ADVERTISEMENT

‘ಪರಿಹಾರ’ದಲ್ಲಿ ತಾರತಮ್ಯ; ಭುಗಿಲೆದ್ದ ಆಕ್ರೋಶ

ಕಾಲ್ತುಳಿತ ದುರಂತ; ₹ 25 ಲಕ್ಷ ಪರಿಹಾರ, ಆಕ್ಸಿಜನ್ ದುರಂತ; ₹ 2 ರಿಂದ ₹ 5 ಲಕ್ಷ ಪರಿಹಾರ

ಬಾಲಚಂದ್ರ ಎಚ್.
Published 10 ಜೂನ್ 2025, 0:21 IST
Last Updated 10 ಜೂನ್ 2025, 0:21 IST
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 4 ವರ್ಷಗಳ ಹಿಂದೆ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 4 ವರ್ಷಗಳ ಹಿಂದೆ ಸಂಭವಿಸಿದ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು   

ಚಾಮರಾಜನಗರ: ‘ಬೆಂಗಳೂರಿನಲ್ಲಿ ಈಚೆಗೆ ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹ 25 ಲಕ್ಷ ಪರಿಹಾರ ನೀಡಿರುವ ರಾಜ್ಯ ಸರ್ಕಾರ, 4 ವರ್ಷಗಳ ಹಿಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ ಅಸುನೀಗಿದ 34 ಮಂದಿಯ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿಲ್ಲ’ ಎಂದು ದಲಿತ, ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

‘ಕಾಲ್ತುಳಿತ ಹಾಗೂ ಆಕ್ಸಿಜನ್ ದುರಂತ ಪ್ರಕರಣಗಳಲ್ಲಿ ಸರ್ಕಾರ ತಾರತಮ್ಯ ಅನುಸರಿಸಿದೆ. ಜನಾಕ್ರೋಶ ಹೆಚ್ಚಾಗುವ ಪ್ರಕರಣಗಳಿಗೆ ಒಂದು ರೀತಿ, ಇತರ ಪ್ರಕರಣಗಳಿಗೆ ಮತ್ತೊಂದು ರೀತಿಯ ಪರಿಹಾರ ನೀಡಿ ಅಮಾಯಕರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ಆರೋಪಿಸಿವೆ.

‘ಸರ್ಕಾರ ಮಲತಾಯಿ ಧೋರಣೆ ಬಿಟ್ಟು ಆಕ್ಸಿಜನ್ ಸಂತ್ರಸ್ತರಿಗೆ ಗರಿಷ್ಠ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ದಲಿತ ಮುಖಂಡ ಸಿ.ಎಂ. ಕೃಷ್ಣಮೂರ್ತಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲೂ ಚರ್ಚೆ ನಡೆಯುತ್ತಿದೆ.

ADVERTISEMENT

ಪ್ರಕರಣದ ಹಿನ್ನೆಲೆ:

2021ರ ಮೇ 2ರಂದು ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 36 ಮಂದಿ ಅಸುನೀಗಿದರು. ಮೃತರ ಪೈಕಿ ಹೆಚ್ಚಿನವರು ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದರು. ಕೋವಿಡ್‌–19ನಿಂದ ಪ್ರಾಣ ಉಳಿಸಿಕೊಳ್ಳಲು ಬಂದವರು ಸಕಾಲದಲ್ಲಿ ಆಮ್ಲಜನಕ ಸಿಗದೆ ನರಳಿ ಜೀವ ಬಿಡಬೇಕಾಯಿತು. ಈ ದುರ್ಘಟನೆ ನಡೆದು 4 ವರ್ಷಗಳು ಕಳೆದರೂ ಸಂತ್ರಸ್ತರಿಗೆ ಸಮರ್ಪಕವಾದ ಪರಿಹಾರವಾಗಲಿ, ಆಶ್ವಾಸನೆಯಂತೆ ಸರ್ಕಾರಿ ಉದ್ಯೋಗವಾಗಲಿ ಸಿಕ್ಕಿಲ್ಲ. ಇಂದಲ್ಲ; ನಾಳೆ ಪರಿಹಾರ ಹಾಗೂ ಉದ್ಯೋಗ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಸಂತ್ರಸ್ತರ ಕುಟುಂಬಗಳು ದಿನ ದೂಡುತ್ತಿವೆ.

ಪರಿಹಾರ ಸಿಕ್ಕಿದ್ದೆಷ್ಟು:

ದುರಂತ ಸಂಬಂಧ ಹೈಕೋರ್ಟ್‌ ನೇಮಿಸಿದ್ದ ಸಮಿತಿಯ ವರದಿ ಆಧರಿಸಿ ಸರ್ಕಾರ 13 ಕುಟುಂಬಗಳಿಗೆ ತಲಾ ₹ 5 ಲಕ್ಷ, 11 ಕುಟಂಬಗಳಿಗೆ ತಲಾ ₹ 2 ಲಕ್ಷ ಪರಿಹಾರ ನೀಡಿದೆ. ಉಳಿದ 12 ಕುಟುಂಬಗಳಿಗೆ ಕಾಂಗ್ರೆಸ್‌ ಪಕ್ಷದಿಂದ ತಲಾ ₹ 1 ಲಕ್ಷ ಪರಿಹಾರವಷ್ಟೆ ಸಿಕ್ಕಿದೆ.

‘ಭಾರತ್ ಜೋಡೊ’ ಯಾತ್ರೆ ಭಾಗವಾಗಿ ಗುಂಡ್ಲುಪೇಟೆ ತಾಲ್ಲೂಕಿಗೆ ಬಂದಿದ್ದ ರಾಹುಲ್ ಗಾಂಧಿ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಕೆಲಸ ನೀಡಲಾಗುವುದು’ ಎಂಬ ಭರವಸೆ ಕೊಟ್ಟಿದ್ದರು. ರಾಹುಲ್ ವಾಗ್ದಾನಕ್ಕೆ ಡಿ.ಕೆ. ಶಿವಕುಮಾರ್ ಸಾಕ್ಷಿಯಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಭರವಸೆ ಈಡೇರಿಲ್ಲ’ ಎಂದು ದೂರುತ್ತಾರೆ ಸಂತ್ರಸ್ತರ ಪರ ಹೋರಾಟದಲ್ಲಿ ನಿರತರಾಗಿರುವ ಮಹೇಶ್ ಗಾಳಿಪುರ.

ಸಂತ್ರಸ್ತರ ನಿರೀಕ್ಷೆ ಏನಿತ್ತು: ‘ಈಚೆಗೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಉದ್ಯೋಗ ಘೋಷಣೆಯ ನಿರೀಕ್ಷೆ ಹುಸಿಯಾಯಿತು. ಮುಂಬರುವ ಸಚಿವ ಸಂಪುಟದಲ್ಲಾದರೂ ಬೇಡಿಕೆ ಈಡೇರಬಹುದು ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ಸಂತ್ರಸ್ತೆ ಜ್ಯೋತಿ. 

ಕಾಲ್ತುಳಿತದಲ್ಲಿ ಮೃತರಾದವರ ಕುಟುಂಬಗಳಿಗೆ 25 ಲಕ್ಷ ಪರಿಹಾರ ಘೋಷಣೆ ಉತ್ತಮ ನಿರ್ಧಾರ. ಆದರೆ ಸರ್ಕಾರದ ಬೇಜವಾಬ್ದಾರಿಯಿಂದ ಆಮ್ಲಜನಕ ಸಿಗದೆ ಮೃತಪಟ್ಟ 36 ಜನರ ಸಾವಿನ ಬಗ್ಗೆ ಕರುಣೆ ತೋರಿಲ್ಲ
ಜ್ಯೋತಿ ಬಿಸಲವಾಡಿ ಸಂತ್ರಸ್ತೆ

ಇಂದು ಸಭೆ

ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ಹೋರಾಟ ರೂಪಿಸುವ ಸಂಬಂಧ ಜೂನ್ 10ರಂದು ಬೆಳಿಗ್ಗೆ 11.30ಕ್ಕೆ ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಎಲ್ಲ ಪ್ರಗತಿಪರ ರೈತಪರ ಕನ್ನಡಪರ ದಲಿತಪರ ಹೋರಾಟಗಾರರ ಹಾಗೂ ಸಂತ್ರಸ್ತರ ಸಭೆ ಕರೆಯಲಾಗಿದೆ ಎಂದು ದಲಿತ ಮುಖಂಡ ಸಿ.ಎಂ.ಕೃಷ್ಣಮೂರ್ತಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.