ADVERTISEMENT

ಗಡಿಜಿಲ್ಲೆಯಲ್ಲೂ ಪ್ರಭಾವ ಬೀರಿದ್ದ ಮೇರು ಸಂತ

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗೆ ಭಕ್ತರಿಂದ ಶ್ರದ್ಧಾಂಜಲಿ

ಸೂರ್ಯನಾರಾಯಣ ವಿ
Published 29 ಡಿಸೆಂಬರ್ 2019, 19:45 IST
Last Updated 29 ಡಿಸೆಂಬರ್ 2019, 19:45 IST
1983–84ರಲ್ಲಿ ಪದ್ಮನಾಭರಾವ್‌ ಅವರ ಮನೆಯಲ್ಲಿ ಪೇಜಾವರ ಶ್ರೀಗಳು ಸಂಸ್ಥಾನ ಪೂಜೆ ಮಾಡಿದ್ದ ಕ್ಷಣ
1983–84ರಲ್ಲಿ ಪದ್ಮನಾಭರಾವ್‌ ಅವರ ಮನೆಯಲ್ಲಿ ಪೇಜಾವರ ಶ್ರೀಗಳು ಸಂಸ್ಥಾನ ಪೂಜೆ ಮಾಡಿದ್ದ ಕ್ಷಣ   

ಚಾಮರಾಜನಗರ: ಭಾನುವಾರ ಇಹಲೋಕ ತ್ಯಜಿಸಿದ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದು ಕಡಿಮೆಯಾದರೂ ಜಿಲ್ಲೆಯ ಜನರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು.

80ರ ದಶಕದ ನಂತರ ಅವರು ಕೇವಲ ಒಂದೇ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1996ರ ಡಿಸೆಂಬರ್‌ 12ರಂದು ಚಾಮರಾಜನಗರದಲ್ಲಿ ವಿಶ್ವ ಹಿಂದೂ ಪರಿಷತ್‌ ನಡೆಸುತ್ತಿರುವ ಸೇವಾ ಭಾರತಿ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ್ದರು. ಆ ಸಂದರ್ಭದಲ್ಲಿ ಸ್ವಾಮೀಜಿಗಳ ಮೆರವಣಿಯನ್ನೂ ಮಾಡಲಾಗಿತ್ತು.

ಅದಕ್ಕೂ ಮೊದಲು, 1983–84ರಲ್ಲಿ, ಮೂರನೇ ಪರ್ಯಾಯಕ್ಕೂ ಮುಂಚಿತವಾಗಿ ಶ್ರೀಗಳುಶ್ರೀನಿವಾಸ ಹೋಟೆಲ್‌ ಮಾಲೀಕರಾಗಿದ್ದ ದಿವಂಗತ ಪದ್ಮನಾಭರಾವ್‌ ಅವರ ಮನೆಗೆ ಬಂದಿದ್ದರು. ಅಲ್ಲೇ ಭಿಕ್ಷೆ ಪಡೆದು, ವಾಸ್ತವ್ಯ ಹೂಡಿ ಮಠದ ಸಂಸ್ಥಾನದ ಪೂಜೆ ನೆರವೇರಿಸಿದ್ದರು.

ADVERTISEMENT

ಪೇಜಾವರ ಶ್ರೀಗಳ ಭೇಟಿಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪದ್ಮನಾಭರಾವ್‌ ಅವರ ಮಗ, ವಿಶ್ವ ಹಿಂದೂ ಪರಿಷತ್‌ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ವಾದುದೇವರಾವ್‌ ಅವರು, ‘ತಂದೆಯವರು ಶ್ರೀಗಳಿಗೆ ಆತ್ಮೀಯರಾಗಿದ್ದರು. ನನಗೆ ಗೊತ್ತಿದ್ದ ಹಾಗೆ ಸ್ವಾಮೀಜಿ ಅವರು ಮೂರ್ನಾಲ್ಕು ಬಾರಿ ನಮ್ಮ ಮನೆಗೆ ಬಂದಿದ್ದಾರೆ. ಮೂರನೇ ಪರ್ಯಾಯ ಪಟ್ಟ ಅಲಂಕರಿಸುವುದಕ್ಕೂ ಮೊದಲು ನಮ್ಮ ಮನೆಗೆ ಭಿಕ್ಷೆಗೆ ಬಂದಿದ್ದರು. ಇದಲ್ಲದೇ ಕೊಯಮತ್ತೂರಿಗೆ ಹೋಗುವ ದಾರಿ ಮಧ್ಯೆಯೂ ಭೇಟಿ ನೀಡಿದ್ದರು’ ಎಂದು ಸ್ಮರಿಸಿದರು.

ವಿಎಚ್‌ಪಿ ಶಾಲಾ ದಶಮಾನೋತ್ಸವ ಕಾರ್ಯಕ್ರಮವನ್ನು ಸ್ಮರಿಸಿದ ಅವರು, ‘1996ರಲ್ಲಿ ನಡೆದಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಮಕ್ಕಳನ್ನು ನಕ್ಷತ್ರಗಳಿಗೆ ಹೋಲಿಸಿ ಮಾತನಾಡಿದ್ದರು. ‘ನಾವು ನಕ್ಷತ್ರವನ್ನು ನೋಡಿ ಭವಿಷ್ಯ ಹೇಳುತ್ತೇವೆ. ಇಲ್ಲಿ ಸೇರಿರುವ ಮಕ್ಕಳ ಕಣ್ಣುಗಳು ನಕ್ಷತ್ರಗಳು. ಈ ಮಕ್ಕಳೇ ನಮ್ಮ ದೇಶದ ಭವಿಷ್ಯ’ ಎಂದು ಹೇಳಿದ್ದರು’ ಎಂದರು.

ನಾಲ್ಕು ವರ್ಷಗಳ ಹಿಂದೆ ಕೊಯಮತ್ತೂರಿಗೆ ಹೋಗುವಾಗ ನಗರದ ಭುವನೇಶ್ವರಿ ವೃತ್ತದಲ್ಲಿ ಕಾರನ್ನು ನಿಲ್ಲಿಸಿ, ತಮ್ಮ ಬಳಿ ಬಂದ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ್ದರು ಎಂದು ದಿನಪತ್ರಿಕೆಗಳ ಮಾರಾಟಗಾರ ರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭಕ್ತರಿಂದ ಶ್ರದ್ಧಾಂಜಲಿ

ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಭಾನುವಾರ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜನಾರ್ದನಸ್ವಾಮಿ ಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬರಹಗಾರ ಎಸ್‌.ಲಕ್ಷ್ಮೀನರಸಿಂಹ ಅವರು, ‘ಸ್ವಾಮೀಜಿ ಅವರುಮಡಿವಂತಿಕೆಯಿಂದ ಹೊರಬಂದು ಹಿಂದೂ ಧರ್ಮ ಮತ್ತು ಎಲ್ಲ ಜಾತಿ, ವರ್ಗದ ಜನರನ್ನು ತಲುಪಿದ ಏಕೈಕ ಸಂತ. ಮಾಧ್ವ ಪರಂಪರೆಯ ಯತಿಗಳಾಗಿ ಐದು ಬಾರಿ ಉಡುಪಿಯ ಕೃಷ್ಣನ ಪರ್ಯಾಯವನ್ನು ಮಾಡಿದ ಹೆಗ್ಗಳಿಗೆ ಅವರದು. ವಾದಿರಾಜರ ನಂತರ ಐದು ಬಾರಿ ಕೃಷ್ಣನ ಪೂಜೆ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.

‘ದಲಿತರ ಕೇರಿಯಲ್ಲಿ ಕೃಷ್ಣ ಪೂಜೆ ಮಾಡಿದ್ದ ಅವರು, ಮೈಸೂರಿನಲ್ಲಿ ಅದಿಜಾಂಬವರ ಸ್ವಾಮಿಗಳನ್ನು ಕರೆದುಕೊಂಡು ಬ್ರಾಹ್ಮಣರ ಮನೆಗೆ ತೆರಳಿ ಅಲ್ಲಿ ಸಾಲಿಗ್ರಾಮದ ಪೂಜೆ ಕೂಡ ಮಾಡಿಸಿದ್ದರು. ಇಂತಹ ಅನೇಕ ಕ್ರಾಂತಿಗಳನ್ನು ಮಾಡಿದ್ದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದ್ದರು. ರಾಮನ ಪ್ರತಿಷ್ಠಾಪನೆ ಕೂಡ ಮಾಡಿದ್ದರು. ಆದರೆ, ಮಂದಿರ ನಿರ್ಮಾಣ ಕನಸು ನನಸಾಗುವುದಕ್ಕೂ ಮುನ್ನ ಜೀವನ ಮುಗಿಸಿದ್ದಾರೆ’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಅನಂತ ಪ್ರಸಾದ್, ಎಂ.ಎಸ್.ಮೂರ್ತಿ, ಅಜಿತ್, ಶಾ.ಮುರಳಿ, ರಾಮಚಂದ್ರ, ಪವನಾಚಾರ್, ಗೋಪಿ, ದಿನೇಶ್, ಪ್ರಕಾಶ್, ವತ್ಸಲಾ, ಪ್ರೇಮಾ, ಕೃಷ್ಣವೇಣಿ ನಾರಾಯಣ್, ಶ್ರೀನಿವಾಸ್ ಗೌಡ, ಗೋವಿಂದರಾಜ್, ಪುರುಷೋತ್ತಮ, ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.