ADVERTISEMENT

ಅಕ್ರಮ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸಿ: ನಮ್ಮ ಕನ್ನಡಿಗರ ವಿಜಯಸೇನೆ

ನಮ್ಮ ಕನ್ನಡಿಗರ ವಿಜಯಸೇನೆ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 8:11 IST
Last Updated 30 ಜನವರಿ 2026, 8:11 IST
‌ಜಿಲ್ಲೆಯಲ್ಲಿ ಅಕ್ರಮ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ನಮ್ಮ ಕನ್ನಡಿಗರ ವಿಜಯಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು
‌ಜಿಲ್ಲೆಯಲ್ಲಿ ಅಕ್ರಮ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ನಮ್ಮ ಕನ್ನಡಿಗರ ವಿಜಯಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಚಾಮರಾಜನಗರ: ರಾಜ್ಯ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನಮ್ಮ ಕನ್ನಡಿಗರ ವಿಜಯಸೇನೆ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಮೆರವಣಿಗೆಯ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ಅಕ್ರಮ ಖಾಸಗಿ ಶಾಲೆಗಳ ವಿರುದ್ಧ ಘೋಷಣೆ ಕೂಗಿ ಬ್ಯಾನರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಸೇನೆಯ ಜಿಲ್ಲಾಧ್ಯಕ್ಷ ಮಂಜು ಎಂ.ನಾಯಕ ಮಾತನಾಡಿ, ಖಾಸಗಿ ಶಾಲೆಗಳನ್ನು ನಡೆಸಲು ಅನ್ಯಕ್ರಾಂತ, ಭೂಪರಿವರ್ತನೆ ಹಾಗೂ ಅಗ್ನಿ ಶಾಮಕದಳದ ವತಿಯಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆಯಬೇಕು. ಆದರೆ, ಜಿಲ್ಲೆಯಲ್ಲಿ ಹಲವು ಖಾಸಗಿ ಶಾಲೆಗಳು ಯಾವುದೇ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಶಾಲೆಗಳನ್ನು ನಡೆಸುತ್ತಿದ್ದು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲೆಯಲ್ಲಿ ಶೇ 70ರಷ್ಟು ಖಾಸಗಿ ಶಾಲೆಗಳು ಅಕ್ರಮವಾಗಿ ನಡೆಯುತ್ತಿದ್ದರೂ ಕಾಲಕಾಲಕ್ಕೆ ಅನುಮತಿ ನೀಡುತ್ತಾ ಬಂದಿರುವ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು. ಇಲ್ಲದಿದ್ದರೆ ವಿಧಾನಸೌಧ ಮುಂಭಾಗ ಸಂಘಟನೆ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ನಮ್ಮ‌ ಕನ್ನಡಿಗರ ವಿಜಯಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ  ವಿಜಯಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್‌, ಕಾರ್ಯದರ್ಶಿ ಶಿವು ಕೆಲ್ಲಂಬಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ, ಶಿವರಾಜ್, ಗಿರೀಶ್, ರಂಗಸ್ವಾಮಿ, ಎಸ್.ಪಿ.ಮಹೇಶ್, ವಾಸು ಹೊಂಡರಬಾಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.