ಯಳಂದೂರು: ‘ಮನೆಗೆ ಪೊಲೀಸ್ ಸೇವೆ ಒಂದು ಅತ್ಯುತ್ತಮ ಸೇವಾ ಕಾರ್ಯಕ್ರಮವಾಗಿದೆ. ಜನರ ಕುಂದು ಕೊರತೆ, ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಪೊಲೀಸರಿಗೆ ವರದಾನ ಆಗಲಿದೆ’ ಎಂದು ಸಬ್ ಇನ್‌ಸ್ಪೆಕ್ಟರ್ ಎನ್.ಕರಿಬಸಪ್ಪ ತಿಳಿಸಿದರು.
ತಾಲ್ಲೂಕಿನ ಅಗರ-ಮಾಂಬಳ್ಳಿ ಠಾಣೆಗಳ ಗ್ರಾಮಗಳಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಜನರೊಟ್ಟಿಗೆ ಸ್ನೇಹಪರ ಸಂಬಂಧ ಬೆಸೆಯುವ ಮೂಲಕ ಪೊಲೀಸ್ ವ್ಯವಸ್ಥೆ ಗಟ್ಟಿಗೊಳಿಸಬೇಕು. ಇದರಿಂದ ಜನಸ್ನೇಹಿ ಹಾಗೂ ಆಡಳಿತ ಸ್ನೇಹಿಯಾಗಿಸುವ ಕಾರ್ಯಕ್ಕೆ ಪೊಲೀಸರಿಗೆ ಬಲ ಸಿಗಲಿದೆ. ಪೊಲೀಸರೊಡನೆ ನಾಗರಿಕರಲ್ಲಿ ಇರುವ ಹೆದರಿಕೆ ಮತ್ತು ತಪ್ಪು ಗ್ರಹಿಕೆ ಇದರಿಂದ ಕೊನೆಗೊಳ್ಳಲಿದೆ. ಜನರು ಸಹ ಪೊಲೀಸರು ಗ್ರಾಮಕ್ಕೆ ಬಂದಾಗ ಅಂತರ ಕಾಯ್ದುಕೊಳ್ಳದೆ ಆಪ್ತತೆ ಬೆಳೆಸಿಕೊಳ್ಳಬೇಕು’ ಎಂದರು.
‘ಠಾಣೆಗೆ ಬರಲು ಈಗಲೂ ಮಹಿಳೆಯರು ಮತ್ತು ಅನಕ್ಷರಸ್ಥರು ಹಿಂಜರಿಯುತ್ತಾರೆ. ಆದರೆ, ಇನ್ನೂ ಮುಂದೆ ಪೊಲೀಸರೇ ಮನೆಯತ್ತ ಬರಲಿದ್ದಾರೆ. ಬೀಟ್ ಪೊಲೀಸರು ಬಂದಾಗ ಗ್ರಾಮದ ಸಮಸ್ಯೆ ಹೇಳಬೇಕು. ಪ್ರಕರಣಗಳಿಗೆ ಸಂಬಂಧಿಸಿ ಮಾಹಿತಿ ಇದ್ದರೆ ನೀಡಬೇಕು. ಇದರಿಂದ ಬಹುತೇಕ ಸಮಸ್ಯೆ ಮತ್ತು ತಪ್ಪು ಕಲ್ಪನೆ ಮನಸ್ಸಿನಿಂದ ದೂರಾಗುತ್ತದೆ. ಸಿನಿಮಾ ಇಲ್ಲವೇ ಧಾರಾವಾಹಿಯಲ್ಲಿ ತೋರಿಸುವಂತೆ ಆರಕ್ಷರ ಬಗ್ಗೆ ತಪ್ಪು ಕಲ್ಪನೆ ಇರಬಾರದು. ಸುರಕ್ಷತಾ ಭಾವದಿಂದ ಅವರನ್ನು ಕಾಣಬೇಕು’ ಎಂದರು.
ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.