ADVERTISEMENT

ಚಾಮರಾಜನಗರ: ರೈತ ನಾಯಕ ಪ್ರೊ ಎಂಡಿಎನ್‌ ಪುಣ್ಯ ಸ್ಮರಣೆ, ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 15:56 IST
Last Updated 3 ಫೆಬ್ರುವರಿ 2021, 15:56 IST
ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಮೃತಭೂಮಿಯಲ್ಲಿರುವ ನಂಜುಂಡಸ್ವಾಮಿ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ನಮನಸಲ್ಲಿಸಿದರು
ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಮೃತಭೂಮಿಯಲ್ಲಿರುವ ನಂಜುಂಡಸ್ವಾಮಿ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ನಮನಸಲ್ಲಿಸಿದರು   

ಚಾಮರಾಜನಗರ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 17 ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬುಧವಾರ ಬೈಕ್‌ ರ‍್ಯಾಲಿ ನಡೆಸಿ, ಹೊಂಡರಬಾಳು ಅಮೃತಭೂಮಿಯಲ್ಲಿರುವ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಸಮಾವೇಶಗೊಂಡ ರೈತ ಮುಖಂಡು ಹಾಗೂ ಕಾರ್ಯಕರ್ತರು, ಬೈಕ್ ರ‍್ಯಾಲಿ ಮೂಲಕ ಹೊಂಡರಬಾಳುವಿನಲ್ಲಿರುವ ಅಮೃತಭೂಮಿಗೆ ತೆರಳಿದರು. ಅಲ್ಲಿ ನಂಜುಂಡಸ್ವಾಮಿ ಹಾಗೂ ಅವರ ಪತ್ನಿಯ ಸಮಾಧಿಗೆ ಹೂವುಗಳನ್ನು ಅರ್ಪಿಸಿ ನಮನ ಸಲ್ಲಿಸಿದರು. ರೈತ ನಾಯಕನ ಪರ ಘೋಷಣೆಗಳನ್ನೂ ಕೂಗಿದರು.

13ರಂದು ವಿಚಾರಗೋಷ್ಠಿ :ನಂತರ ಸಭೆ ಸೇರಿದ ಮುಖಂಡರು ಹಾಗೂ ಕಾರ್ಯಕರ್ತರು ನಂಜುಂಡಸ್ವಾಮಿ ಅವರ ರೈತ ಕಾಳಜಿ, ದೇಶದ ರೈತರ ಈಗಿನ ಪರಿಸ್ಥಿತಿ ಹಾಗೂ ಈಗ ದೇಶದಾದ್ಯಂತ ನಡೆಯುತ್ತಿರುವ ಹೋರಾಟದ ಬಗ್ಗೆ ಪ್ರಸ್ತಾಪಿಸಿದರು.

ADVERTISEMENT

ನಂಜುಂಡಸ್ವಾಮಿ ಅವರ ಜನ್ಮದಿನವಾದ ಫೆ.13ರಂದು ಚಾಮರಾಜನಗರ ಹಾಗೂ ಮೈಸೂರಿನ ರೈತರು ಒಟ್ಟಾಗಿ ವಿಚಾರಗೋಷ್ಠಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೇ, ಸರ್ಕಾರಗಳು ಜಾರಿಗೊಳಿಸುತ್ತಿರುವ ರೈತ ವಿರೋಧಿ ಕಾಯ್ದೆಗಳ ಬಗ್ಗೆ ಹಳ್ಳಿ ಹಳ್ಳಿಗಳಿಗೂ ತೆರಳಿ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು.

ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಎಂ.ಮಹೇಶ್‌ ಪ್ರಭು, ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು, ಕಾರ್ಯದರ್ಶಿ ಶಾಂತಮಲ್ಲಪ್ಪ. ಉಪಾಧ್ಯಕ್ಷ ಮಹದೇವಪ್ಪ, ಮುಖಂಡರಾದ ಚಿನ್ನಸ್ವಾಮಿಗೌಂಡರ್‌, ಹೆಗ್ಗವಾಡಪುರ ಮಹೇಶ್‌ ಕುಮಾರ್‌, ಹಂಗಳ ಮಧು, ದಿಲೀಪ್‌, ಗೌಡೇಗೌಡ ಮತ್ತಿತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.