ಚಾಮರಾಜನಗರ: ರಾಜ್ಯದೆಲ್ಲೆಡೆ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಫೈನಾನ್ಸ್ ಕಂಪೆನಿಗಳು ನಿಯಮಬಾಹಿರವಾಗಿ ಹೆಚ್ಚು ಬಡ್ಡಿಗೆ ಸಾಲ ವಿತರಿಸಿ ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿವೆ ಎಂದು ಕರ್ನಾಟಕ ಸೇನಾಪಡೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಮೈಕ್ರೋ ಫೈನಾನ್ಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ಫೈನಾನ್ಸ್ ಕಂಪೆನಿಗಳು ಸಾರ್ವಜನಿಕರಿಗೆ ಸಾಲ ಪಡೆಯುವಂತೆ ಪ್ರೇರೇಪಿಸುತ್ತಿದ್ದು ಹೆಚ್ಚಿನ ಬಡ್ಡಿಗೆ ಸಾಲ ನೀಡಿ ಸಂಕಷ್ಟಕ್ಕೆ ಸಿಲುಕಿಸುತ್ತಿವೆ’ ಎಂದರು.
‘ಆರ್ಥಿಕ ಸಮಸ್ಯೆಗೆ ಸಿಲುಕಿ ಸಾಲ ಮರುಪಾವತಿ ವಿಳಂಬ ಮಾಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿವೆ. ಸಾಲ ವಸೂಲಾತಿ ಏಜೆಂಟರ ಕಿರುಕುಳದಿಂದ ರಾಜ್ಯದಾದ್ಯಂತ ಹಲವು ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿವೆ. ನೂರಾರು ಕುಟುಂಬಗಳು ಊರು ಬಿಟ್ಟಿವೆ. ಹಲವು ಕುಟುಂಬಗಳು ಕಿರುಕುಳ ಅನುಭವಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜನರಿಗೆ ಕಿರುಕುಳ ನೀಡುತ್ತಿರುವ ಫೈನಾನ್ಸ್ ಕಂಪೆನಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಕಂಪೆನಿಗಳಿಂದ ಸಾಲ ಪಡೆದವರ ಹಾಗೂ ಕಿರುಕುಳ ಅನುಭವಿಸುತ್ತಿರುವವರಿಗೆ ಜಿಲ್ಲಾಡಳಿತ ಧೈರ್ಯ ತುಂಬಬೇಕು. ಊರು ಬಿಡದಂತೆ, ಆತ್ಮಹತ್ಯೆ ಮಾಡಿಕೊಳ್ಳದಂತೆ ಸಾಂತ್ವನ ಹೇಳಬೇಕು. ಮೈಕ್ರೋ ಫೈನಾನ್ಸ್‌ಗಳ ಸಾಲ ರದ್ದುಪಡಿಸಿ ಬ್ಯಾಂಕ್ ಮೂಲಕ ಸಾಲ ವಿತರಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಿಜಧ್ವನಿ ಗೋವಿಂದ, ಪಣ್ಯದಹುಂಡಿ ರಾಜು, ನಂಜುಂಡಶೆಟ್ಟಿ, ವೀರಭದ್ರ, ಆಟೋ ನಾಗೇಶ್, ಶಿವಣ್ಣ, ಸಿದ್ದರಾಜು, ರಾಚಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.