ಹೊರಗಿನಿಂದಲೇ ಕೈಮುಗಿದು ವಾಪಸ್‌ ಆದರು.

ಎರಡೆರಡು ಬೀಗ: ದೇವಾಲಯದ ಆಡಳಿತದ ವಿವಾದಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ದೇವಾಲಯದ ಆಡಳಿತವನ್ನು ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಮಾರ್ಚ್‌ 10ರಂದು ಆದೇಶ ಹೊರಡಿಸಿತ್ತು. ಅದರಂತೆ, ಜಿಲ್ಲಾಡಳಿತವು ದೇವಾಲಯದ ಬೀಗದ ಕೀ ಹಾಗೂ ಸಂಬಂಧಿಸಿದ ಎಲ್ಲ ವಸ್ತುಗಳನ್ನು ನೀಡುವಂತೆ ಟ್ರಸ್ಟ್‌ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ನೋಟಿಸ್‌ ನೀಡಿದ್ದರೂ, ಅವರು ಸಹಕರಿಸದೇ ಇದ್ದುದರಿಂದ ಮಾರ್ಚ್‌ 25ರಂದು ದೇವಾಲಯಕ್ಕೆ ಅಧಿಕಾರಿಗಳು ಮತ್ತೊಂದು ಬೀಗ ಹಾಕಿದ್ದರು.

ಮುಜರಾಯಿ ಇಲಾಖೆ ಆದೇಶ ಪ್ರಶ್ನಿಸಿ ಟ್ರಸ್ಟ್‌ನವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಏಪ್ರಿಲ್‌ 1ರಂದು ಮಧ್ಯಂತರ ಆದೇಶ ಹೊರಡಿಸಿದ್ದ ನ್ಯಾಯಾಲಯ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು.

ಮುಂದಿನ ಆದೇಶವರೆಗೆ ಯಥಾಸ್ಥಿತಿ:‘ಉರುಕಾತೇಶ್ವರಿ ದೇವಸ್ಥಾನದ ಪೂಜಾ ವಿಷಯಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ದೇವಸ್ಥಾನಕ್ಕೆ ಹಾಕಿರುವ ಬೀಗವನ್ನು ಸರ್ಕಾರವಾಗಲಿ ಅಥವಾ ಟ್ರಸ್ಟ್‌ನವರಾಗಲಿ ತೆಗೆಯುವಂತಿಲ್ಲ. ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡಿಕೊಂಡು ದೇವಸ್ಥಾನದ ಬೀಗ ತೆಗೆಯದೇ ಶಾಂತಿ ಕಾಪಾಡಲಾಗುವುದು’ ಎಂದು ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾನೂನು ಪಾಲಿಸುತ್ತೇವೆ’

ಮಂಗಳವಾರದ ಬೆಳವಣಿಗೆ ಬಗ್ಗೆ ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಟ್ರಸ್ಟ್‌ ಅಧ್ಯಕ್ಷ ಗುರುಮಲ್ಲಪ್ಪ ಅವರು, ‘ದೇವಸ್ಥಾನದ ಆಡಳಿತ ನಡೆಸುವಂತೆ ಹೈಕೋರ್ಟ್ ಟ್ರಸ್ಟ್‌ಗೆ ಆದೇಶ ನೀಡಿದೆ. ಹೀಗಿದ್ದರೂ ತಹಶೀಲ್ದಾರ್ ಅವರು ದೇವಸ್ಥಾನಕ್ಕೆ ಹಾಕಿರುವ ಬೀಗವನ್ನು ತೆರವುಗೊಳಿಸಿ ನಮಗೆ ಅವಕಾಶ ನೀಡಿಲ್ಲ. ಮುಂದಿನ ನ್ಯಾಯಾಲಯದ ಆದೇಶದವರೆಗೆ ನಾವು ಕಾನೂನು ಪಾಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.