
ಚಾಮರಾಜನಗರದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆಸ್ಪತ್ರೆ
ಚಾಮರಾಜನಗರ: ನಾಲ್ಕು ವರ್ಷಗಳ ಹಿಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೆ ದಾರುಣವಾಗಿ ಮೃತಪಟ್ಟ ಕೋವಿಡ್ ಸೋಂಕಿತರ ಕುಟುಂಬಗಳ ಪ್ರಮುಖ ಬೇಡಿಕೆ ಈಡೇರುವ ಕಾಲ ಹತ್ತಿರವಾಗಿದೆ.
ಸಂತ್ರಸ್ತರ ಹಾಗೂ ಸಂಘ ಸಂಸ್ಥೆಗಳ ನಿರಂತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು, ಮೃತರ ಕುಟುಂಬಗಳ ಸದಸ್ಯರಿಗೆ ನೌಕರಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ನೌಕರಿ ಕೋರಿ ಮೃತರ ಅವಲಂಬಿತರಿಂದ ಅರ್ಜಿ ಹಾಗೂ ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ.
ಈ ಸಂಬಂಧ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಅವಲಂಬಿತರಿಗೆ ವಿಶೇಷ ನೇಮಕಾತಿಯಡಿ ಉದ್ಯೋಗ ನೀಡುವ ಸಂಬಂಧ ತಿಳಿವಳಿಕೆ ಪತ್ರಗಳನ್ನು ರವಾನಿಸಿದ್ದು, ತುರ್ತಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
‘ಮೃತ 31 ಮಂದಿ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಲಾಗುತ್ತಿದ್ದು, 25 ಮಂದಿ ಮಾತ್ರ ಅರ್ಜಿಯೊಂದಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ. 6 ಮಂದಿ ಅರ್ಜಿ ಸಲ್ಲಿಸಿಲ್ಲ. ಉಳಿದವರು ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು’ ಎಂದು ಸಿಮ್ಸ್ ತಿಳಿಸಿದೆ.
‘ಅರ್ಜಿ ಸಲ್ಲಿಸದವರನ್ನು ಉದ್ಯೋಗ ನೀಡುವ ಪ್ರಕ್ರಿಯೆಯಿಂದ ಕೈಬಿಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಸಿಮ್ಸ್ ಡೀನ್ ಹಾಗೂ ನಿರ್ದೇಶಕ ಡಾ.ಎಚ್.ಜಿ.ಮಂಜುನಾಥ್ ಎಚ್ಚರಿಸಿದ್ದಾರೆ.
ದಾಖಲಾತಿಗಳು:
ಅರ್ಜಿದಾರರು ಮೃತರ ಅವಲಂಬಿತರೆಂಬ ಬಗ್ಗೆ ತಹಶೀಲ್ದಾರ್ ದೃಢೀಕರಣ ಪತ್ರ ನೀಡಿರಬೇಕು, ಮೃತರ ಮರಣ ಪತ್ರ, ವಿದ್ಯಾರ್ಹತೆಯ ದಾಖಲಾತಿಗಳ ಮೂಲ ಪ್ರತಿ, ಜನ್ಮ ದಿನಾಂಕ ದಾಖಲೆ, ಮೃತರ ಕುಟುಂಬದ ಸದಸ್ಯರ ಪೈಕಿ ಯಾರೂ ಸರ್ಕಾರಿ ನೌಕರಿಯಲ್ಲಿಲ್ಲ ಎಂಬ ಕುರಿತು ನೋಟರಿ ಹಾಗೂ ತಹಶೀಲ್ದಾರರ ಪ್ರಮಾಣಪತ್ರ. ನೌಕರಿ ನೀಡಲು ಕುಟುಂಬದ ಸದಸ್ಯರ ಒಪ್ಪಿಗೆ ಪತ್ರ, ಆದಾಯ ಪ್ರಮಾಣಪತ್ರ, ಮೂಲ ಜಾತಿ ದೃಢೀಕರಣ ಪತ್ರ, ನಡತೆ ಮತ್ತು ಚಾರಿತ್ರ್ಯ ಕುರಿತು ಪೊಲೀಸ್ ಇಲಾಖೆ ವರದಿ ಹಾಗೂ ಫೋಟೊಗಳನ್ನು ಸಲ್ಲಿಸಬೇಕು.
ಎಲ್ಲಿ ಸಿಗಲಿವೆ ಹುದ್ದೆಗಳು?: ಸರ್ಕಾರದ ನಿರ್ದೇಶನದಂತೆ, ಸಿಮ್ಸ್‌ನಲ್ಲಿ 10 ಹುದ್ದೆಗಳು ಹಾಗೂ ಜಿಲ್ಲಾ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯಲ್ಲಿ 21 ಹುದ್ದೆಗಳು ಸಂತ್ರಸ್ತರಿಗೆ ದೊರೆಯಲಿವೆ. ಸರ್ಕಾರದ ಅಧಿಸೂಚನೆ ಹಾಗೂ ಸಂತ್ರಸ್ತರ ವಿದ್ಯಾರ್ಹತೆಯೇ ಆಧಾರ.
‘ಸಂತ್ರಸ್ತರಿಂದ ಅರ್ಜಿ ಹಾಗೂ ದಾಖಲಾತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸಿಮ್ಸ್ ಡೀನ್ ಒಳಗೊಂಡ ಸಮಿತಿಯಲ್ಲಿ ಚರ್ಚಿಸಿ ಅಂಗೀಕರಿಸಿದ ಪ್ರಸ್ತಾವವನ್ನು ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ಸಲ್ಲಿಸಲಾಗುವುದು. ನೇಮಕಾತಿ ಅಧಿಸೂಚನೆ ಪ್ರಕಟವಾದ ಕೂಡಲೇ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು’ ಎಂದು ಡಾ.ಎಚ್.ಜಿ.ಮಂಜುನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ನಿರಂತರ ಹೋರಾಟ ಮಾಡಿದ್ದರಿಂದ ಸರ್ಕಾರಿ ನೌಕರಿ ನೀಡುವ ಪ್ರಕ್ರಿಯೆ ಶುರುವಾಗಿರುವುದು ಸಂತಸ ತಂದಿದೆ. ದುರ್ಘಟನೆಗೆ ಕಾರಣರಾದವರಿಗೂ ಶಿಕ್ಷೆಯಾಗಬೇಕು’ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್ ಹೇಳಿದರು.
ಸರ್ಕಾರಿ ಉದ್ಯೋಗ ನೀಡುವ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಸೇರಿದಂತೆ ಶಾಸಕರು ಜಿಲ್ಲಾಡಳಿತದ ಶ್ರಮ ಹೆಚ್ಚಿದೆಡಾ.ಎಚ್.ಜಿ.ಮಂಜುನಾಥ್ ಸಿಮ್ಸ್ ಡೀನ್
‘ಸಂತ್ರಸ್ತರ ಪರ ಜಿಲ್ಲಾಡಳಿತ’ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂತ್ರಸ್ತರ ಜೊತೆ ನಿರಂತರ ಸಭೆಗಳನ್ನು ನಡೆಸಿ ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡುವ ಪ್ರಕ್ರಿಯೆಗಳು ನಡೆಯುತ್ತಿದ್ದು ಶೀಘ್ರ ಅರ್ಜಿ ಸಹಿತ ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ಪೂರಕವಾಗಿ ಸಲ್ಲಿಸಲಾಗುವುದು. ಅರ್ಜಿಯೊಂದಿಗೆ ಸಲ್ಲಿಸಲು ಕೋರಿರುವ ದಾಖಲಾತಿಗಳನ್ನು ಪಡೆದುಕೊಳ್ಳಲು ಸಂತ್ರಸ್ತರಿಗೆ ಜಿಲ್ಲಾಡಳಿತ ನೆರವು ನೀಡುತ್ತಿದೆ.ಸಿ.ಟಿ.ಶಿಲ್ಪಾನಾಗ್ ಜಿಲ್ಲಾಧಿಕಾರಿ
‘ಭರವಸೆ ಮೂಡಿದೆ’ ನಾಲ್ಕು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾಗಿತ್ತು. ಕೊನೆಗೂ ಹೋರಾಟಕ್ಕೆ ಫಲ ಸಿಗುವ ಭರವಸೆ ಮೂಡಿದೆ. ವರ್ಷದ ಆರಂಭದಲ್ಲಿ ನೇಮಕಾತಿ ಪತ್ರ ನೀಡಬೇಕು. ದುರಂತದ ನಡೆದ ದಿನದಿಂದಲೂ ಸಂತ್ರಸ್ತರ ಕುಟುಂಬಗಳ ಪರವಾಗಿ ನಿಂತ ಎಸ್‌ಡಿಪಿಐ ಸಂಘ ಸಂಸ್ಥೆಗಳು ಹಾಗೂ ಜಿಲ್ಲಾಡಳಿತಕ್ಕೆ ಆಭಾರಿಯಾಗಿದ್ದೇನೆ.ಜ್ಯೋತಿ ಬಿಸಲವಾಡಿ ಸಂತ್ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.