ADVERTISEMENT

ಚಾಮರಾಜನರದಲ್ಲಿ 66 ಮಂದಿಗೆ ಸೋಂಕು, 73 ಮಂದಿ ಗುಣಮುಖ, ಒಂದು ಸಾವು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 15:00 IST
Last Updated 20 ಸೆಪ್ಟೆಂಬರ್ 2020, 15:00 IST
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ
ಚಾಮರಾಜನಗರದ ಕೋವಿಡ್‌ ಆಸ್ಪತ್ರೆ   

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. 73 ಮಂದಿ ಗುಣಮುಖರಾಗಿದ್ದಾರೆ. 66 ಮಂದಿ ಸೋಂಕು ತಗುಲಿದೆ.

ಕೊಳ್ಳೇಗಾಲದ 65 ವರ್ಷ ವ್ಯಕ್ತಿ (ರೋಗಿ ಸಂಖ್ಯೆ–4,64,213) ಸೆ.11ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸೆ.19ರಂದು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ನಿಂದಾಗಿ 54 ಮಂದಿ ಮೃತ ಪಟ್ಟಿದ್ದಾರೆ. ಸೋಂಕು ದೃಢಪಟ್ಟಿದ್ದರೂ, ಇತರ ಅನಾರೋಗ್ಯಗಳಿಂದಾಗಿ 22 ಮಂದಿ ಕೊನೆಯುಸಿರೆಳೆದಿದ್ದಾರೆ.

ಭಾನುವಾರದ 66 ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ವರದಿಯಾದ ಕೋವಿಡ್‌–19 ಪ್ರಕರಣಗಳ ಸಂಖ್ಯೆ 3,484ಕ್ಕೆ ಏರಿದೆ. 2,790 ಮಂದಿ ಗುಣಮುಖರಾಗಿದ್ದಾರೆ. 619 ಸಕ್ರಿಯ ಪ್ರಕರಣಗಳಿವೆ. 34 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 250 ಮಂದಿ ಹೋಂ ಐಸೊಲೇಷನ್‌ನಲ್ಲಿ ಇದ್ದಾರೆ.

ADVERTISEMENT

ಭಾನುವಾರ 799 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಲಾಗಿತ್ತು. ಆರ್‌ಟಿಪಿಸಿಆರ್‌ನಲ್ಲಿ 362, ರ‍್ಯಾಪಿಡ್‌ ಆ್ಯಂಟಿಜೆನ್‌ 392 ಮತ್ತು ಟ್ರು ನಾಟ್‌ನಲ್ಲಿ 45 ಪರೀಕ್ಷೆಗಳನ್ನು ನಡೆಸಲಾಗಿದೆ. 736 ಮಂದಿಯ ವರದಿಗಳೂ ನೆಗೆಟಿವ್ ಬಂದಿವೆ. 63 ಮಂದಿಗೆ ಸೋಂಕು ಖಚಿತವಾಗಿದೆ. ಎರಡು ಪ್ರಕರಣಗಳು ಮೈಸೂರು ಮತ್ತು ಒಂದು ಪ್ರಕರಣ ಬೆಂಗಳೂರಿನಲ್ಲಿ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 55,983 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದ್ದು, 52,547 ಮಂದಿಯ ವರದಿ ನೆಗೆಟಿವ್‌ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.