ADVERTISEMENT

ಚಾಮರಾಜನಗರ: ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಾಳಿಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 14:31 IST
Last Updated 18 ಡಿಸೆಂಬರ್ 2021, 14:31 IST
ಮಹಾರಾಷ್ಟ್ರದಲ್ಲಿ ಕನ್ನಡಿಗರು ಹಾಗೂ ರಾಜ್ಯದವರ ವಾಹನಗಳ ಮೇಲೆ ದಾಳಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಚಾಮರಾಜನಗರದಲ್ಲಿ ಶನಿವಾರ ರಾತ್ರಿ ಪಂಜಿನ ಮೆರವಣಿಗೆ ಮಾಡಿದರು
ಮಹಾರಾಷ್ಟ್ರದಲ್ಲಿ ಕನ್ನಡಿಗರು ಹಾಗೂ ರಾಜ್ಯದವರ ವಾಹನಗಳ ಮೇಲೆ ದಾಳಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಚಾಮರಾಜನಗರದಲ್ಲಿ ಶನಿವಾರ ರಾತ್ರಿ ಪಂಜಿನ ಮೆರವಣಿಗೆ ಮಾಡಿದರು   

ಚಾಮರಾಜನಗರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿಕನ್ನಡಧ್ವಜ ಸುಟ್ಟ, ಬೆಳಗಾವಿಯಲ್ಲಿ ಕಲ್ಲು ತೂರಾಟ, ಮಹಾರಾಷ್ಟ್ರದಲ್ಲಿ ಕನ್ನಡಿಗರು, ಅವರ ವಾಹನಗಳ ಮೇಲೆ ಶಿವಸೇನೆ ಹಾಗೂ ಎಂಇಎಸ್‌ ಕಾರ್ಯಕರ್ತರು ದಾಳಿ ನಡೆಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಶನಿವಾರ ರಾತ್ರಿ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ಶಿವಸೇನೆ ಹಾಗೂ ಎಂಇಎಸ್‌ ಸಂಘಟನೆ ನಿಷೇಧಿಸಬೇಕು, ಕನ್ನಡ ಧ್ವಜ ಸುಟ್ಟವರು, ಕನ್ನಡಿಗರ ಮೇಲೆ ದಾಳಿ ನಡೆಸಿದವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

ಚಾಮರಾಜೇಶ್ವರ ಉದ್ಯಾನದ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಪಂಜುಗಳನ್ನು ಹಿಡಿದು ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಕೆಲ ಕಾಲ ರಸ್ತೆ ತಡೆ ನಡೆಸಿ, ಎಂಇಎಸ್‌, ಶಿವಸೇನೆ, ಮಹಾರಾಷ್ಟ್ರ ಸರ್ಕಾರ, ರಾಜ್ಯ ಸರ್ಕಾರ, ವಿರೋಧ ಪಕ್ಷಗಳ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ ಅವರು ಮಾತನಾಡಿ, ‘ಮಹಾರಾಷ್ಟ್ರದಲ್ಲಿ ಕನ್ನಡದ ಧ್ವಜ ಸುಡುತ್ತಿದ್ದಾರೆ. ಕನ್ನಡಿಗರು, ರಾಜ್ಯದ ವಾಹನಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್‌ ಪುಂಡರು ಸರ್ಕಾರಿ ವಾಹನಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ, ನಮ್ಮ ರಾಜ್ಯದಲ್ಲಿ ಸರ್ಕಾರ ಇದೆಯೋ ಸತ್ತು ಹೋಗಿದೆಯೋ ಎಂಬ ಅನುಮಾನ ಕಾಡುತ್ತಿದೆ. ಸರ್ಕಾರ ಜೀವಂತವಾಗಿದ್ದರೆ ಇಂತಹ ಕೃತ್ಯ ನಡೆಯಲು ಬಿಡುತ್ತಿರಲಿಲ್ಲ. ಸರ್ಕಾರವು ಮರಾಠಿಗರ ಮತಬ್ಯಾಂಕ್‌ಗಾಗಿ ಇಡೀ ರಾಜ್ಯವನ್ನು ಬಲಿ ಕೊಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರರು.

‘ಮರಾಠಿ ಪುಂಡರು ಬೆಳಗಾವಿಗೆ ಬಂದು ವಾಹನಗಳನ್ನು ದ್ವಂಸ ಮಾಡಿದ್ದಾರೆ. ಕನ್ನಡಿಗ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ್ದಾರೆ. ಇಂತಹ ಪ್ರಕರಣ ಬೇರೆ ರಾಜ್ಯದಲ್ಲಿ ನಡೆದಿದ್ದರೆ, ದೊಡ್ಡ ಹೋರಾಟವೇ ನಡೆಯುತ್ತಿತ್ತು. ಸರ್ಕಾರ ಮಾತ್ರವಲ್ಲ, ವಿರೋಧ ಪಕ್ಷಗಳು ಕೂಡ ಸುಮ್ಮನಿವೆ. ಎಲ್ಲ ಪಕ್ಷಗಳು ರಾಜ್ಯವನ್ನು ಮಾರಾಟ ಮಾಡಲು, ಬಲಿ ಕೊಡಲು ಹೊರಟಿರುವೆ’ ಎಂದು ಕಿಡಿ ಕಾರಿದರು.

ಕನ್ನಡ ಸಂಘಟನೆಗಳ ಒಕ್ಕೂಟದ ಶಾ.ಮುರಳಿ‌ ಅವರು ಮಾತನಾಡಿ, ‘ಮಹಾಜನ ವರದಿಯನ್ನು ಎಲ್ಲ ಸರ್ಕಾರಗಳು ಒಪ್ಪಿಕೊಂಡಿವೆ. ಆದರೆ ಎಂಇಎಸ್‌ನವರು ಖ್ಯಾತೆ ತೆಗೆಯುತ್ತಿದ್ದಾರೆ. ಬೆಳಗಾವಿಗೆ ಬಂದು ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ. ಕನ್ನಡಿಗರು ಮನಸ್ಸು ಮಾಡಿದರೆ ಗೋಕಾಕ್, ಕಾವೇರಿ ಚಳವಳಿ ಮಾದರಿಯಲ್ಲಿ ತಕ್ಕ ಪಾಠಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಶಿವಶಂಕರ ನಾಯಕ, ನಿಜಧ್ವನಿ ಗೋವಿಂದರಾಜು, ಗಡಿನಾಡ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ತಾಂಡವಮೂರ್ತಿ, ಶ್ರೀನಿ ಲಿಂಗರಾಜು, ನಾಗರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.