ಚಾಮರಾಜನಗರ: ಲೋಕಸಭಾ ಚುನಾವಣೆ ಅಂಗವಾಗಿ ಸರ್ಕಾರಿ ಅಧಿಕಾರಿ, ನೌಕರರಿಗೆ ಮತದಾನ ಜಾಗೃತಿ ಮೂಡಿಸಲು ಹಾಗೂ ನೈತಿಕ ಮತದಾನ ಬೆಂಬಲಿಸುವಂತೆ ಕೋರಿ ಜಿಲ್ಲೆಯ ಕರ್ತವ್ಯ ನಿರತ 9,400 ಸರ್ಕಾರಿ ನೌಕರರಿಗೆ ಪತ್ರ ಬರೆಯುವ ‘ಅಂಚೆ ಪತ್ರ ಅಭಿಯಾನ’ ಮಂಗಳವಾರ ನಡೆಯಿತು.
ನಗರದ ಜಿಲ್ಲಾಡಳಿತ ಭವನದ ಒಳಾವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅಂಚೆ ಪತ್ರ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಆನಂದ್ ಪ್ರಕಾಶ್ ಮೀನಾ ಅವರ ಸಹಿ ಉಳ್ಳ, ಜಿಲ್ಲೆಯ ಎಲ್ಲ ಸರ್ಕಾರಿ ನೌಕರರಿಗೆ ‘ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ನೈತಿಕ ಮತದಾನ ಮಾಡಿ’ ಎಂದು ಮನವಿ ಮಾಡಿರುವ ಅಂಚೆ ಪತ್ರವನ್ನು ಅನಾವರಣಗೊಳಿಸಲಾಯಿತು.
‘ನಮ್ಮ ಜಿಲ್ಲೆಯ ಹೆಮ್ಮೆಯ ಸರ್ಕಾರಿ ನೌಕರರಾದ ನಿಮಗೆ ಜಿಲ್ಲಾಡಳಿತದ ವತಿಯಿಂದ ಅಭಿನಂದನೆ ಅರ್ಪಿಸುತ್ತೇವೆ. ಅವಿರತವಾಗಿ ದುಡಿದು, ಜಿಲ್ಲೆಯ ಪ್ರಗತಿಗೆ ನೆರವಾಗುವ ನಿಮ್ಮ ಕಾರ್ಯತತ್ಪರತೆ ಅಭಿನಂದನಾರ್ಹ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಮತ್ತಷ್ಟು ಜವಾಬ್ದಾರಿ ನಮ್ಮದಾಗಿರುತ್ತದೆ. ಲೋಕಸಭಾ ಚುನಾವಣೆಯ ಸ್ವಾಗತದಲ್ಲಿ ನಾವಿದ್ದೇವೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಒಂದಿಲ್ಲೊಂದು ರೀತಿಯ ಚುನಾವಣಾ ಜವಾಬ್ದಾರಿ ನಿರ್ವಹಿಸುವ ಸರ್ಕಾರಿ ನೌಕರರಾದ ನಾವು ಕರ್ತವ್ಯದ ನೆಪದಲ್ಲಿ ಮತ ಹಾಕುವುದನ್ನು ಮರೆಯಬಾರದು. ಈ ಬಾರಿ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಹಾಗೂ ತಮ್ಮ ಕುಟುಂಬದ ಅರ್ಹ ಮತದಾರರು ಕೂಡ ಶೇ 100 ರಷ್ಟು ಮತದಾನ ಮಾಡುತ್ತೀರೆಂಬ ನಂಬಿಕೆ ನಮ್ಮದಾಗಿದೆ..., ‘ಚುನಾವಣಾ ಪರ್ವ-ದೇಶದ ಗರ್ವ’ ಬನ್ನಿ ಸುಭದ್ರ ಚಾಮರಾಜನಗರ ನಿರ್ಮಾಣ ಮಾಡೋಣ...’ ಎಂಬ ಸಂದೇಶ ಅಂಚೆ ಪತ್ರದಲ್ಲಿದೆ.
ಇದೇ ವೇಳೆ ಮಾತನಾಡಿದ ಆನಂದ್ ಪ್ರಕಾಶ್ ಮೀನಾ, ಎಲ್ಲ ಸರ್ಕಾರಿ ನೌಕರರು ತಪ್ಪದೆ ಮತದಾನ ಮಾಡಬೇಕು ಎಂಬುದು ಈ ಅಂಚೆ ಪತ್ರ ಅಭಿಯಾನದ ಉದ್ದೇಶ’ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿ, ಜಿಲ್ಲೆಯ ಎಲ್ಲ ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ನರೇಗಾ ಯೋಜನೆಯ ತಾಲ್ಲೂಕು ಸಂಯೋಜಕರು, ಅಧಿಕಾರಿಗಳು, ಇತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.