ADVERTISEMENT

ಸಂಕ್ರಾಂತಿ ಸಡಗರ, ಖರೀದಿ ಭರಾಟೆ

ಸೋಮವಾರ ಬಿಳಿಗಿರಿರಂಗನ ಬೆಟ್ಟದಲ್ಲಿ ರಂಗನಾಥನ ಚಿಕ್ಕ ತೇರು: ಸಿದ್ಧತೆ ಜೋರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 19:31 IST
Last Updated 14 ಜನವರಿ 2023, 19:31 IST
ಚಾಮರಾಜನಗರದ ದೊಡ್ಡಂಗಡಿ ಬೀದಿಯ ಮಳಿಗೆಯೊಂದರಲ್ಲಿ ಶನಿವಾರ ಎಳ್ಳು ಬೆಲ್ಲ, ಸಕ್ಕರೆ ಅಚ್ಚು ಖರೀದಿಯಲ್ಲಿ ತೊಡಗಿರುವ ಜನರು. (ಎಡಚಿತ್ರ) ಬಿಳಿಗಿರಿರಂಗನಬೆಟ್ಟದಲ್ಲಿ ಸೋಮವಾರ ನಡೆಯಲಿರುವ ರಥೋತ್ಸವಕ್ಕೆ ತೇರನ್ನು ಸಜ್ಜುಗೊಳಿಸುತ್ತಿರುವುದು
ಚಾಮರಾಜನಗರದ ದೊಡ್ಡಂಗಡಿ ಬೀದಿಯ ಮಳಿಗೆಯೊಂದರಲ್ಲಿ ಶನಿವಾರ ಎಳ್ಳು ಬೆಲ್ಲ, ಸಕ್ಕರೆ ಅಚ್ಚು ಖರೀದಿಯಲ್ಲಿ ತೊಡಗಿರುವ ಜನರು. (ಎಡಚಿತ್ರ) ಬಿಳಿಗಿರಿರಂಗನಬೆಟ್ಟದಲ್ಲಿ ಸೋಮವಾರ ನಡೆಯಲಿರುವ ರಥೋತ್ಸವಕ್ಕೆ ತೇರನ್ನು ಸಜ್ಜುಗೊಳಿಸುತ್ತಿರುವುದು   

ಚಾಮರಾಜನಗರ/ಯಳಂದೂರು: ಸಂಕ್ರಮಣ ಪರಿಸರದಲ್ಲಿ ಹೊಸತನವನ್ನು ತುಂಬುವ ಹಬ್ಬ, ನೇಸರನ ಪ್ರಥಮ ಕಿರಣಗಳ ಸ್ಪರ್ಶದಿಂದ ವಾತಾವರಣ ಮಹಾ ಚೈತನ್ಯವನ್ನು ಅರಸುವ ಕ್ಷಣ. ಗ್ರಾಮೀಣ ಜನರು ಭೂ ದೇವಿಗೆ, ಫಸಲಿನ ರಾಶಿಗೆ ನೈವೇದ್ಯ ಇಟ್ಟು, ನಮನ ಸಲ್ಲಿಸುವ ಸುದಿನ. ದವಸ ಧಾನ್ಯವನ್ನು ಬಿಳಿಗಿರಿವಾಸನಿಗೆ ಅರ್ಪಿಸಿ, ರಂಗನಾಥನ ತೇರು ಎಳೆಯುವ ಕಾಯಕಕ್ಕೆ ಕಾಯುವ ದಿನ.

ಇಂಗ್ಲಿಷ್‌ ಕ್ಯಾಲೆಂಡರ್‌ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜಿಲ್ಲೆಯಾದ್ಯಂತ ಹಳ್ಳಿ, ಪಟ್ಟಣ ನಗರಗಳಲ್ಲಿ ಜನರು ಸಜ್ಜುಗೊಂಡಿದ್ದಾರೆ.

ಸಂಕ್ರಮಣಕ್ಕೆ ಎಳ್ಳು, ಬೆಲ್ಲ, ಸಿಹಿ ಸಿದ್ಧಪಡಿಸುವ ಕ್ರಿಯೆ ವಾರದಿಂದ ಆರಂಭವಾಗಿದೆ. ಕಡಲೆ, ಬಟಾಣಿ ಹಾಗೂ ಅವರೆಕಾಯಿ ಕೊಂಡು, ಕಿರಾಣಿ ಅಂಗಡಿಗಳಲ್ಲಿ ಪೂಜಾ ಸಾಮಾನು, ಆಹಾರ ಪದಾರ್ಥ ಖರೀದಿಸುವ ಪ್ರಕ್ರಿಯೆ ಶನಿವಾರವೇ ಆರಂಭವಾಗಿದೆ. ಈ ನಡುವೆ ಹೊಲ, ಗದ್ದೆಗಳಲ್ಲಿ ಮರ ಗಿಡಗಳಿಗೆ ಸುಣ್ಣ ಬಳಿದು, ಕೆಮ್ಮಣ್ಣು ಕಟ್ಟು ಹಾಕಿ ನೆರೆಹೊರೆಯವರಿಗೆ ಸಿಹಿ ಹಂಚಲು ಸಂಕ್ರಮಣದ ಸಂಭ್ರಮ ಜೋರಾಗಿ
ನಡೆದಿದೆ.

ADVERTISEMENT

ಸಂಕ್ರಾಂತಿ ಶುಭ ಮುಂಜಾನೆ ಸುಮಂಗಲಿಯರು ಮನೆಯ ಮುಂದೆ ಸೆಗಣಿಯಿಂದ ಅಂಗಳ ಸಾರಿಸುತ್ತಾರೆ. ನಂತರ ಬಣ್ಣದ ರಂಗೋಲಿ ಇಟ್ಟು, ಹೊಸಲು ಪೂಜೆ ಮಾಡುತ್ತಾರೆ. ಮನೆ ಮುಂಭಾಗ ತುಂಬೆ, ಉಗುನಿ, ಅಣ್ಣೆಹೂ ಚುಚ್ಚಿ, ತಳಿರು ತೋರಣ ತೊಡಿಸಿ, ಮನೆಮಂದಿಗೆ ಸ್ನಾನ ಪೂರೈಸಿ ಹೊಸ ಬಟ್ಟೆ ಹಾಕುತ್ತಾರೆ. ನಂತರ ಮನೆಮಂದಿ ಮನೆ ಹೊಸಲಿಗೆ ಅರಿಸಿನ, ಕುಂಕುಮ ಇಟ್ಟು, ಊದಿನಕಡ್ಡಿ, ಕರ್ಪೂರ ಬೆಳಗುತ್ತಾರೆ. ನಂತರ ಸಿಹಿ ಮತ್ತು ಕಿಚಡಿ ತಯಾರಿಸಿ ಸೇವಿಸುವ ಪರಂಪರೆ ಇದೆ.

‘ಕೃಷಿಕರು ದನಕರುಗಳ ಮೈತೊಳೆದು ಸಿಂಗರಿಸುತ್ತಾರೆ. ಹಿಂಗಾರಿನಲ್ಲಿ ಕೊಯ್ಲಾದ ಭತ್ತ, ರಾಗಿ ರಾಶಿಗೆ ಗೊಂಬೆ ದೇವರನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಸಂಜೆ ದನಕರುಗಳಿಗೆ ಕಿಚ್ಚು ಹಾಯಿಸುವ ಸಂತಸ ಈಗಲೂ ಗ್ರಾಮೀಣರಲ್ಲಿ ಇದೆ’ ಎಂದು ಕೃಷಿಕ ಗೌಡಹಳ್ಳಿ ಮಹದೆವಸ್ವಾಮಿ ಹೇಳುತ್ತಾರೆ.

ಖರೀದಿ ಭರಾಟೆ: ನಗರ ಪಟ್ಟಣ ಪ್ರದೇಶಗಳಲ್ಲಿ ಜನರು ಸಂಕ್ರಾಂತಿ ಆಚರಣೆಗಾಗಿ ಶನಿವಾರ ಎಳ್ಳುಬೆಲ್ಲ, ಕಬ್ಬು, ಹೂವುಗಳ ಖರೀದಿಯಲ್ಲಿ ತೊಡಗಿದ್ದರು.

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಹಬ್ಬದ ಆಚರಣೆ ಮಂಕಾಗಿತ್ತು. ಈ ಬಾರಿ ಕೊರೊನಾ ವೈರಸ್‌ ಹಾವಳಿ ಇಲ್ಲದಿರುವುದರಿಂದ ಎಲ್ಲೆಡೆಯೂ ಹಬ್ಬದ ಗೌಜಿ ಮನೆ ಮಾಡಿದೆ.

ಜಿಲ್ಲಾ ಕೇಂದ್ರದಲ್ಲಿ ಜನರು ಶನಿವಾರ ಎಳ್ಳು ಬೆಳ್ಳ, ಸಕ್ಕರೆ ಅಚ್ಚು ಖರೀದಿಸಲು ಮುಗಿ ಬಿದ್ದರು. ವಿವಿಧ ವಿನ್ಯಾಸದ ಸಕ್ಕರೆ ಅಚ್ಚುಗಳು ಗ್ರಾಹಕರನ್ನು ಸೆಳೆದವು. ಸಾಮಾನ್ಯ ಸಕ್ಕರೆ ಅಚ್ಚು ಕೆಜಿಗೆ ₹130–₹140 ಇದ್ದರೆ, ಆಕರ್ಷಕ ವಿನ್ಯಾಸದ ಅಚ್ಚಿನ ಬೆಲೆ ದುಬಾರಿಯಾಗಿತ್ತು. ಎಳ್ಳು ಬೆಲ್ಲ, ಕಬ್ಬು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಬಳಿ ಜನ ಸಂದಣಿ ಇತ್ತು. ಎಳ್ಳು ಬೆಲ್ಲದ ಬೆಲೆ ಕೆಜಿಗೆ ₹120ರಿಂದ ಆರಂಭವಾಗಿದೆ. ಸಣ್ಣ ಪ್ಯಾಕೆಟ್‌ಗಳ ದರ ₹20ರಿಂದ ಶುರುವಾಗಿದೆ.

‘ಕಳೆದ ಎರಡು ವರ್ಷ ಹೆಚ್ಚು ವ್ಯಾಪಾರ ಇರಲಿಲ್ಲ. ಈ ಬಾರಿ ಜನರು ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಲು ಮುಂದಾಗಿದ್ದು, ಸಕ್ಕರೆ ಅಚ್ಚು, ಎಳ್ಳು ಬೆಲ್ಲಕ್ಕೆ ಬೇಡಿಕೆ ಹೆಚ್ಚಾಗಿದೆ’ ಎಂದು ವ್ಯಾಪಾರಿ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮವಾರ ಸಂಕ್ರಾಂತಿ ತೇರು
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥನ ಸನ್ನಿಧಿಯಲ್ಲಿ ಐದು ವರ್ಷಗಳ ಬಳಿಕ ಚಿಕ್ಕಜಾತ್ರೆ ನಡೆಯುತ್ತಿದೆ. ಜ.15 ಜಾತ್ರೆಗೆ ಚಾಲನೆ ಸಿಗಲಿದೆ. ಜ.16 ರಥೋತ್ಸವ ನಡೆಯಲಿದೆ.

ರಥೋತ್ಸವದ ಸಂತಸ ಶನಿವಾರದಿಂದಲೇ ಆರಂಭವಾಗಿದೆ. ಗ್ರಾಮೀಣರು ಭತ್ತದ ತೋರಣ, ಕಬ್ಬಿನಜಲ್ಲೆ, ಧಾನ್ಯಗಳ ತೋರಣ ಅಲಂಕರಿಸಿ, ಸಂಕ್ರಾಂತಿ ತೇರನ್ನು ಸಡಗರ-ಸಂಭ್ರಮಗಳ ನಡುವೆ ಎಳೆಯಲು ಸಿದ್ಧತೆ ನಡೆಸಿದ್ದಾರೆ.

ಭಾನುವಾರ ಸಂಜೆ ಸ್ವರ್ಗದ ಬಾಗಿಲು ತೆರೆಯುವ ಕಾರ್ಯ ನಡೆಯಲಿದೆ. ಸಾಮಾನ್ಯವಾಗಿ ವೈಕುಂಠ ಏಕಾದಶಿಯಂದು ಶ್ರೀನಿವಾಸ, ರಂಗನಾಥರ ದೇವಾಲಯದಲ್ಲಿ ಸ್ವರ್ಗದ ಬಾಗಿಲು ತೆರೆಯುವ ಆಚರಣೆ ನಡೆಯುತ್ತದೆ. ಆದರೆ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಲ್ಲಿ ಚಿಕ್ಕ ಜಾತ್ರೆಯ ಮುನ್ನಾದಿನ ಈ ಆಚರಣೆ ನಡೆಯುತ್ತದೆ.

‘ಜ.16ರ ಬೆಳಿಗ್ಗೆ 10.46 ರಿಂದ 10.57ರೊಳಗೆ ಸಲ್ಲುವ ಮೀನ ಲಗ್ನದ ಕನ್ಯಾಬುಧ ನವಾಂಶದ ಶುಭ ಮುಹೂರ್ತದಲ್ಲಿ ಉತ್ಸವಮೂರ್ತಿಯ ರಥಾರೋಹಣ ಮಹೋತ್ಸವ ಜರುಗಲಿದೆ. ನಂತರ ತೇರಿಗೆ ಚಾಲನೆ ನೀಡಲಾಗುತ್ತದೆ. ಭಕ್ತರ ಜಯಘೋಷಗಳ ನಡುವೆ ರಥೋತ್ಸವ ದೇಗುಲದ ಸುತ್ತಲೂ ಒಂದು ಬಾರಿ ಚಲಿಸುತ್ತದೆ. ಜ.18ರಂದು ಜಾತ್ರೋತ್ಸವ ಪೂಜಾ ಕೈಂಕರ್ಯಗಳು ಸಂಪನ್ನಗೊಳ್ಳಲಿವೆ’ ಎಂದು ದೇವಾಲಯದ ಅರ್ಚಕ ರವಿಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.