ADVERTISEMENT

ಮತ್ತೀಪುರ ಸರ್ಕಾರಿ ಶಾಲಾ ಕಟ್ಟಡ ಶಿಕ್ಷಣ ಇಲಾಖೆ ಸುಪರ್ದಿಗೆ

ಪ್ರಜಾವಾಣಿ ವರದಿ ಪರಿಣಾಮ, ಶಾಲೆಗೆ ಶಿಕ್ಷಣಾಧಿಕಾರಿ ಭೇಟಿ, ಕೊಠಡಿಗಳು ಸ್ವಚ್ಛ, ಮುಖಂಡರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 19:30 IST
Last Updated 25 ಆಗಸ್ಟ್ 2020, 19:30 IST
ಮತ್ತೀಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕಟ್ಟಡವನ್ನು ಸ್ವಚ್ಛಗೊಳಿಸಲಾಯಿತು
ಮತ್ತೀಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕಟ್ಟಡವನ್ನು ಸ್ವಚ್ಛಗೊಳಿಸಲಾಯಿತು   

ಕೊಳ್ಳೇಗಾಲ: ಗ್ರಾಮದ ಮುಖಂಡರೊಬ್ಬರುಸ್ವಂತ ಉದ್ದೇಶಕ್ಕೆ ಬಳಸುತ್ತಿದ್ದ, ತಾಲ್ಲೂಕಿನ ಮತ್ತೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳನ್ನು ಶಿಕ್ಷಣ ಇಲಾಖೆ ಮಂಗಳವಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಇತರ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಎರಡೂ ಕೊಠಡಿಗಳನ್ನು ಖಾಲಿ ಮಾಡಿಸಿದರು. ಕೊಠಡಿಗಳು ಹಾಗೂ ಜಗುಲಿಯನ್ನು ತೊಳೆದು ಸ್ವಚ್ಛಗೊಳಿಸಲಾಯಿತು.

ಶಾಲಾ ಕೊಠಡಿಗಳಲ್ಲಿ ಮೇಕೆ, ಕೋಳಿಯನ್ನು ಸಾಕುತ್ತಿರುವ ಬಗ್ಗೆ ‘ಪ್ರಜಾವಾಣಿ’ಯ ಸೋಮವಾರದ (ಆಗಸ್ಟ್‌ 24) ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.

ADVERTISEMENT

ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ಕುಳ್ಳೇಗೌಡ ಎಂಬುವವರು ಶಾಲೆಯ ಹೆಚ್ಚುವರಿ ಕೊಠಡಿಗಳಲ್ಲಿ ಮೇಕೆ, ಕೋಳಿ ಸಾಕಿದ್ದರು. ಅಲ್ಲದೇ, ಜೋಳ, ಕೊಮ್ಮು ಮತ್ತು ಸೌದೆ ಸೇರಿದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಅಲ್ಲದೇ,ಹಕ್ಕಿ ಪಿಕ್ಕಿ ಸಮುದಾಯದ ಒಂದು ಕುಟುಂಬವನ್ನೂ ಅಲ್ಲಿ ಇರಿಸಲಾಗಿತ್ತು.

ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್‌ ಅವರು ಶಾಲೆಗೆ ಭೇಟಿ ನೀಡಿ, ಪೊಲೀಸರನ್ನು ಕರೆಸಿ, ಶಾಲೆಯಲ್ಲಿದ್ದ ಮೇಕೆ, ಕೋಳಿ ಸಾಗಾಣೆ, ಜೋಳ, ಕೊಮ್ಮು ಮತ್ತು ಮರದ ದಿಮ್ಮಿ ಸೇರಿದಂತೆ ಇತರ ವಸ್ತುಗಳನ್ನು ಖಾಲಿ ಮಾಡಿಸಿದರು. ಅಲ್ಲಿ ವಾಸವಿದ್ದ ಹಕ್ಕಿ ಪಿಕ್ಕಿ ಸಮುದಾಯದ ಕುಟುಂಬವನ್ನೂ ಬೇರೆಡೆಗೆ ಕಳುಹಿಸಿದರು.

‘ಇನ್ನು ಮುಂದೆ ಈ ರೀತಿ ಮಾಡಬಾರದು. ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಕುಳ್ಳೇಗೌಡ ಅವರಿಗೆ ಎಚ್ಚರಿಕೆಯನ್ನೂ ನೀಡಿದರು.

‘ಶಾಲೆಯ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು. ಮೇಲಾಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಚಂದ್ರ ಪಾಟೀಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.