ನ್ಯಾಯಾಲಯ ತೀರ್ಪು
ಚಾಮರಾಜನಗರ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಹನೂರು ತಾಲ್ಲೂಕಿನ ನಾಗೇಂದ್ರನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಎರಡು ವರ್ಷಗಳ ಹಿಂದೆ ಬಾಲಕಿಯನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡ ನಾಗೇಂದ್ರ ಪ್ರೀತಿ ಪ್ರೇಮ ಎಂದು ನಂಬಿಸಿದ್ದಾನೆ. ಬಳಿಕ ಆಕೆಯನ್ನು ಅಪಹರಿಸಿಕೊಂಡು ಹೋಗಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯ ಸಂಬಂಧ ಹನೂರು ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿ ಅಂದಿನ ತನಿಖಾಧಿಕಾರಿಗಳಾದ ಸಂತೋಷ್ ಕಶ್ಯಪ್ ಹಾಗೂ ಶಶಿಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಸ್.ಜೆ.ಕೃಷ್ಣ ಅವರು 20 ವರ್ಷ ಕಠಿಣ ಜೈಲು ಸಜೆ, ₹ 25 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದು, ದಂಡ ಪಾವತಿಸಲು ವಿಫಲವಾದರೆ 1 ವರ್ಷ ಸದಾ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಂತ್ರಸ್ತ ಬಾಲಕಿಗೆ ₹ 4 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಪ್ರಾಸಿಕ್ಯುಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.