ADVERTISEMENT

ಚಾಮರಾಜನಗರ: ದಶಕ ಕಳೆದರೂ ಆದಿವಾಸಿಗಳಿಗಿಲ್ಲ ಸೂರು

ಮುಗಿಯದ ಮಳೆಗಾಲದ ಸಂಕಷ್ಟ; ಈ ಬಾರಿಯೂ ತಪ್ಪಲಿಲ್ಲ ಗೋಳು

ಬಾಲಚಂದ್ರ ಎಚ್.
Published 10 ಜೂನ್ 2025, 5:41 IST
Last Updated 10 ಜೂನ್ 2025, 5:41 IST
ಹನೂರು ತಾಲ್ಲೂಕಿನ ಹರೇಪಾಳ್ಯದ ನಂಜೇಗೌಡರ ಜೋಪಡಿಯ ದುಸ್ಥಿತಿ
ಹನೂರು ತಾಲ್ಲೂಕಿನ ಹರೇಪಾಳ್ಯದ ನಂಜೇಗೌಡರ ಜೋಪಡಿಯ ದುಸ್ಥಿತಿ   

ಚಾಮರಾಜನಗರ: ವಾಸಯೋಗ್ಯ ಮನೆಗಳಿಲ್ಲದೆ ಮುರುಕಲು ಜೋಪಡಿಗಳಲ್ಲಿ ವಾಸವಾಗಿರುವ ಜಿಲ್ಲೆಯ ಆದಿವಾಸಿಗಳು ಈ ಬಾರಿಯ ಮಳೆಗಾಲದಲ್ಲೂ ಸಂಕಷ್ಟ ಅನುಭವಿಸಬೇಕಿದೆ. ಸೋರುವ ಸೂರಿನಡಿ ಬಿರುಗಾಳಿ ಮಳೆಯಿಂದ ರಕ್ಷಣೆ ಪಡೆಯಬೇಕಿದೆ. ದಶಕಗಳು ಕಳೆದರೂ ಸೂರಿನ ಭಾಗ್ಯ ಒದಗಿಸದ ಆಡಳಿತ ವ್ಯವಸ್ಥೆಯ ಬಗ್ಗೆ ಸಮುದಾಯಗಳಲ್ಲಿ ಆಕ್ರೋಶ ಮಡುಗಟ್ಟಿದೆ.

ಜಿಲ್ಲೆಯ ಹನೂರು, ಯಳಂದೂರು, ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆದಿವಾಸಿ ಸಮುದಾಯ ನೆಲೆ ನಿಂತಿದ್ದು 32,760 ಜನಸಂಖ್ಯೆ ಹೊಂದಿದೆ. 8,100ಕ್ಕೂ ಹೆಚ್ಚು ಕುಟುಂಬಗಳಿದ್ದು ಬಹುತೇಕರಿಗೆ ಸುಸಜ್ಜಿತ ಸೂರಿನ ವ್ಯವಸ್ಥೆ ಇಲ್ಲ. ಹನೂರು ತಾಲ್ಲೂಕಿನ ಹಾಡಿ ಪೋಡಿಗಳಲ್ಲಿ ನೆಲೆಸಿರುವ ಗಿರಿಜನರ ಸ್ಥಿತಿಯಂತೂ ಚಿಂತಾಜನಕವಾಗಿದೆ.

ಶಾಲೆ, ಸುಸಜ್ಜಿತ ರಸ್ತೆ, ವಿದ್ಯುತ್, ಆಸ್ಪತ್ರೆ ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತವಾಗಿರುವ ಬುಡಕಟ್ಟು ಸಮುದಾಯಗಳಿಗೆ ಸುಸಜ್ಜಿತ ಸೂರಿನ ಭಾಗ್ಯವೂ ದೊರೆತಿಲ್ಲ. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಸಮುದಾಯ ಇಂದಿಗೂ ಹರಕಲು ಜೋಪಡಿ, ಶಿಥಿಲಗೊಂಡ ಹೆಂಚಿನ ಮನೆಗಳಲ್ಲಿ ಬದುಕು ಕೊಟ್ಟಿಕೊಂಡಿದ್ದು ಮಳೆಗಾಲದಲ್ಲಿ ಜೀವಭಯದಲ್ಲಿ ಬದುಕಬೇಕಾಗಿದೆ.

ADVERTISEMENT

‘ಜೋಪಡಿಯ ಮಾಡಿಗೆ ಹೊದಿಸಲಾಗಿರುವ ಟಾರ್ಪಾಲುಗಳು ಬಿಸಿಲು, ಗಾಳಿ–ಮಳೆಗೆ ಹರಿದು ಹೋಗಿದ್ದು ಮಳೆಗಾಲದಲ್ಲಿ ತೊಟ್ಟಿಕ್ಕುತ್ತಿವೆ. ಮಳೆ ಹೆಚ್ಚಾದರೆ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯಬೇಕಿದ್ದು, ಮಳೆನೀರಿನಲ್ಲಿ ತೊಯ್ದು ತೊಪ್ಪೆಯಾಗುತ್ತಿದ್ದಾರೆ. ಯಾವಾಗ ಮಾಡು ಕುಸಿದು ಮೈಮೇಲೆ ಬೀಳುತ್ತದೋ ಎಂಬ ಭಯದಲ್ಲಿ ಬದುಕುತ್ತಿದ್ದೇವೆ ಎನ್ನುತ್ತಾರೆ’ ಆದಿವಾಸಿ ಹಿತರಕ್ಷಣ ಸಮಿತಿಯ ಅಧ್ಯಕ್ಷ ನಾಗೇಂದ್ರ ಗಾಣಿಗ ಮಂಗಲ.

‘ಮಳೆಗಾಲದಲ್ಲಿ ಹಾವು, ಚೇಳು ಸಹಿತ ವಿಷಜಂತುಗಳು ಜೋಪಡಿಯೊಳಗೆ ನುಗುತ್ತವೆ. ಹಲವು ಮಂದಿ ಕಡಿತಕ್ಕೆ ಒಳಗಾಗಿದ್ದಾರೆ. ಮಳೆಗಾಲಕ್ಕೆ ಸಂಗ್ರಹಿಸಿಟ್ಟ ಉರುವಲು, ಆಹಾರ–ಧಾನ್ಯಗಳು, ಬಟ್ಟೆ ಬರೆ, ದಾಖಲೆ ಪತ್ರಗಳು ಮಳೆನೀರಿನಿಂದ ಹಾಳಾಗುತ್ತಿವೆ.

ಗುಡಿಸಲು ಸೋರುವುದರಿಂದ ರಾತ್ರಿ ನಿದ್ದೆಮಾಡಲಾಗುತ್ತಿಲ್ಲ. ಮಕ್ಕಳ ಓದಿಗೂ ಸಮಸ್ಯೆಯಾಗಿದೆ. ರಾತ್ರಿಪೂರ್ತಿ ತೊಟ್ಟಿಕ್ಕುವ ಮಳೆ ನೀರನ್ನು ಪಾತ್ರೆಗಳಲ್ಲಿ ಹಿಡಿದಿಡುವುದೇ ಕಾಯಕವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹನೂರು ತಾಲ್ಲೂಕಿನ ಹರೇಪಾಳ್ಯದ ಆದಿವಾಸಿ ಮಹಿಳೆ ರಂಗಮ್ಮ.

‘ಸಿದ್ದು’ ಸೂರುಗಳನ್ನು ಕೊಡಿ

‘ಈಚೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆದಿವಾಸಿಗಳಿಗೆ ಸೂರು ನೀಡುವ ಜಿಲ್ಲಾಡಳಿತದ ಪ್ರಸ್ತಾವವನ್ನು ಸರ್ಕಾರ ತಿರಸ್ಕರಿಸಿರುವುದು ಬೇಸರದ ಸಂಗತಿ. ಮಾರಿಗುಡಿ, ಪಾಲಾರ್, ಕಗ್ಗಲಹುಂಡಿ, ಬಿಸಿಲಕೆರೆ, ಬೋರೇಗೌಡನಪುರ ಸೇರಿದಂತೆ ಬೆಟ್ಟದ ವ್ಯಾಪ್ತಿಯ ಬಹುತೇಕ ಹಾಡಿಗಳ ಸ್ಥಿತಿ ಗಂಭೀರವಾಗಿದೆ. ಒಂದು ಜೋಪಡಿಗಳಲ್ಲಿ ಎರಡು ಮೂರು ಕುಟುಂಬಗಳು ನೆಲೆಸಿವೆ. 50 ವರ್ಷಗಳ ಹಿಂದೆ ಕಟ್ಟಿಕೊಂಡಿರುವ ಮಣ್ಣಿನ ಮನೆಗಳು ಶಿಥಿಲಗೊಂಡು ಕುಸಿಯುವ ಆತಂಕದಲ್ಲಿವೆ. ಜಿಲ್ಲಾಡಳಿತದ ಮಹತ್ವಾಕಾಂಕ್ಷಿ ‘ಸಿದ್ದು’ ವಸತಿ ಯೋಜನೆಯಡಿ ಎಲ್ಲರಿಗೂ ಸೂರು ನೀಡಬೇಕು’ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಒತ್ತಾಯಿಸಿದರು.

ಜೋಪಡಿಗಳಲ್ಲಿ ವನವಾಸ

ಆದಿವಾಸಿಗಳು ವಾಸಿಸಲು ಯೋಗ್ಯವಲ್ಲದ ಜೋಪಡಿಗಳಲ್ಲಿ ಬದುಕುತ್ತಿದ್ದಾರೆ. ಮಳೆಗಾಲದಲ್ಲಿ ವಿಷಜಂತುಗಳ ಕಾಟ ಅನುಭವಿಸುತ್ತಿದ್ದಾರೆ. ಅವಘಡಗಳು ಸಂಭವಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಆದಿವಾಸಿಗಳಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಆದಿವಾಸಿ ಹಿತರಕ್ಷಣ ಸಮಿತಿ ಅಧ್ಯಕ್ಷ ನಾಗೇಂದ್ರ ಗಾಣಿಗ ಮಂಗಲ ಆಗ್ರಹಿಸಿದರು.

ಆದಿವಾಸಿಗಳಿಗೆ ಮನೆಗಳನ್ನು ನೀಡುವ ಜಿಲ್ಲಾಡಳಿತದ ಪ್ರಸ್ತಾವ ಸರ್ಕಾರದ ಮುಂದಿದೆ ತಾತ್ಕಾಲಿಕವಾಗಿ ಟಾರ್ಪಾಲು ವಿತರಿಸಲು ದುರಸ್ತಿಗೆ ಕ್ರಮ ವಹಿಸಲು ಸೂಚನೆ ನೀಡಲಾಗುವುದು.
ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ
ಹರೇಪಾಳ್ಯದ ಆದಿವಾಸಿ ಮಹಿಳೆ ರಂಗಮ್ಮ ಅವರ ಮನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.