ADVERTISEMENT

ಪ್ಲಾಸ್ಟಿಕ್ ಮುಕ್ತ ಯರಿಯೂರು ಕಾರ್ಯಕ್ರಮ: ಬಟ್ಟೆ ಬ್ಯಾಗ್ ಬಳಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 14:40 IST
Last Updated 14 ಜೂನ್ 2025, 14:40 IST
ಗುಂಡ್ಲುಪೇಟೆ ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಸಂಪೂರ್ಣ ನಯನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಯರಿಯೂರು ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಭಾಗವಹಿಸಿದ್ದರು
ಗುಂಡ್ಲುಪೇಟೆ ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಸಂಪೂರ್ಣ ನಯನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಯರಿಯೂರು ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಭಾಗವಹಿಸಿದ್ದರು   

ಗುಂಡ್ಲುಪೇಟೆ: ಏಕ ಬಳಕೆ ಪ್ಲಾಸ್ಟಿಕ್ ಉಪಯೋಗಿಸುವುದನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಕೈ ಚೀಲಗಳನ್ನು ಬಳಕೆ ಮಾಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಸಲಹೆ ನೀಡಿದರು.

ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಸಂಪೂರ್ಣ ನಯನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ಯರಿಯೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯರಿಯೂರನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡಲು ಮುಂದಾಗಿರುವುದು ಉತ್ತಮ ವಿಚಾರ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು. ಪ್ಯಾಕ್ ಮಾಡಿದ ಪದಾರ್ಥಗಳ ಬಳಕೆ ಕಡಿಮೆ ಮಾಡಬೇಕು. ಯಾವುದೇ ವಸ್ತುಗಳನ್ನು ಕೊಂಡುತರಲು ಬಟ್ಟೆ ಬ್ಯಾಗ್ ಬಳಸಬೇಕು ಎಂದು ಸಲಹೆ ನೀಡಿದರು.

ಆಧುನಿಕ ಜೀವನ ಕ್ರಮಗಳ ಕಾರಣ ಮಿತಿ ಮೀರುತ್ತಿರುವ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಬೇಕು. ತಂದೆ ಅಥವಾ ತಾಯಿ ಮಕ್ಕಳನ್ನು ವಿದ್ಯಾವಂತರು ಮತ್ತು ಸಂಸ್ಕಾರವಂತರನ್ನಾಗಿ ಮಾಡಲು ದಿನದಲ್ಲಿ ಒಂದು ಗಂಟೆಯಾದರು ಮಕ್ಕಳಿಗೆ ಮೀಸಲಿಡಬೇಕು. ಜೊತೆಗೆ ನಾಗರಿಕ ಸಮಾಜಕ್ಕೆ ತೊಡಕಾದ ಬಾಲ್ಯ ವಿವಾಹಗಳನ್ನು ತಡೆಗಟ್ಟಬೇಕು. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚು ನಡೆಯುತ್ತಿದ್ದು, ಜೀವ ಹಾನಿ ಸಂಭವ ಇರುತ್ತದೆ. ಆದ್ದರಿಂದ ರಸ್ತೆಗೆ ಇಳಿಯುವ ಮೊದಲು ಹೆಲ್ಮೆಟ್ ಧರಿಸಿ, ಮದ್ಯ ವ್ಯಸನದಿಂದ ದೂರವಿರಿ ಎಂದು ಸಲಹೆ ನೀಡಿದರು.

ADVERTISEMENT

ಬಂಡೀಪುರ ಎಸಿಎಫ್ ಎನ್.ಪಿ.ನವೀನ್ ಕುಮಾರ್ ಮಾತನಾಡಿ, ಯರಿಯೂರು ಕಾಡಂಚಿನ ಗ್ರಾಮಗಳಲ್ಲಿ ಒಂದಾಗಿದೆ. ಗ್ರಾಮವು ಹಿಂದೆ ಸ್ವಚ್ಛ, ಸುಂದರವಾಗಿತ್ತು. ಈಗ ಪ್ಲಾಸ್ಟಿಕ್ ಬಳಕೆಯಿಂದ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಅಲ್ಲದೇ ಪ್ಲಾಸ್ಟಿಕ್ ಬಳಕೆ ಜಾನುವಾರುಗಳು, ವನ್ಯಜೀವಿಗಳು ಹಾಗೂ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ. ಈ ಬಗ್ಗೆ ಗ್ರಾಮಸ್ಥರು ಜಾಗೃತರಾಗಬೇಕು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಟೈಲರಿಂಗ್ ತರಬೇತಿಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡ ಮಹಿಳೆಯರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತ ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಿಸಿದರು. ಪ್ಲಾಸ್ಟಿಕ್ ಮುಕ್ತ ಭಾರತದ ನಡಿಗೆಗೆ ಸಹಕರಿಸಲು ಪ್ಲಾಸ್ಟಿಕ್ ಬಳಕೆ ಬಿಡುವುದಾಗಿ ಗ್ರಾಮಸ್ಥರು ಪಣ ತೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಪಿಡಿಒ ಗೋವಿಂದರಾಜು ಸೇರಿದಂತೆ ಶಿಕ್ಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.