
ಚಾಮರಾಜನಗರ: ಜಿಲ್ಲೆಯಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ, ಮಾರ್ಗದರ್ಶನ, ಅಪೌಷ್ಟಿಕತೆ ನಿವಾರಣೆ, ಆತ್ಮವಿಶ್ವಾಸ ವೃದ್ಧಿ, ಸಬಲೀಕರಣ ಹಾಗೂ ಸಮಗ್ರ ಯೋಗಕ್ಷೇಮಕ್ಕೆ ‘ಪ್ರಾಣಸಖಿ’ ಕಾರ್ಯಕ್ರಮ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ಹಳೆಯ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳ ಜಂಟಿ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿರುವ ‘ಪ್ರಾಣಸಖಿ’ ಕಾರ್ಯಕ್ರಮ ಕುರಿತು ಶಾಲಾ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10 ರಿಂದ 19ರ ವಯೋಮಾನದ ಹೆಣ್ಣುಮಕ್ಕಳಲ್ಲಿ ಆರೋಗ್ಯ ಕುರಿತಾಗಿ ಅರಿವಿನ ಕೊರತೆ ಇದೆ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ತಿಳಿವಳಿಕೆಯ ಕೊರತೆ ಕಾಡುತ್ತಿದೆ, ಬಾಲ್ಯವಿವಾಹಕ್ಕೆ ಒತ್ತಡ ಹಾಗೂ ಭಾವನೆಗಳನ್ನು ಮುಕ್ತವಾಗಿ ಅಭಿವ್ಯಕ್ತಪಡಿಸಲು ಅಡ್ಡಿಗಳು ಎದುರಾಗುತ್ತಿವೆ. ಪ್ರಾಣಸಖಿ ಕಾರ್ಯಕ್ರಮ ಅನುಷ್ಠಾನದಿಂದ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ಹದಿಹರೆಯ ಹೆಣ್ಣುಮಕ್ಕಳ ಪಾಲಿಗೆ ನಿರ್ಣಾಯಕ ಹಂತವಾಗಿದ್ದು, ಈ ಅವಧಿಯಲ್ಲಿ ಸರಿಯಾದ ಮಾರ್ಗದರ್ಶನ ದೊರೆತರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷಿತ ಹಾಗೂ ಪೂರಕ ವಾತಾವರಣ ಸೃಷ್ಟಿಸಿ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಜ್ಞಾನ, ಕೌಶಲ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಪ್ರಾಣಸಖಿ ಕಾರ್ಯಕ್ರಮ ನೆರವಾಗಲಿದೆ ಎಂದರು.
ವಾರಕ್ಕೊಮ್ಮೆ ಶಾಲೆಗಳಲ್ಲಿ ಒಂದು ಗಂಟೆ ತರಬೇತಿ ಪಡೆದ ಶಿಕ್ಷಕರು ಮಕ್ಕಳಿಗೆ ಸಂವಾದಾತ್ಮಕ ಪಾತ್ರಾಭಿನಯ, ಚಿತ್ರಕಲೆ ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೂಲಕ ಪೌಷ್ಟಿಕತೆಯ ಮಹತ್ವ, ಮಾನಸಿಕ, ದೈಹಿಕ ಆರೋಗ್ಯ, ಮುಟ್ಟಿನ ನೈರ್ಮಲ್ಯ, ಜೀವನ ಕೌಶಲಗಳ ಕುರಿತು ಮುಕ್ತ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಣಸಖಿ ಕಾರ್ಯಕ್ರಮದ ಮೂಲಕ ಶಾಲೆಗಳಲ್ಲಿ ಹದಿಹರೆಯದ ಬಾಲಕಿಯರಿಗೆ ಮುಟ್ಟಿನ ನೈರ್ಮಲ್ಯ, ವಿಶ್ರಾಂತಿ, ಆರೋಗ್ಯ ಸಂಬಂಧಿತ ಮಾಹಿತಿಗಳನ್ನು ನೀಡಿ ಜಾಗೃತಿ ಮೂಡಿಸಲಾಗುತ್ತದೆ. ಶಾಲೆ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಶುಚಿ ಪ್ಯಾಡ್‌ಗಳನ್ನು ಒದಗಿಸಲಾಗುತ್ತದೆ. ಮುಟ್ಟಿನ ದಿನಗಳಲ್ಲಿ ಹೆಣ್ಣುಮಕ್ಕಳು ನಾಲ್ಕರಿಂದ ಐದುದಿನ ಗೈರಾಗುವುದರಿಂದ ಕಲಿಕೆಗೆ ತೊಂದರೆಯಾಗಲಿದ್ದು, ಹೆಣ್ಣುಮಕ್ಕಳು ಪ್ರತಿದಿನ ಶಾಲೆಗೆ ಬರುವಂತೆ ಪ್ರಾಣಸಖಿ ಕಾರ್ಯಕ್ರಮದ ಮೂಲಕ ನೈರ್ಮಲ್ಯ ಅಭ್ಯಾಸಗಳನ್ನು ತಿಳಿಸಬೇಕು. ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಆಗಾಗ ಬಾಲ್ಯವಿವಾಹ ಪ್ರಕರಣಗಳು ಕಂಡುಬರುತ್ತಿದ್ದು, ಕಳೆದ ವರ್ಷ 97 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಹೆಣ್ಣುಮಕ್ಕಳು 20 ವರ್ಷ ಕಳೆದ ನಂತರವೇ ಮದುವೆಯಾಗುವ ನಿರ್ಧಾರ ಮಾಡಬೇಕು. ಬಾಲ್ಯವಿವಾಹವಾದರೆ ಕಡಿಮೆ ತೂಕದ ಮಕ್ಕಳು ಜನಿಸುತ್ತಾರೆ, ಮಕ್ಕಳಿಗೆ ಹಾಗೂ ಹೆಣ್ಣುಮಕ್ಕಳಿಗೆ ಅಪೌಷ್ಟಿಕತೆ ಕಾಡಲಿದೆ. ಹಾಗಾಗಿ 18 ವರ್ಷ ತುಂಬಿದ ನಂತರವೇ ವಿವಾಹ ಮಾಡಿಕೊಳ್ಳಬೇಕು ಎಂದರು.
ನರೇಗಾ, ಸ್ವಚ್ಛಭಾರತ್ ಮಿಷನ್ ಸೇರಿದಂತೆ ಇತರೆ ಯೋಜನೆಗಳಡಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಹಾಸ್ಟಲ್‌ಗಳಲ್ಲಿ ಓದುವ ಹೆಣ್ಣುಮಕ್ಕಳಿಗೆ ಸಮಸ್ಯೆ ಹೇಳಿಕೊಳ್ಳಲು ಜೊತೆಯಲ್ಲಿ ತಾಯಿ ಇರುವುದಿಲ್ಲ, ಅಂತಹ ಹೆಣ್ಣುಮಕ್ಕಳಿಗೆ ಮಹಿಳಾ ಶಿಕ್ಷಕರೇ ಸ್ನೇಹಿತೆಯಂತೆ ತಂದೆ–ತಾಯಿಯಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರಾಣಸಖಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಜಾನ್ ಶಾಂತಕುಮಾರ್ ಅಪ್ರಾಣಸಖಿ ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದರು. ಡಿಎಚ್‌ಒ ಡಾ.ಎಸ್. ಚಿದಂಬರ, ಡಿಡಿಪಿಐ ಚಂದ್ರಕಾಂತ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಐ.ಎಚ್.ಸಿ.ಆರ್.ಎಫ್ ಸಂಸ್ಥೆಯ ಮಲ್ಲಿಕಾರ್ಜುನ, ವಿಘ್ನೇಶ್, ಕಾರ್ತಿಕೇಯ ಗೋಪಿನಾಥನ್, ಪಲ್ಲವಿ, ಧನಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.