ADVERTISEMENT

ಮೋದಿ ಬಂದರೆ ಮತ್ತೆ ಚುನಾವಣೆ ನಡೆಯದು: ಪತ್ರಕರ್ತ ಬಸವರಾಜು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 4:41 IST
Last Updated 25 ಏಪ್ರಿಲ್ 2024, 4:41 IST
ಜಿ.ಪಿ.ಬಸವರಾಜು
ಜಿ.ಪಿ.ಬಸವರಾಜು   

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಮತ್ತೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಮುಂದೆ ದೇಶದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ’ ಎಂದು ಪತ್ರಕರ್ತ ಜಿ.ಪಿ.ಬಸವರಾಜು ‌ಬುಧವಾರ ಕಳವಳ ವ್ಯಕ್ತಪಡಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಾಂದೋಲನಗಳ ಮಹಾಮೈತ್ರಿ ಪರವಾಗಿ ಕೇಂದ್ರ ಸರ್ಕಾರದ ವಿರುದ್ಧದ 23 ಆರೋಪಪಟ್ಟಿಗಳನ್ನೊಳಗೊಂಡ ಪುಸ್ತಕ ಪ್ರಕಟಿಸಲಾಗಿದೆ. ಎಲ್ಲ ಆರೋಪಗಳಿಗೆ ಸಾಕ್ಷ್ಯಗಳಿವೆ. ದೇಶದಲ್ಲಿ ಇಂದು ತುರ್ತು ಪರಿಸ್ಥಿತಿಯಂತಹ ಸನ್ನಿವೇಶ ಇದೆ. ಆಡಳಿತದಲ್ಲಿ ಸರ್ವಾಧಿಕಾರಿ ಧೋರಣೆಯಿದೆ. ಕೋಮು ಭಾವನೆಗಳನ್ನು ಬಿತ್ತಲು ಜನ ಸಮುದಾಯವನ್ನು ಬಳಸಿಕೊಳ್ಳಲಾಗುತ್ತಿದೆ. ವಿರೋಧ ಪಕ್ಷಗಳನ್ನು ತುಳಿದು ಹಾಕಲಾಗುತ್ತಿದೆ’ ಎಂದು ಹೇಳಿದರು. 

‘ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಆರ್‌ಎಸ್‌ಎಸ್ ಸಿದ್ಧಾಂತವೇ ಬಿಜೆಪಿ ಸಿದ್ಧಾಂತ ಎಂದು ಹೇಳಿದ್ದಾರೆ. ಅಂದರೆ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಜೋಡಿಸಲಾಗುತ್ತಿದೆ. ಡಾ.ಅಂಬೇಡ್ಕರ್ ಅವರ ಸಂವಿಧಾನವನ್ನು ಗಾಳಿಗೆ ತೂರುವ ಕೆಲಸ 10 ವರ್ಷಗಳಿಂದ ನಡೆಯುತ್ತಿದೆ. ಇಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳಾಗಿ ಕೆಲಸ ಮಾಡುತ್ತಿಲ್ಲ. ಕೇಂದ್ರದ ವಿರುದ್ಧ ದನಿ ಎತ್ತಿದವರ ಮೇಲೆ ಆಯುಧವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಗೆ ದೊಡ್ಡ ಅಪಾಯ ಬಂದೊದಗಿದೆ’ ಹೇಳಿದರು.

ADVERTISEMENT

ಜನಾಂದೋಲನಗಳ ಮಹಾಮೈತ್ರಿಯ ಸಂಘಟನಾ ಕಾರ್ಯದರ್ಶಿ ಉಗ್ರನರಸಿಂಹೇಗೌಡ ಮಾತನಾಡಿ, ‘ಸೀತೆ, ಲಕ್ಷ್ಮಣ, ಹನುಮಂತನ ಜೊತೆ ಇದ್ದ ರಾಮನನ್ನು ಒಂಟಿ ಮಾಡಲಾಗಿದೆ. ಧರ್ಮವನ್ನು ಸ್ವಾರ್ಥಕ್ಕೆ, ರಾಜಕಾರಣಕ್ಕೆ ಬಳಸಿಕೊಳ್ಳುವುದು ನೀಚತನ. ಪ್ರಧಾನಿ ನರೇಂದ್ರಮೋದಿಯವರು ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮದವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಸ್ಥಾನದಲ್ಲಿ ಯಾರೂ ಇಷ್ಟೊಂದು ಕೀಳುಮಟ್ಟಕ್ಕೆ ಇಳಿದಿರಲಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಯಾರೂ ಬಿಜೆಪಿಗೆ ಮತ ಹಾಕಬೇಡಿ ಎಂದು ಅವರು ಮನವಿ ಮಾಡಿದರು.

ಮಹಾಮೈತ್ರಿಯ ಅಬ್ರಾಹಂ ಡಿಸಿಲ್ವಾ, ರಾಜಣ್ಣ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.