ADVERTISEMENT

ಕೃಷಿ ಕಾಯ್ದೆಗಳು ವಾಪಸ್‌; ಮುಖಂಡರು, ರೈತರ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 7:54 IST
Last Updated 20 ನವೆಂಬರ್ 2021, 7:54 IST
ವಾರ್ಡ್ 12–ಸೈಯದ್‌ ಅಬ್ರಾರ್‌ ಅಹಮದ್
ವಾರ್ಡ್ 12–ಸೈಯದ್‌ ಅಬ್ರಾರ್‌ ಅಹಮದ್   

ಭಾರತೀಯರ ಗೆಲುವು

ಭಾರತೀಯರಿಗೆ ದೊರೆತ ಜಯವಿದು. ಹೋರಾಟ, ಜನಾಂದೋಲನಕ್ಕೆ ಯಾವುದೇ ಸರ್ಕಾರ ತಲೆ ಬಾಗಲೇಬೇಕು. ಇದು ಪ್ರಜಾಪ್ರಭುತ್ವದ ಗೆಲುವು. 1947ರಲ್ಲಿ ಬ್ರಿಟಿಷ್‌ ಆಡಳಿತ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಲೆ ಬಾಗಿದಂತೆ ಇಂದು ಮೋದಿ ಸರ್ಕಾರ ರೈತರು, ಜನರ ಹೋರಾಟಕ್ಕೆ ತಲೆ ಬಾಗಿದೆ

–ಅಬ್ರಾರ್‌ ಅಹಮದ್‌, ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ

ADVERTISEMENT

***

ಸೋಲಿನ ಭಯ

ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ಆಂದೋಲನ ರೂಪುಗೊಂಡಿತ್ತು. ನಿರಂತರವಾಗಿ ಹೋರಾಟ ನಡೆಯುತ್ತಿದ್ದರೂ, ಕಾಯ್ದೆಗಳನ್ನು ಸಮರ್ಥಿಸಿಕೊಂಡು ಬಂದಿದ್ದ ಕೇಂದ್ರ ಸರ್ಕಾರ ಈಗ ಮುಂಬರುವ ಚುನಾವಣೆಗಳಲ್ಲಿ ಸೋಲುವ ಭೀತಿಯಿಂದ ಹಿಂಪಡೆದಿದೆ

–ಎನ್‌.ನಾಗಯ್ಯ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ

***

ಒಂದು ವರ್ಷ ಬೇಕಿತ್ತೇ?

ವರ್ಷದಿಂದಲೂ ಹೋರಾಟ ನಡೆದಿತ್ತು. ಪ್ರತಿಭಟನೆ ಹತ್ತಿಕ್ಕಲು ವಾಮ ಮಾರ್ಗ ಅನುಸರಿಸಿದ ಕೇಂದ್ರ ಸರ್ಕಾರ; ಕಾಯ್ದೆಗಳನ್ನು ವಾಪಸ್‌ ಪಡೆಯಲಾಗುವುದು ಎಂದು ಘೋಷಿಸಲು ಒಂದು ವರ್ಷ ಬೇಕಿತ್ತೇ? ಒಂದು ತಿಂಗಳಲ್ಲೇ ಈ ಕೆಲಸ ಮಾಡಬೇಕಿತ್ತು. ಪ್ರಧಾನಿ ಮೋದಿ ಪ್ರತಿಭಟನನಿರತ ರೈತರನ್ನು ಒಮ್ಮೆಯೂ ಭೇಟಿಯಾಗಿಲ್ಲ. ಅವರೊಂದಿಗೆ ಚರ್ಚಿಸಲಿಲ್ಲ.

–ಸಿ.ಎಂ.ಕೃಷ್ಣಮೂರ್ತಿ, ಪಗ್ರತಿಪರ ಸಂಘಟನೆಗಳ ಜಿಲ್ಲಾ ಒಕ್ಕೂಟದ ಸಂಚಾಲಕ

***

ಅನ್ನದಾತರಿಗೆ ಸಂದ ಜಯ

ಅನ್ನದಾತರ 350ಕ್ಕೂ ಹೆಚ್ಚು ದಿನಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಕಾಯ್ದೆ ರದ್ಧತಿಯಿಂದ ಸಣ್ಣ ರೈತರು ನಿಟ್ಟಿಸಿರು ಬಿಡುವಂತಾಗಿದೆ. ಗ್ರಾಮೀಣ ಭಾಗದ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ತಪ್ಪಿದೆ. ಹೋರಾಟದಲ್ಲಿ ಅಸುನೀಗಿದ ಕೃಷಿಕರಿಗೆ ಪರಿಹಾರ ನೀಡಬೇಕು.

–ನಾಗರಾಜ್,ಮಾಂಬಳ್ಳಿ, ಯಳಂದೂರು ತಾಲ್ಲೂಕು

***

ಕಡೆಗಣಿಸಬಾರದು...

ಹೋರಾಟಕ್ಕೆ ಜಯ ಸಿಕ್ಕಿರುವುದು ಸಂತಸದ ಸಂಗತಿ. ರೈತರ ಕಷ್ಟ, ಅವರಿಗೇ ಗೊತ್ತು. ರೈತರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಹೋರಾಟ ಸಾಕ್ಷಿ. ಇಡೀ ದೇಶವನ್ನೇ ಬದಲಾಯಿಸುವ ಶಕ್ತಿ ಅವರಿಗಿದೆ. ಹಾಗಾಗಿ ಯಾರೂ ರೈತರನ್ನು ಕಡೆಗಣಿಸಬಾರದು.

–ಬಸವರಾಜು, ಕೊಳ್ಳೇಗಾಲ

***

ಶ್ಲಾಘನೀಯ

‌ಕೇಂದ್ರ ಸರ್ಕಾರ ಎಂದಿಗೂ ರೈತರ ಪರವಾಗಿದೆ. ರೈತರ ಸುಖ–ದುಃಖಗಳಿಗೆ ಸ್ಪಂದಿಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ, ತನ್ನ ಆಡಳಿತದ ಉದ್ದಗಲಕ್ಕೂ ರೈತಪರ ಯೋಜನೆಗಳನ್ನೇ ರೂಪಿಸಿಕೊಂಡು ಬರುತ್ತಿದೆ. ಮೂರು ಕೃಷಿ ಕಾಯ್ದೆಗಳನ್ನು ರೈತರ ಮನವಿಗೆ ಸ್ಪಂದಿಸಿ ವಾಪಸ್‌ ಪಡೆದಿರುವುದು ಶ್ಲಾಘನೀಯ ವಿಚಾರ.

– ಶಿವಣ್ಣ, ಒಡೆಯರಪಾಳ್ಯ, ಹನೂರು ತಾಲ್ಲೂಕು

***

ಈಗ ಜ್ಞಾನೋದಯ

ಕೇಂದ್ರ ಸರ್ಕಾರಕ್ಕೆ ತಾನು ಮಾಡಿರುವ ತಪ್ಪಿನ ಬಗ್ಗೆ 15 ತಿಂಗಳ ನಂತರ ಜ್ಞಾನೋದಯವಾಗಿದೆ. ನಿರ್ಧಾರ ಸ್ವಾಗತಾರ್ಹ. ಆದರೆ ಬಾಯಿ ಮಾತಿನಲ್ಲಿ ಘೋಷಣೆ ಮಾಡಿದರೆ ಸಾಲದು. ಸಂಸತ್‌ನಲ್ಲಿ ಮೂರು ಕಾಯ್ದೆ ವಾಪಸ್‌ ಪಡೆಯಬೇಕು.

– ಹೊನ್ನೂರು ಬಸವಣ್ಣ, ಸಂತೇಮರಹಳ್ಳಿ

***

ಸೋಲೆಂದು ಭಾವಿಸಬಾರದು

ರೈತರು ನಡೆಸಿದ ಹೋರಾಟಕ್ಕೆ ಜಯವಾಗಿದೆ. ಇದು ತನಗಾದ ಸೋಲು ಎಂದು ಕೇಂದ್ರ ಸರ್ಕಾರ ಭಾವಿಸದೆ, ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡಬೇಕು

– ಕೆ.ಸುಜಾತಾ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ

***

ರೈತರ ನೆರವಿಗೆ ಬರಲಿ

ರೈತರ ಹೋರಾಟಕ್ಕೆ ಸರ್ಕಾರ ಮಣಿದಿರುವುದು ಒಳ್ಳೆಯದೇ. ಆದರೆ, ಈ ಹೋರಾಟದಲ್ಲಿ ನೂರಾರು ರೈತರು ಮೃತಪಟ್ಟಿದ್ದಾರೆ. ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸರ್ಕಾರ ನೆರವು ನೀಡಬೇಕು.

– ದಿಲೀಪ್, ಹಂಗಳ, ಗುಂಡ್ಲುಪೇಟೆ ತಾಲ್ಲೂಕು

***

ಸಂಸತ್ತಿನಲ್ಲಿ ವಾಪಸ್‌ ಪಡೆಯಲಿ

ಮೋದಿ ಮಾತುಗಳನ್ನು ನಂಬುವ ಸ್ಥಿತಿಯಲ್ಲಿ ದೇಶದ ರೈತರು ಹಾಗೂ ಜನರು ಇಲ್ಲ. ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಘೋಷಣೆ ಮಾಡಿದ್ದಾರೆ. ಸಂಸತ್‌ನಲ್ಲಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು.

–ಜಿ.ಎಂ.ಗಾಡ್ಕರ್‌, ಮುಖಂಡ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.