ADVERTISEMENT

ಆಪರೇಷನ್ ಎಂದರೆ ಹೌಹಾರುವ ಪುರುಷರು

ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಹಿಂದೇಟು, ಪ್ರೋತ್ಸಾಹಧನ ಕೊಟ್ಟರೂ ತೋರದ ಒಲವು

ನಾ.ಮಂಜುನಾಥ ಸ್ವಾಮಿ
Published 13 ಸೆಪ್ಟೆಂಬರ್ 2019, 19:45 IST
Last Updated 13 ಸೆಪ್ಟೆಂಬರ್ 2019, 19:45 IST
   

ಯಳಂದೂರು: ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದರೂ, ತಾಲ್ಲೂಕಿನಪುರುಷರು ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ (ಎನ್‌ಎಸ್‌ವಿ) ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಈ ಚಿಕಿತ್ಸೆ ಮಾಡಿಸಿಕೊಂಡವರಿಗೆ ₹1,100 ಸಹಾಯಧನ ನೀಡಲಾಗುತ್ತಿದ್ದರೂ ತಪ್ಪು ತಿಳಿವಳಿಕೆಯಿಂದ ಅವರು ಹಿಂದೇಟು ಹಾಕುತ್ತಿದ್ದಾರೆ.

ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಆಗಸ್ಟ್‌ವರೆಗೆ 161 ಮಹಿಳೆಯರು ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಪುರುಷರು ಒಬ್ಬರು ಮಾತ್ರ ಶಸ್ತ್ರಕ್ರಿಯೆ ಮಾಡಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರು ಶಸ್ತ್ರಕ್ರಿಯೆಗೆ ಮುಂದಾಗುತ್ತಿಲ್ಲ ಎಂದು ಹೇಳುತ್ತಾರೆ ವೈದ್ಯರು.

ADVERTISEMENT

ಪ್ರೋತ್ಸಾಹ ಯೋಜನೆ:ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಕೊಂಡ ಬಿಪಿಎಲ್ ಕುಟುಂಬದ ಮಹಿಳೆಗೆ ₹600,
ಎಪಿಎಲ್ ಕುಟುಂಬದ ಸ್ತ್ರೀಯರಿಗೆ ₹250 ಪರಿಹಾರ ಧನ ನೀಡಲಾಗುತ್ತದೆ. ಗಂಡಸರಿಗೆ ಸರ್ಕಾರದ ವತಿಯಿಂದ ₹1,100 ಪ್ರೋತ್ಸಾಹಧನ ಲಭಿಸುತ್ತದೆ.

ಸರಳ ಹಾಗೂ ಸುರಕ್ಷಿತ: ‘ಪುರುಷರಿಗೆ ನಡೆಸುವ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಅತ್ಯಂತ ಸರಳ ಮತ್ತು ಸುರಕ್ಷಿತ. ಇಲ್ಲಿ ಗಾಯ ಮಾಡುವ ಅಥವಾ ಹೊಲಿಗೆ ಹಾಕುವ ಪ್ರಮೇಯವೇ ಇಲ್ಲ.ಈ ಶಸ್ತ್ರ ಚಿಕಿತ್ಸೆಯನ್ನು 5ರಿಂದ 10 ನಿಮಿಷದಲ್ಲಿ ಮಾಡಬಹುದು. ಶಸ್ತ್ರಚಿಕಿತ್ಸೆ ನಂತರ 1 ಗಂಟೆಯಲ್ಲಿ ಮನೆಗೆ ತೆರಳಬಹುದು. ಇದರಿಂದಾಗಿ ಲೈಂಗಿಕ ನಿಶ್ಯಕ್ತಿ ಬರುವುದಿಲ್ಲ ಮತ್ತು ಪುರುಷತ್ವಕ್ಕೆ ಕುಂದುಉಂಟಾಗುವುದಿಲ್ಲ. ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಂಡತಿಯರ ವಿರೋಧ: ಕೆಲವು ಪುರುಷರು ಶಸ್ತ್ರಕ್ರಿಯೆ ಮಾಡಿಸಲು ಮುಂದೆ ಬಂದರೂ ಅವರ ಮಡದಿಯರು ವಿರೋಧ ಮಾಡಿದ ಪ್ರಕರಣಗಳೂ ನಡೆದಿವೆ. ತಾಲ್ಲೂಕಿನಲ್ಲಿ ವರ್ಷಕ್ಕೆ 200 ಪುರುಷರಿಗೆ ಈ ಶಸ್ತ್ರಕ್ರಿಯೆ ನಡೆಸಲು ಇಲಾಖೆ ಗುರಿ ನೀಡಿದೆ. ಆದರೆ ಅರ್ಧ ವರ್ಷದಲ್ಲಿ ಒಬ್ಬರು ಮಾತ್ರ ಮಾಡಿಸಿಕೊಂಡಿದ್ದಾರೆ.

‘ಕಷ್ಟಪಟ್ಟು ದುಡಿಯುವವರು ಪುರುಷರು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಆರೋಗ್ಯ ಸಮಸ್ಯೆ ಎದುರಾದರೆ ಮುಂದೆ ತೊಂದರೆಯಾಗುತ್ತದೆ’ ಎಂಬ ಭಯದಿಂದ ಮಹಿಳೆಯರು ಅಡ್ಡಿ ಮಾಡುತ್ತಿದ್ದಾರೆಎನ್ನಲಾಗಿದೆ. ತಮಗೆ ಶಸ್ತ್ರಚಿಕಿತ್ಸೆ ಮಾಡಿ ಎಂದು ಮಹಿಳೆಯರೇ ಒತ್ತಾಯಿಸುತ್ತಾರೆ.

ಈ ಚಿಕಿತ್ಸೆ ಮಾಡಿಕೊಂಡವರು ನಿಶ್ಶಕ್ತರಾಗುತ್ತಾರೆ ಎನ್ನುವ ತಪ್ಪು ತಿಳಿವಳಿಕೆ ಪುರುಷರ ಹಿಂದೇಟಿಗೆ ಕಾರಣಎನ್ನುತ್ತಾರೆ ವೈದ್ಯರು.

‘ಅಂತರ’ ಚುಚ್ಚುಮದ್ದು

ಶಸ್ತ್ರಚಿಕಿತ್ಸೆ ಭಯ ಎನ್ನುವ ಸ್ತ್ರೀಯರಿಗೆ ರಾಜ್ಯ ಸರ್ಕಾರ ‘ಅಂತರ’ ‌ ಚುಚ್ಚುಮದ್ದನ್ನು ಹೊಸದಾಗಿ ಪರಿಚಯಿಸಿದೆ.

‘ಅಂತರ’ ಚುಚ್ಷುಮದ್ದು ಪ್ರತಿ 3 ತಿಂಗಳಿಗೊಮ್ಮೆ ಸರ್ಕಾರಿ ಆಸ್ಪತ್ರೆಯಲ್ಲಿ ಹಾಕಿಸಿಕೊಂಡರೆ ಸಂತಾನ ನಿಯಂತ್ರಣ
ಮಾಡಬಹುದು. ವರ್ಷಕ್ಕೆ 4 ಬಾರಿ ಈ ಚಚ್ಚುಮದ್ದು ಹಾಕಿಸಿಕೊಳ್ಳಬೇಕು’ ಎಂದು ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳುತ್ತಾರೆ.

ಟ್ಯೂಬೆಕ್ಟಮಿ,ಲ್ಯಾಪೆರೊಸ್ಕೊಪಿ:ಶಾಶ್ವತ ವಿಧಾನದ ಮೂಲಕ ಜನನ ನಿಯಂತ್ರಿಸಲು ಟ್ಯೂಬೆಕ್ಟಮಿ ಹಾಗೂ ಉದರ ದರ್ಶಕ ಶಸ್ತ್ರಚಿಕಿತ್ಸೆ (ಲ್ಯಾಪೆರೊಸ್ಕೊಪಿ) ನಡೆಸಲಾಗುತ್ತದೆ.

‘ಟ್ಯೂಬೆಕ್ಟಮಿಯು ಸಿಜೇರಿಯನ್ಸಮಯದಲ್ಲಿ ಮತ್ತು ಹೆರಿಗೆಯಾದ 7 ದಿನಗಳೊಳಗೆ ಮಾಡುವಶಸ್ತ್ರಚಿಕಿತ್ಸೆ ಆಗಿದೆ. ಉದರ ದರ್ಶಕ ಶಸ್ತ್ರಚಿಕಿತ್ಸೆ ಹೆರಿಗೆಯಾದ 6 ವಾರಗಳ ನಂತರ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ 32 ಟ್ಯೂಬೆಕ್ಟಮಿ ಹಾಗೂ 129ಲ್ಯಾಪೆರೊಸ್ಕೊಪಿ ಚಿಕಿತ್ಸೆ ನೆರವೇರಿಸಲಾಗಿದೆ’ ಎಂದು ಡಾ.ಮಂಜುನಾಥ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.