ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 14:40 IST
Last Updated 28 ಮಾರ್ಚ್ 2025, 14:40 IST
ಯುಗಾದಿ ಜಾತ್ರೆಗೆ ಸಿದ್ಧಗೊಂಡಿರುವ ರಥ
ಯುಗಾದಿ ಜಾತ್ರೆಗೆ ಸಿದ್ಧಗೊಂಡಿರುವ ರಥ   

ಮಹದೇಶ್ವರಬೆಟ್ಟ: ಇಲ್ಲಿನ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರೆ ಪ್ರಯುಕ್ತ ಸ್ವಾಮಿಗೆ ಶುಕ್ರವಾರ ಎಣ್ಣೆ ಮಜ್ಜನ ವಿಶೇಷ ಪೂಜೆ ನೆರವೇರಿಸಲಾಯಿತು. ಭಾನುವಾರ ಬೆಳಿಗ್ಗೆ ಮಹಾ ರಥೋತ್ಸವ ಜರುಗಲಿದೆ.

ದೇವಾಲಯದಲ್ಲಿ ಜಾತ್ರೆ ಪ್ರಯುಕ್ತ ಮಾದೇಶ್ವರ ಸ್ವಾಮಿಗೆ ಶುಕ್ರವಾರ ಬೆಳಿಗ್ಗೆ ಗಂಧಾಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ, ಮಹಾ ಮಂಗಳಾರತಿ ಮಾಡಿದ ಬಳಿಕ ಧರ್ಮ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವಾಲಯಕ್ಕೆ ಬಂದಿದ್ದ ಭಕ್ತರು ಎಣ್ಣೆ ಮಜ್ಜನ ಸೇವೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಮಾಡಿದರು. ನಂತರ ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನ, ಪಂಜಿನ ಸೇವೆ, ಧೂಪದ ಸೇವೆ, ಉರುಳು ಸೇವೆಯನ್ನು ಮಾಡಿ ಸಂಜೆ 7ಕ್ಕೆ ನಡೆದ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು.

ಬಿಸಿಲು ಹೆಚ್ಚು ಇದ್ದುದರಿಂದ ಉರುಳು ಸೇವೆ, ಪಂಜಿನ ಸೇವೆ, ಪಾದ ಸೇವೆ ಮಾಡುವ ಭಕ್ತರಿಗೆ ಅನುಕೂಲವಾಗುವಂತೆ ದೇವಾಲಯದ ಹೊರ ಆವರಣದ ಸುತ್ತಲೂ ಆಗಾಗ ನೀರು ಹಾಯಿಸಿ ತಂಪು ಮಾಡಲಾಗುತಿತ್ತು. ಅಲ್ಲದೆ ದಾಸೋಹ ಭವನದಲ್ಲಿ ಭಕ್ತರಿಗೆ ಮಜ್ಜಿಗೆ ಹಾಗೂ ಮೊಸರುಳಿ ನೀಡಲಾಯಿತು.

ADVERTISEMENT

ಮಹದೇಶ್ವರ ಸ್ವಾಮಿಗೆ ಶನಿವಾರ ಅಮಾವಾಸ್ಯೆ ಪೂಜೆ ನಡೆಯಲಿದೆ.

ಮಹಾ ರಥೋತ್ಸವ ನಾಳೆ:

ಯುಗಾದಿ ಮಹಾ ರಥೋತ್ಸವ ಭಾನುವಾರ ಬೆಳಿಗ್ಗೆ 8ರಿಂದ 9ಗಂಟೆವರೆಗಿನ ಶುಭ ಗಳಿಗೆಯಲ್ಲಿ ಜರುಗಲಿದೆ. ಇದಕ್ಕೂ ಮುನ್ನ ಬೇಡಗಂಪಣ ಸಮುದಾಯದ ಬಾಲೆಯರು ಮಹಾರಥಕ್ಕೆ ಬೆಲ್ಲದ ಆರತಿ ಬೆಳಗುತ್ತಾರೆ. ಬಳಿಕ ಬೇವು-ಬೆಲ್ಲ ಮಿಶ್ರಿತ ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡಲಾಗುತ್ತದೆ. ಈಗಾಗಲೇ ರಥವನ್ನು ಸಿಂಗರಿಸಿ ಸಿದ್ಧಗೊಳಿಸಲಾಗಿದೆ.

ವಿಶೇಷ ಪರು ಸೇವೆ ನೆರವೇರಿಸಿದ ಮಹದೇಶ್ವರ ಸ್ವಾಮಿ ಭಕ್ತರು

ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ವಾಹನ ಹಾಗೂ ಪಾದಯಾತ್ರೆ ಮೂಲಕ ಬರುವ ಭಕ್ತರು, ಮಾದಪ್ಪನ ದರ್ಶನ ಪಡೆದು, ರಂಗಮಂದಿರ, ಬಸ್‌ ನಿಲ್ಧಾಣ, ರಾಜಗೋಪುರ ಮುಂಭಾಗ, ದಾಸೋಹ, ಕಲ್ಯಾಣ ಮಂಟಪ ಬಳಿ, ಸಾಲೂರು ಮಠದ ಆವರಣ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಬಿಡಾರ ಹೂಡಿದ್ದಾರೆ.

ಚಿನ್ನ, ಬೆಳ್ಳಿ ತೇರು:

ಬೆಳಿಗ್ಗೆ 8 ಗಂಟೆಗೆ ಬೆಳ್ಳಿ ರಥೋತ್ಸವ ನಡೆಯಿತು. ದೇವಸ್ಥಾನದ ಗರ್ಭ ಗುಡಿ ಸಮೀಪದಲ್ಲಿದ್ದ ಚಿನ್ನದ ತೇರು ಸಂಜೆ 7ಕ್ಕೆ ಹೊರ ಬರುತ್ತಿದ್ದಂತೆ ನೆರೆದಿದ್ದ ಭಕ್ತರು ಮುದ್ದು ಮಾದಪ್ಪನ ಕಣ್ತುಂಬಿಕೊಂಡು ‘ಉಘೇ ಮಾದಪ್ಪ’, ‘ಉಘೇ ಮಾಯಕಾರ’, ‘ಉಘೇ ಮಹತ್ ಮಲ್ಲಯ್ಯ’ ಎಂಬ ಜೈಕಾರ ಹಾಕಿದರು. ಹರಕೆ ಹೊತ್ತ ಭಕ್ತರು ಸೇವೆ ಸಲ್ಲಿಸಿದರು.

ಮಹದೇಶ್ವರ ಸ್ವಾಮಿ

‘ಭಕ್ತರಿಗೆ ಅನುಕೂಲ ಆಗುವಂತೆ ದಾಸೋಹ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ನೂಕು ನುಗ್ಗಲು ಆಗದಂತೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಹಾಗೂ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ’ ಎಂದು ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಎ.ಈ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಚಿನ್ನದ ರಥೋತ್ಸವ ಕಣ್ತುಂಬಿಕೊಂಡ ಭಕ್ತರು

ವಾಹನಗಳಿಗೆ ನಿರ್ಬಂಧ

ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್‌ 29ರ ಬೆಳಿಗ್ಗೆ 6ರಿಂದ ಮಾರ್ಚ್‌ 31ರ ಸಂಜೆ 7 ಗಂಟೆವರೆಗೆ ಕೌದಳ್ಳಿಯಿಂದ ಮಹದೇಶ್ವರ ಬೆಟ್ಟದ ವರೆಗೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.