ADVERTISEMENT

ಚಾಮರಾಜನಗರ ಆಮ್ಲಜನಕ ದುರಂತ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ: ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 13:15 IST
Last Updated 5 ಸೆಪ್ಟೆಂಬರ್ 2021, 13:15 IST
ಎಸ್‌.ಟಿ ಸೋಮಶೇಖರ್‌
ಎಸ್‌.ಟಿ ಸೋಮಶೇಖರ್‌   

ಚಾಮರಾಜನಗರ: ‘ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2ರಂದು ರಾತ್ರಿ ಆಮ್ಲಜನಕದ ಕೊರತೆಯಿಂದ 24 ಜನರು ಮೃತಪಟ್ಟ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಖಂಡಿತವಾಗಿಯೂ ಶಿಕ್ಷೆ ಆಗುತ್ತದೆ. ಅದರಲ್ಲಿ ಅನುಮಾನವೇ ಬೇಡ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಭಾನುವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನ್ಯಾಯಾಲಯದ ಉಸ್ತುವಾರಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ನಿವೃತ್ತ ನ್ಯಾಯಮೂರ್ತಿಗಳು ತನಿಖೆ ನಡೆಸಿದ್ದಾರೆ. ವರದಿ ಬರಲಿದೆ.‌ನಂತರ ಮುಖ್ಯಮಂತ್ರಿ ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಪ್ರಕರಣ ತನಿಖೆ ನಡೆಯುತ್ತಿದೆ.ತಪ್ಪಿತಸ್ಥರ ವಿರುದ್ಧ ನೂರಕ್ಕೆ ನೂರರಷ್ಟು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಇದರಲ್ಲಿ ಶೇ 1ರಷ್ಟೂ ಅನುಮಾನ ಬೇಡ’ ಎಂದು ಹೇಳಿದರು.

ಸರ್ಕಾರಿ ವೈದ್ಯಕೀಯ ಕಾಲೇಜಿನ ನೂತನ ಬೋಧನಾ ಆಸ್ಪತ್ರೆಯ ಉದ್ಘಾಟನೆ ಯಾವಾಗ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈಗಾಗಲೇ ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸಿದ್ದೇವೆ. ವಾಸ್ತವಾಂಶವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇನೆ. ವಿಧಾನಸಭಾ ಅಧಿವೇಶನಕ್ಕೂ ಮೊದಲು ಅಥವಾ ನಂತರ ಉದ್ಘಾಟನೆ ಮಾಡೋಣ ಎಂದು ಬೊಮ್ಮಾಯಿಯವರು ಹೇಳಿದ್ದಾರೆ. ಕೋವಿಡ್‌ 3ನೇ ಅಲೆ ಆರಂಭಕ್ಕೂ ಮುನ್ನ ಉದ್ಘಾಟನೆ ಆಗಬೇಕು ಎಂಬ ಯೋಚನೆ ಇದೆ’ ಎಂದರು.

ADVERTISEMENT

‘ಚಾಮರಾಜನಗರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಅವರು ಎಲ್ಲೂ ಹೇಳಿಲ್ಲ. ಅವರು ಬಂದೇ ಬರುತ್ತಾರೆ’ ಎಂದು ಸೋಮಶೇಖರ್‌ ಅವರು ಸ್ಪಷ್ಟಪಡಿಸಿದರು.

ಉಮ್ಮತ್ತೂರು ಕೆರೆಗೆ ಒಂದು ದಿನ ನೀರು ಬಂದು ಮತ್ತೆ ಸ್ಥಗಿತಗೊಂಡಿರುವ ಬಗ್ಗೆ ಪ್ರಶ್ನಿಸಿದಾಗ, ‘ಈ ವಿಚಾರ ಈಗ ಗಮನಕ್ಕೆ ಬಂದಿದೆ. ಆ.31ರಂದು ನೀರು ಹರಿಸಲೇಬೇಕು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿತ್ತು. ತಕ್ಷಣವೇ ಮುಖ್ಯ ಎಂಜಿನಿಯರ್‌ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ’ ಎಂದು ಉತ್ತರಿಸಿದರು.

ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಈ ವಿಚಾರದಲ್ಲಿಅಮಿತ್ ಶಾ ಅವರ ಮಾತೇ ಅಂತಿಮ. ಮುಖ್ಯಮಂತ್ರಿ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಲಿದ್ದಾರೆ. ಅವರು ಬುದ್ಧಿವಂತರು, ಸಮರ್ಥರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುತ್ತಿಲ್ಲವೇ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.