ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸರಣಿ ಮುಂದುವರಿದಿದೆ. ಮೂರನೇ ದಿನವೂ 60 ವರ್ಷದ ವೃದ್ಧರೊಬ್ಬರು ಕೋವಿಡ್‌ನಿಂದಾಗಿ ಮೃತಪಟ್ಟಿರುವುದು ವರದಿಯಾಗಿದೆ.
ತಾಲ್ಲೂಕಿನ ಹೆಬ್ಬಸೂರು ಗ್ರಾಮದ ವ್ಯಕ್ತಿಯೊಬ್ಬರು ಇದೇ 7ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸಿದೆ ಭಾನುವಾರ ಅವರು ಮೃತಪಟ್ಟಿದ್ದಾರೆ. ಶನಿವಾರ ಹಾಗೂ ಭಾನುವಾರ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದರು.ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 115ಕ್ಕೆ ಏರಿದೆ.
ಜಿಲ್ಲೆಯಲ್ಲಿ ಸೋಮವಾರ 1,019 ಮಂದಿಯ ಕೋವಿಡ್ ಪರೀಕ್ಷಾ ವರದಿಗಳು ಬಂದಿದ್ದು, 971 ವರದಿಗಳು ನೆಗೆಟಿವ್ ಬಂದು, 48 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.
ಈ ಪೈಕಿ 36 ಮಂದಿ ಜಿಲ್ಲೆಯವರು. ನಾಲ್ಕು ಮಂದಿ ಮೈಸೂರು ಹಾಗೂ ಒಬ್ಬರು ಮಂಡ್ಯಕ್ಕೆ ಸೇರಿದ್ದಾರೆ. ಹಾಗಾಗಿ. ಈ ಪ್ರಕರಣಗಳು ಅಲ್ಲಿನ ಪಟ್ಟಿಗೆ ಸೇರ್ಪಡೆಗೊಳ್ಳಲಿವೆ. ಇನ್ನೂ ಏಳು ಸೋಂಕಿತರು ಎಲ್ಲಿಯವರೆಂದು ದೃಢಪಟ್ಟಿಲ್ಲ. ಈ ಕಾರಣದಿಂದ ಸೋಂಕಿತರ ಪಟ್ಟಿಯಲ್ಲಿ ಈ ಪ್ರಕರಣಗಳನ್ನು ಜಿಲ್ಲಾಡಳಿತ ಸೇರಿಸಿಲ್ಲ.
ಜಿಲ್ಲೆಯ ಈವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 7,402ಕ್ಕೆ ಏರಿದೆ. ಸೋಮವಾರ 28 ಮಂದಿ ಸೋಂಕುಮುಕ್ತರಾಗುವುದರೊಂದಿಗೆ ಗುಣಮುಖರಾದವರ ಸಂಖ್ಯೆ 7,005ಕ್ಕೆ ತಲುಪಿದೆ.
ಸದ್ಯ ಜಿಲ್ಲೆಯಲ್ಲಿ 262 ಸೋಂಕಿತರಿದ್ದಾರೆ. ಈ ಪೈಕಿ 197 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐಸಿಯುನಲ್ಲಿ ನಾಲ್ವರು ಇದ್ದಾರೆ.
ದೃಢಪಟ್ಟ 36 ಪ್ರಕರಣಗಳಲ್ಲಿ ಚಾಮರಾಜನಗರ ತಾಲ್ಲೂಕಿನ 11, ಕೊಳ್ಳೇಗಾಲದ 10, ಗುಂಡ್ಲುಪೇಟೆಯ ಎಂಟು, ಹನೂರಿನ ನಾಲ್ಕು ಮತ್ತು ಯಳಂದೂರು ತಾಲ್ಲೂಕಿನ ಎರಡು ಪ್ರಕರಣಗಳು ಸೇರಿವೆ. ಸೋಂಕಿತರಲ್ಲಿ ಒಬ್ಬರು ಹೊರ ಜಿಲ್ಲೆಯವರಾಗಿದ್ದಾರೆ.
ಆರೋಗ್ಯ ಉಪ ಕೇಂದ್ರಗಳಲ್ಲಿಯೂ ಲಸಿಕೆ: ಜಿಲ್ಲಾಧಿಕಾರಿ
ಈ ಮಧ್ಯೆ, ಕೋವಿಡ್ ಲಸಿಕಾ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿರುವ ಜಿಲ್ಲಾಡಳಿತ ಜಿಲ್ಲೆಯ ಎಲ್ಲ 120 ಆರೋಗ್ಯ ಉಪಕೇಂದ್ರಗಳಲ್ಲೂ ಲಸಿಕೆ ಹಾಕುವ ಕಾರ್ಯ ಆರಂಭಿಸಿದೆ.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಹೋಬಳಿ ಕೇಂದ್ರಗಳಲ್ಲೂ ಕೋವಿಡ್ ಲಸಿಕಾ ಕಾರ್ನರ್ ತೆರೆಯಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಇನ್ನಷ್ಟು ಲಸಿಕೆ ಪಡೆಯಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸೋಮವಾರದಿಂದ ಜಿಲ್ಲೆಯ ಎಲ್ಲ 120 ಆರೋಗ್ಯ ಉಪಕೇಂದ್ರಗಳಲ್ಲೂ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.
‘45ಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರೂ ಸ್ವಯಂ ಪ್ರೇರಿತರಾಗಿ ಲಸಿಕೆಯನ್ನು ಪಡೆಯಲು ಮುಂದೆ ಬರಬೇಕು. ಕೋವಿಡ್ ಹರಡುವಿಕೆಯನ್ನು ತಡೆಯುವಲ್ಲಿ ಪಾಲನೆ ಮಾಡಬೇಕಿರುವ ಕ್ರಮಗಳ ಬಗ್ಗೆ ಉದಾಸೀನ ತೋರಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ವಯಂ ಜಾಗೃತಿ, ಸಾಮಾಜಿಕ ಹೊಣೆಗಾರಿಕೆ ಕೊರೊನಾ ನಿಯಂತ್ರಣಕ್ಕೆ ಅಸ್ತ್ರವಾಗಿದೆ. ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಅಪಾಯಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಇರಬೇಕು’ ಎಂದು ಹೇಳಿದರು.
ತೀವ್ರತೆ ಕಡಿಮೆ: ಎರಡು ಡೋಸ್ ಲಸಿಕೆ ಪಡೆದುಕೊಂಡ ನಂತರವೂ ತಮಗೆ ಕೋವಿಡ್ ಬಂದಿರುವುದನ್ನು ಪ್ರಸ್ತಾಪಿಸಿದ ಜಿಲ್ಲಾಧಿಕಾರಿ ಅವರು, ಎರಡು ಡೋಸ್ ಲಸಿಕೆ ಪಡೆದ ನಂತರವೂ ಕೋವಿಡ್ ಬರಬಹುದು. ಆದರೆ, ಅದರ ತೀವ್ರತೆ ತುಂಬಾ ಕಡಿಮೆ ಇರುತ್ತದೆ. ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆಯಷ್ಟೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.