ADVERTISEMENT

ಒಂದು ಗಂಟೆಯಲ್ಲಿ 31 ದೂರುಗಳು

ಜಿಲ್ಲಾಡಳಿತದಿಂದ ಕುಂದು ಕೊರತೆ ಆರಿಸಲು ಫೋನ್‌ ಇನ್‌ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 15:43 IST
Last Updated 15 ಫೆಬ್ರುವರಿ 2020, 15:43 IST
ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಜನರ ಕುಂದು ಕೊರತೆಗಳನ್ನು ಆಲಿಸಿದರು
ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಜನರ ಕುಂದು ಕೊರತೆಗಳನ್ನು ಆಲಿಸಿದರು   

ಚಾಮರಾಜನಗರ: ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಚರಂಡಿ ಅವ್ಯವಸ್ಥೆ, ಖಾಸಗಿ ಲೇವಾದಾರರ ಕಿರುಕುಳ... ಜಿಲ್ಲೆಯ ವಿವಿಧ ಕಡೆಗಳಿಂದ ದೂರವಾಣಿ ಕರೆ ಮಾಡಿದ ನಾಗರಿಕರು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ಮುಂದೆ ಸಮಸ್ಯೆಗಳ ಪಟ್ಟಿಯನ್ನೇ ಮಾಡಿದರು.

ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ 31 ದೂರುಗಳು ದಾಖಲಾದವು.

ತಾಲ್ಲೂಕಿನ ಹರವೆ ಹೋಬಳಿಯ ಕೆರೆಹಳ್ಳಿ ಗ್ರಾಮದಿಂದ ಕರೆ ಮಾಡಿದ್ದ ಮಹೇಶ್‌ ಅವರು, ‘ಗ್ರಾಮದಲ್ಲಿ ಕಿರಾಣಿ ಅಂಗಡಿಗಳಲ್ಲೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಯುವಕರು ದಾರಿತಪ್ಪುವಂತಾಗಿದೆ. ಜತೆಗೆ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ವೇಳೆ ಕಾಂಕ್ರೀಟ್ ರಸ್ತೆಯನ್ನು ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆಯ ಗುಂಡಿಯನ್ನು ಮುಚ್ಚಲಾಗಿಲ್ಲ. ಜನ, ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳನ್ನು ಪತ್ತೆ ಹಚ್ಚಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಅಬಕಾರಿ ಅಧಿಕಾರಿಗಳಿಗೆ ಸೂಚಿಸಲಾಗುವುದು. ರಸ್ತೆ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಲು ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಿಂದ ಕರೆ ಮಾಡಿದ್ದ ನಿವಾಸಿಯೊಬ್ಬರು, ‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. 15 ದಿನಗಳಿಗೆ ಒಮ್ಮೆ ನೀರನ್ನು ಒದಗಿಸಲಾಗುತ್ತಿದೆ. ಇದರಿಂದ ದಿನನಿತ್ಯದ ಕಾರ್ಯಗಳಿಗೆ ತೊಡಕಾಗಿದೆ’ ಎಂದರು.

‘ಸಂಬಂಧ ಅಧಿಕಾರಿಗಳು ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆಯ ವಿಶ್ಲೇಷಣೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅವೈಜ್ಞಾನಿಕ ಚರಂಡಿ: ಕೊಳ್ಳೇಗಾಲದ ಮಹಾಲಕ್ಷ್ಮಿ ಲಾಡ್ಜ್ ರಸ್ತೆಯ ಬಡಾವಣೆ ಭಾಗದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಶೌಚಾಲಯಗಳ ತ್ಯಾಜ್ಯಗಳು ಚರಂಡಿ ನೀರನ್ನು ಸೇರುತ್ತಿವೆ. ಪರಿಸರ ಮಾಲಿನ್ಯದ ಜೊತೆಗೆ ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿಯನ್ನೂ ಇದು ಒಡ್ಡುತ್ತಿವೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೊಳ್ಳೇಗಾಲದಿಂದ ಕರೆ ಮಾಡಿದವರು ಮನವಿ ಮಾಡಿದರು.

‘ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಖಾಸಗಿ ಲೇವಾದೇವಿದಾರರ ಉಪಟಳ ಹೆಚ್ಚಾಗಿದೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ’ ಎಂಬ ದೂರು ಕೂಡ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್ ಅವರು, ‘ಈ ಬಗ್ಗೆ ನನ್ನನ್ನು ಖುದ್ದು ಭೇಟಿ ಮಾಡಿ ವಿವರ ನೀಡಿ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.

ನಗರದ ಗಾಳಿಪುರ 3ನೇ ಬಡಾವಣೆ ನಿವಾಸಿಯೊಬ್ಬರು ಕರೆ ಮಾಡಿ, ‘ವಾಜಪೇಯಿ ವಸತಿ ಯೋಜನೆಯಡಿ ಮನೆ ನಿರ್ಮಿಸಲಾಗಿದೆ. ಆದರೆ ಬೀದಿಗಳಿಗೆ ಮೂಲಸೌಕರ್ಯಗಳಿಲ್ಲ. ಚರಂಡಿ ವ್ಯವಸ್ಥೆ, ರಸ್ತೆಗಳಿಲ್ಲ’ ಎಂದು ದೂರಿದರು. ಜಿಲ್ಲಾಧಿಕಾರಿ ರವಿ ಅವರು ಮಾತನಾಡಿ, ‘ಬಡಾವಣೆಗೆ ಭೇಟಿ ನೀಡಿ, ಅಗತ್ಯ ಸೌಕರ್ಯಗಳನ್ನು ಒದಗಿಸುವ ಕಾಮಗಾರಿ ಕೈಗೊಳ್ಳಲು ನಗರಸಭೆಗೆ ಸೂಚನೆ ನೀಡಲಾಗುವುದು’ ಎಂದರು.

ಬಸ್‌ ಸೇವೆ ಒದಗಿಸಿ:ಹೊಸರಾಮಪುರ ಗ್ರಾಮದಿಂದ ಕರೆ ಮಾಡಿದ ಸಾರ್ವಜನಿಕರೊಬ್ಬರು ‘ಹೊಸರಾಮಪುರ, ಅಂಬಿಗಪುರದಿಂದ ಯಾವುದೇ ಬಸ್‌ಗಳಿಲ್ಲ. ಪಟ್ಟಣಕ್ಕೆ ಬರುವ ರಸ್ತೆ ತಲುಪಲು 5 ಕಿ.ಮೀ ಕ್ರಮಿಸಬೇಕಿದೆ. ಇದರಿಂದ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹೀಗಾಗಿ ಈ ಮಾರ್ಗವಾಗಿ ಬಸ್ ಸೇವೆ ಒದಗಿಸಬೇಕು’ ಎಂದು ಮನವಿ ಮಾಡಿದರು.

ನಗರದ ಬಾಬು ಜಗಜೀವನರಾಂ ಬಡಾವಣೆಯ ನಿವಾಸಿಯೊಬ್ಬರು ಕರೆ ಮಾಡಿ, ‘ಕರಿನಂಜನಪುರದಲ್ಲಿ ಮಂಜೂರಾಗಿರುವ ಸ್ಮಶಾನ ಜಾಗಕ್ಕೆ ಸುತ್ತುಗೋಡೆ ನಿರ್ಮಿಸಿಲ್ಲ. 18ನೇ ವಾರ್ಡಿನಲ್ಲಿ ಸಮುದಾಯ ಶೌಚಾಲಯವಿಲ್ಲ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗಿದೆ’ ಎಂದರು.

ರಸ್ತೆ, ಚರಂಡಿ ದುರಸ್ತಿ, ಅಕ್ರಮ ಮದ್ಯ ಮಾರಾಟ, ಸ್ಮಶಾನ ಒತ್ತುವರಿ, ಬೀದಿ ದೀಪ, ಪಾದಚಾರಿ ರಸ್ತೆ ಕಾಮಗಾರಿ, ಕಾಲುವೆ ಒತ್ತುವರಿ ಕುರಿತು ಸಮಸ್ಯೆಗಳ ಬಗ್ಗೆಯೂ ದೂರುಗಳು ಬಂದವು.

ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

‘ಕಾಲಮಿತಿಯೊಳಗೆ ಪೂರ್ಣಗೊಳಿಸಿ’

ಫೋನ್‌ ಇನ್‌ ಕಾರ್ಯಕ್ರಮದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ‘ಬಂದಿರುವ ದೂರುಗಳನ್ನು ಪರಿಹರಿಸಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸಬಾರದು. ಅಗತ್ಯವಿದ್ದಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಕಾಲಮಿತಿಯೊಳಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.