
ಯಳಂದೂರು: ಬಿಳಿಗಿರಿ ಬೆಟ್ಟದ ಪೋಡುಗಳ ಸುತ್ತಮುತ್ತ ಸೋಲಿಗ ಕೃಷಿಕರು ಮುಂಗಾರು ಅವಧಿಯಲ್ಲಿ ಎರಚು ಬಿತ್ತನೆಯಲ್ಲಿ ಚೆಲ್ಲಿದ್ದ ರಾಗಿ ಸಮೃದ್ಧವಾಗಿ ಬೆಳೆದು ನಿಂತಿದೆ.
ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಮಾಡದೆ ಮಳೆಯ ನೀರಿನಲ್ಲಿ ಉತ್ತಮ ರಾಗಿ ಬೆಳೆ ಬೆಳೆಯಲಾಗಿದ್ದು ಸಾವಯವ ಕೃಷಿಕರು ಹಾಗೂ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.
ತಾಲ್ಲೂಕಿನ 500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಕೃಷಿ ಮಾಡಲಾಗಿದೆ. ನೀರಾವರಿ ಭೂಮಿಯಲ್ಲಿ ಹೆಚ್ಚು ಬಿತ್ತನೆ ಮಾಡಲಾಗಿದ್ದು, ಡಿಸೆಂಬರ್ ಹೊತ್ತಿಗೆ ಕೊಯ್ಲಿಗೆ ಬರಲಿದೆ. ಈ ವರ್ಷ ಮಳೆ ಆಶ್ರಿತ ರಾಗಿ ತಳಿಗಳ ಜೊತೆಗೆ ಹೆಚ್ಚು ಇಳುವರಿ ನೀಡುವ ಸಂಕರ ತಳಿಗಳನ್ನು ಬಿತ್ತನೆ ಮಾಡಲಾಗಿದೆ. ಬುಟಕಟ್ಟು ಜನ ಹೆಚ್ಚಾಗಿ ವಾಸವಿರುವ ಪೋಡುಗಳಲ್ಲಿ ಬರ ನಿರೋಧಕ ರಾಗಿಯನ್ನು ಚೆಲ್ಲು ಬಿತ್ತನೆ ಮಾದರಿಯಲ್ಲಿ ಸಾಗುವಳಿ ಮಾಡಲಾಗಿದೆ.
‘ಹಾಡಿಗಳ ಸುತ್ತಮುತ್ತ ಗಿರಿ ಶಿಖರಗಳಿರುವುದರಿಂದ ಉತ್ತು ಬಿತ್ತುವುದು ಸವಾಲು. ರಾಸಾಯನಿಕ ಗೊಬ್ಬರಗಳನ್ನು ಸಲೀಸಾಗಿ ಸಾಗಿಸಲು ಸಾಧ್ಯವಿಲ್ಲ. ಕೀಟನಾಶಕಗಳನ್ನು ಸಿಂಪರಿಸುವುದು ದುಬಾರಿ. ಹೀಗಾಗಿ ಬಹುತೇಕರು ಸಾವಯವ ಮಾದರಿಯಲ್ಲಿ ಬೆಳೆ ಬೆಳೆಯುತ್ತಾರೆ.
‘ಮುಂಗಾರು ಋತುವಿನಲ್ಲಿ ರಾಗಿ ಜೊತೆ ತೊಗರಿ, ಎಳ್ಳು ಬಿತ್ತಿದ್ದಾರೆ. ಕಳೆ ಸಸ್ಯಗಳನ್ನು ತಾಕಿನಲ್ಲಿ ಕೊಳೆಸಿ ಹೆಚ್ಚಿನ ಒಳಸುರಿ ನೀಡದೆ ನೈಸರ್ಗಿಕವಾಗಿ ರಾಗಿ ಬೆಳೆಯಲಾಗಿದೆ’ ಎಂದು ರೈತ ಪುರಾಣಿಪೋಡು ನಂಜೇಗೌಡ ಹೇಳಿದರು.
‘ಹಿಂಗಾರಿನಲ್ಲಿ ಸ್ವಲ್ಪ ಮಳೆ ಬರುತ್ತದೆ, ಮಂಜು ಉದುರುತ್ತದೆ, ಚಳಿಯೂ ಹೆಚ್ಚಿರುವುದರಿಂದ ಹೆಚ್ಚಾಗಿ ನೀರಿನ ಆಸರೆ ಬೇಕಿಲ್ಲ. ಸ್ಥಳೀಯ ತಳಿಗಳ ಜೊತೆಗೆ ಕೆಲವರು ಹೈಬ್ರಿಡ್ ತಳಿಗಳನ್ನು ಬಿತ್ತನೆ ಮಾಡಿದ್ದಾರೆ. ಗೃಹಬಳಕೆ ಹಾಗೂ ಮಾರಾಟಕ್ಕೆ ರಾಗಿ ಕೈಸೇರುತ್ತದೆ. ಸಾವಯವ ರಾಗಿಯಿಂದ ತಯಾರಿಸಿದ ಮುದ್ದೆ ಮತ್ತು ಅಂಬಲಿಯ ರುಚಿ ಹೆಚ್ಚು’ ಎನ್ನುತ್ತಾರೆ ಸೋಲಿಗ ಕೃಷಿಕರಾದ ಮಾದೇಗೌಡ.
ರೊಟ್ಟಿ ಹಬ್ಬಕ್ಕೆ ರಾಗಿ ಫಸಲು:
ರೊಟ್ಟಿ ಹಬ್ಬ ಆಚರಿಸಲೆಂದೇ ಸೋಲಿಗರು ಕೃಷಿ ಉತ್ಪನ್ನಗಳಲ್ಲಿ ಒಂದಷ್ಟನ್ನು ತೆಗೆದಿಡುತ್ತಾರೆ. ಪ್ರತಿಯೊಬ್ಬರೂ ರಾಗಿ ಬೆಳೆಯಬೇಕೆಂಬ ಕಟ್ಟಳೆಯೂ ಇಲ್ಲಿದೆ. ರೇವತಿ ಮಳೆ ಸಮಯದಲ್ಲಿ ಕೃಷಿ ಆರಂಭವಾಗುತ್ತದೆ. ವ್ಯತ್ಯಾಸವಾದರೆ, ಜುಲೈ-ಸೆಪ್ಟೆಂಬರ್ ತನಕ ನಡೆಯುತ್ತದೆ. ಕಳೆ ಸಸ್ಯ ಕತ್ತರಿಸಿ, ಒಣಗಿಸಿ ಗೊಬ್ಬರವಾಗಿ ಪರಿವರ್ತಿಸಿ ಹೊಲಕ್ಕೆ ಕಾಳು ಚೆಲ್ಲಿ ನಾಟಿ ಮಾಡುತ್ತಾರೆ. ರಾಗಿಯ ಸಾರವೂ ಹೆಚ್ಚುತ್ತದೆ ಎಂಬುದು ರೈತರ ಅನುಭವದ ಮಾತು.
ಖರ್ಚು ಕಡಿಮೆ:
ಪೋಡಿನ 45 ರೈತರಿಗೆ ಉಚಿತವಾಗಿ ವಿಎಲ್ 376 ತಳಿಯ ರಾಗಿ ಜೊತೆಗೆ ಜಿ ಆರ್‌ಜಿ 811 ತೊಗರಿ ಬೀಜ ನೀಡಲಾಗಿದೆ. ಈ ಬೆಳೆಗಳು ಬರ ನಿರೋಧಕ ತಳಿಗಳು. ನೀರಾವರಿ ಆಶ್ರಯದ 250 ರೈತರಿಗೂ ರಾಗಿ ವಿತರಿಸಿದ್ದು 125 ದಿನಗಳಲ್ಲಿ ಕೊಯ್ಲಿಗೆ ಬರಲಿದೆ. ಬೆಟ್ಟ ಗುಡ್ಡಗಳಲ್ಲಿ ಎಕರೆಗೆ 7 ಕ್ವಿಂಟಲ್ ರಾಗಿ ಫಸಲು ನಿರೀಕ್ಷಿಸಬಹುದು. ನೀರಾವರಿ ವಿಧಾನದಲ್ಲಿ ಬೆಳೆದರೆ 13-14 ಕ್ವಿಂಟಲ್ ರಾಗಿ ಸಿಗಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್ ರಾಗಿಗೆ ₹4,500 ಇದೆ. ಡಿಸೆಂಬರ್‌ನಲ್ಲಿ ಕಟಾವು ಮಾಡುವ ಮುಂಗಾರು ಹಂಗಾಮಿನ ರಾಗಿ ಕ್ವಿಂಟಲ್‌ಗೆ ₹ 4800 ಬೆಂಬಲ ಬಲೆ ಸಿಗಲಿದೆ ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.
ತಾಲ್ಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗಿರಿ ಶಿಖರಗಳಲ್ಲಿ ಸೊಂಪಾಗಿ ಬೆಳೆದ ರಾಗಿ ಬೆಳೆ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಸದೆ ಬೆಳೆದ ರಾಗಿ
‘ಮರೆಯಾದ ದೇಸಿ ತಳಿಗಳು’
‘ಗಿರಿವಾಸಿಗಳು ಒಂದೇ ಸ್ಥಳದಲ್ಲಿ ಹತ್ತಾರು ಬೆಳೆ ತೆಗೆಯುತ್ತಿದ್ದರು. ಆದರೆ ಹಲವು ದಶಕಗಳಿಂದ ಸ್ಥಳೀಯ ತಳಿಗಳು ಅಳಿವಿನಂಚಿಗೆ ತಲುಪಿವೆ. ಬನದಲ್ಲಿ ಜತನವಾಗಿ ಕಾಪಿಟ್ಟುಕೊಂಡಿದ್ದ ಕರಿಕಡ್ಡಿ ರಾಗಿ ಹಾಲುಬಂಡುಗ ರಾಗಿ ಬಿಳಿಬಂಡುಗ ರಾಗಿ ಕರಿಬಂಡುಗ ರಾಗಿ ಮಜ್ಜಿಗೆ ರಾಗಿ ಹಾಲುಮುದ್ದಗ ರಾಗಿ ಮಳೆ ರಾಗಿಯ ತಳಿಗಳು ಕಾಣದಾಗಿವೆ. ಸಂಕರ ತಳಿಗಳೇ ಮುಂಚೂಣಿಯಲ್ಲಿ ಇವೆ. ನೂರಾರು ವರ್ಷಗಳಿಂದ ಇಲ್ಲಿನ ನಿಸರ್ಗದಲ್ಲಿ ಬೆಳೆಯುತ್ತಿದ್ದ ತಳಿಗಳನ್ನು ರಕ್ಷಿಸಬೇಕು ಎನ್ನುತ್ತಾರೆ’ ಸೋಲಿಗ ಮುಖಂಡ ಬೊಮ್ಮಯ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.