ADVERTISEMENT

ಮೂರು ವನ್ಯಧಾಮಗಳಿಗಿಲ್ಲ ಕಾಯಂ ಪಶುವೈದ್ಯರು

ಬಂಡೀಪುರದಲ್ಲಿ ಮಾತ್ರ ಒಬ್ಬರು ಕಾರ್ಯನಿರ್ವಹಣೆ, ಪಶುಸಂಗೋಪನೆ ಇಲಾಖೆಯಿಂದ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:45 IST
Last Updated 30 ಆಗಸ್ಟ್ 2019, 19:45 IST
ಮಲೆಮಹದೇಶ್ವರ ವನ್ಯಧಾಮದಲ್ಲಿ ಮೃತಪಟ್ಟಿದ್ದ ಕಾಟಿಯನ್ನು ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ಪಶು ಸಂಗೋಪನಾ ಇಲಾಖೆ ವೈದ್ಯರು (ಸಂಗ್ರಹ ಚಿತ್ರ)
ಮಲೆಮಹದೇಶ್ವರ ವನ್ಯಧಾಮದಲ್ಲಿ ಮೃತಪಟ್ಟಿದ್ದ ಕಾಟಿಯನ್ನು ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ಪಶು ಸಂಗೋಪನಾ ಇಲಾಖೆ ವೈದ್ಯರು (ಸಂಗ್ರಹ ಚಿತ್ರ)   

ಚಾಮರಾಜನಗರ/ಹನೂರು: ಜಿಲ್ಲೆಯ ಪ್ರಮುಖ ಮೂರು ಸಂರಕ್ಷಿತಾರಣ್ಯಗಳಾದ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಧಾಮ ಮತ್ತು ಕಾವೇರಿ ವನ್ಯಧಾಮಗಳಲ್ಲಿ ಕಾಯಂ ಪಶುವೈದ್ಯರಿಲ್ಲ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಬ್ಬರು ಕಾರ್ಯನಿರ್ವಹಣೆ ಮಾಡುತ್ತಿದ್ದು, ಅವರು ಕೂಡ ನೇರ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಪಶು ಸಂಗೋಪನಾ ಇಲಾಖೆಯಿಂದ ಅವರನ್ನು ನಿಯೋಜಿಸಲಾಗಿದೆ.

ಅರಣ್ಯ ಇಲಾಖೆ ವತಿಯಿಂದ ಪಶುವೈದ್ಯರನ್ನು ನೇಮಕ ಮಾಡಲು ಅವಕಾಶ ಇಲ್ಲ. ಅಗತ್ಯವಿದ್ದಾಗ, ಪಶುಸಂಗೋಪನೆ ಇಲಾಖೆಯ ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ADVERTISEMENT

ಆದರೆ, ‘ವನ್ಯಧಾಮಗಳಲ್ಲಿ ಕಾಯಂ ಪಶುವೈದ್ಯರ ಅಗತ್ಯ ಇದೆ. ಇಲಾಖೆ ವತಿಯಿಂದಲೇ ನೇಮಕ ಮಾಡಿಕೊಳ್ಳಬೇಕು’ ಎಂಬ ಅಭಿಪ್ರಾಯವನ್ನು ಇಲ್ಲಿನ ಅಧಿಕಾರಿಗಳು ಉನ್ನತ ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲೇ ಪ್ರಮುಖವಾಗಿರುವ ಮೂರೂ ವನ್ಯಧಾಮಗಳು ವಿಶಿಷ್ಟ ಪ್ರಭೇದದ ವನ್ಯ ಸಂಕುಲಕ್ಕೆ ಆಶ್ರಯ ನೀಡಿವೆ. ಹುಲಿ ಸಂರಕ್ಷಿತ ಪ್ರದೇಶವಾಗಿರುವ ಬಿಳಿಗಿರಿರಂಗನಾಥಸ್ವಾಮಿ ರಕ್ಷಿತಾರಣ್ಯ, ಹುಲಿ ಸಂರಕ್ಷಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ತುದಿಗಾಲಲ್ಲಿ ನಿಂತಿರುವ ಮಲೆ ಮಹದೇಶ್ವರ ವನ್ಯಧಾಮದಲ್ಲಿ ವ್ಯಾಘ್ರಗಳ ಸಂತತಿ ಗಣನೀಯವಾಗಿದೆ. ಮೂರು ರಕ್ಷಿತಾರಣ್ಯಗಳಲ್ಲೂ ಮಾಂಸಾಹಾರಿ ಹಾಗೂ ಸಸ್ಯಾಹಾರಿ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿವೆ.

ಹುಲಿ‌ ಹಾಗೂ ಇನ್ನಿತರ ಮಾಂಸಾಹಾರಿ ಪ್ರಾಣಿಗಳು ಇರುವ ಅರಣ್ಯ ಪ್ರದೇಶದಲ್ಲಿ ಸಸ್ಯಾಹಾರಿ ಪ್ರಾಣಿಗಳ ಸಾವು ಸಂಭವಿಸುತ್ತಲೇ ಇರುತ್ತದೆ. ಕಳ್ಳಬೇಟೆಗಾರರ ಹಾವಳಿಯೂ ಇಲ್ಲಿ ಸಾಕಷ್ಟಿದೆ. ಹೀಗಿರುವಾಗ ಪ್ರಾಣಿಗಳು ಸತ್ತಾಗ ಅಥವಾ ತೀವ್ರವಾಗಿ ಗಾಯಗೊಂಡ ಪ್ರಾಣಿಗಳು ಕಂಡು ಬಂದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಪಶುವೈದ್ಯರ ಅವಶ್ಯಕತೆ ಇರುತ್ತದೆ. ವನ್ಯಪ್ರಾಣಿಗಳು ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಅದರ ಅಂತ್ಯಕ್ರಿಯೆ ನಡೆಸಬೇಕು ಎಂದು ವನ್ಯಜೀವಿ ಸಂರಕ್ಷಣ ಕಾಯ್ದೆಯೂ ಹೇಳುತ್ತದೆ. ಆದರೆ, ಇಲ್ಲಿ ಕಾಯಂ ವೈದ್ಯರೇ ಇಲ್ಲ.ಹಾಗಾಗಿ, ಅಗತ್ಯದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳುಪಶು ಸಂಗೋಪನಾ ಇಲಾಖೆಯ ವೈದ್ಯರನ್ನೇ ಅವಲಂಭಿಸಬೇಕಿದೆ.

ತುರ್ತು ಸಂದರ್ಭದಲ್ಲಿ ಪಶುವೈದ್ಯರು ಹೊರಗಡೆ ಹೋಗಿದ್ದರೆ, ದಿನಗಟ್ಟಲೆ ಕಾದು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಹೇಳುತ್ತಾರೆ ಕೆಳಹಂತದ ಅಧಿಕಾರಿಗಳು.ಈಚೆಗೆ ಮಲೆಮಹದೇಶ್ವರ ವನ್ಯಧಾಮದಲ್ಲಿ ಮೃತಪಟ್ಟಿದ್ದ ಚಿರತೆಯ ಮರಣೋತ್ತರ ಪರೀಕ್ಷೆಗೆ ವೈದ್ಯರು ಸಿಗದಿದ್ದುದರಿಂದ ಮೂರು ದಿನಗಳ ಬಳಿಕ ವೈದ್ಯರು ಬಂದ ನಂತರ ಪರೀಕ್ಷೆ ನಡೆಸಲಾಗಿತ್ತು.

ಅವಕಾಶ ಇಲ್ಲ: ‘ಅರಣ್ಯ ಇಲಾಖೆಯಲ್ಲಿ ಪಶುವೈದ್ಯರ ನೇಮಕಕ್ಕೆ ಅವಕಾಶ ಇಲ್ಲ. ಪಶುಸಂಗೋಪನಾ ಇಲಾಖೆಯಿಂದ ಪಶು ವೈದ್ಯರನ್ನು ನಿಯೋಜಿಸಲಾಗುತ್ತದೆ. ಸಾಮಾನ್ಯವಾಗಿ ಸಂರಕ್ಷಿತಾರಣ್ಯದಲ್ಲಿ ಪ್ರಾಣಿಗಳು ಮೃತಪಟ್ಟಾಗ ಮರಣೋತ್ತರ ಪರೀಕ್ಷೆ ನಡೆಸಲು ಮಾತ್ರ ವೈದ್ಯರು ಬೇಕಾಗುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ನೆರವು ಪಡೆಯುತ್ತೇವೆ’ ಎಂದು ಚಾಮರಾಜನರ ವೃತ್ತದ ಪ್ರಭಾರ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ (ಸಿಸಿಎಫ್‌) ಹಾಗೂ ಬಿಆರ್‌ಟಿ ಸಿಸಿಎಫ್‌ ಡಾ.ಪಿ.ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಂಡೀಪುರದ ವೈದ್ಯರು ದಸರಾ ಕರ್ತವ್ಯಕ್ಕೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಪಶು ವೈದ್ಯ ಡಾ.ನಾಗರಾಜು ಅವರನ್ನು ಮೈಸೂರಿನ ದಸರಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.

‘ಪ್ರತಿ ವರ್ಷ ಇಲ್ಲಿನ ವೈದ್ಯರನ್ನು ದಸರಾಕ್ಕೆ ನಿಯೋಜಿಸಲಾಗುತ್ತದೆ. ಅವರ ಜಾಗಕ್ಕೆ ತಾತ್ಕಾಲಿಕವಾಗಿ ಹುಣಸೂರಿನ ಪಶುವೈದ್ಯರೊಬ್ಬರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.